ಮೈಸೂರು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ: ಸಚಿವ ಈಶ್ವರ್ ಖಂಡ್ರೆ ಘೋಷಣೆ
ಮೈಸೂರಿನ ಪೊಲೀಸ್ ಅಕಾಡೆಮಿ ಸಭಾಂಗಣದಲ್ಲಿ 69ನೇ ವನ್ಯಿಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಸಾಂಸ್ಕೃತಿಕ ನಗರಿ ಮೈಸೂರನ್ನು ‘ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ‘ ಎಂದು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಶನಿವಾರ ಘೋಷಣೆ ಮಾಡಿದ್ದಾರೆ.
ಮೈಸೂರು, ಅಕ್ಟೋಬರ್ 07: ಸಾಂಸ್ಕೃತಿಕ ನಗರಿ ಮೈಸೂರನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ (Eshwar Khandre) ಶನಿವಾರ ಘೋಷಣೆ ಮಾಡಿದ್ದಾರೆ. ಮೈಸೂರಿನ ಪೊಲೀಸ್ ಅಕಾಡೆಮಿ ಸಭಾಂಗಣದಲ್ಲಿ 69ನೇ ವನ್ಯಿಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಘೋಷಣೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸಚಿವರಾದ ಈಶ್ವರ ಖಂಡ್ರೆ, ಡಾ.ಹೆಚ್.ಸಿ.ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ರವಿಶಂಕರ್, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾದು ಸೇರಿ ಹಲವರು ಭಾಗಿ ಆಗಿದ್ದರು.
ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಿಸಿರುವುದು ಸ್ವಾಗತಾರ್ಹ: ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಿಸಿರುವುದು ಸ್ವಾಗತಾರ್ಹ. ಅರಣ್ಯ ಬೆಳೆಸಿ, ವನ್ಯಜೀವಿ ರಕ್ಷಣೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಅರಣ್ಯ ಉಳಿದರೆ ಮನುಕುಲ ಉಳಿಯಲಿದೆ. ಪ್ರಸ್ತುತ 33% ಅರಣ್ಯ ಪ್ರದೇಶ ಇದ್ದರೆ ಪ್ರಕೃತಿ ಸಮತೋಲನ ಸಾಧ್ಯ. ಮನುಷ್ಯನ ದುರಾಸೆ, ದುರ್ಬುದ್ದಿಯಿಂದ ಅರಣ್ಯ ಪ್ರದೇಶ ಕಡಿಮೆಯಾಗಿದೆ ಎಂದರು.
ಇದನ್ನೂ ಓದಿ: ಮಹಿಷ ದಸರಾ ಮುಗಿಯುವವರೆಗೆ ಸಂಸದ ಪ್ರತಾಪ್ ಸಿಂಹರನ್ನ ಬಂಧಿಸಿ: ಮಾಜಿ ಮೇಯರ್ ಪುರುಷೋತ್ತಮ
ರಾಜ್ಯದಲ್ಲಿ ಆನೆ, ಹುಲಿಗಳ ಸಂತತಿ ಹೆಚ್ಚಾಗಿರುವುದು ಹೆಮ್ಮೆಯ ಸಂಗತಿ. ಮನುಷ್ಯ ಪ್ರಾಣಿಗಳ ಜೊತೆ ಸಹಜೀವನ ನಡೆಸುವುದು ಅನಿವಾರ್ಯ. ಇತ್ತೀಚೆಗೆ ಚಿರತೆ ಹಾವಳಿ ಹೆಚ್ಚಾಗುತ್ತಿದೆ. ಚಿರತೆ ಬರದಂತೆ ಅರಣ್ಯ ಇಲಾಖೆ ಸಿಬ್ಬಂದಿ ನೋಡಿಕೊಳ್ಳಬೇಕು. ಪರಿಸರಕ್ಕೆ ಪೂರಕವಾದ ಪದಾರ್ಥ ಬಳಸಲು ರೂಢಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಬರುವ ವರ್ಷ 10 ಕೋಟಿ ಸಸಿಗಳನ್ನು ನೆಡುವ ಗುರಿ: ಸಚಿವ ಈಶ್ವರ್ ಖಂಡ್ರೆ
ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ರಾಜ್ಯಾದ್ಯಂತ ಈ ವರ್ಷ 5 ಕೋಟಿ ಸಸಿಗಳನ್ನು ನೆಡಲಾಗಿದೆ. ಮುಂದಿನ ವರ್ಷ 10 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಿದ್ದೇವೆ. ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹಾಸನ ಸೇರಿ ಇತರೆಡೆ ವನ್ಯಜೀವಿ, ಮಾನವ ಸಂಘರ್ಷ ತೀವ್ರವಾಗಿದೆ. ಮಾನವ ವನ್ಯಜೀವಿ ಸಂಘರ್ಷ ತಡೆಗಟ್ಟುವುದು ಸವಾಲಿನ ಕೆಲಸ. ಆನೆ, ಹುಲಿ, ಚಿರತೆ ದಾಳಿಯಿಂದ ಮನುಷ್ಯರು ಸಾವನ್ನಪ್ಪುತ್ತಿದ್ದಾರೆ. ಕಾಡು ಪ್ರಾಣಿಗಳ ದಾಳಿ ತಡೆಯೊಡ್ಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅರಣ್ಯ ಒತ್ತುವರಿ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಲಿಂಗಾಯತರ ಕಡಗಣನೆ: ಇಂದು ಮೈಸೂರಿನಲ್ಲಿ ನಡೆಯುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಭಾಗಿ
69ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ರಂಗನತಿಟ್ಟು ಪಕ್ಷಿಧಾಮ, ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಯಿತು. ಇದೇ ವೇಳೆ ಕೊಕ್ಕರೆ ಬೆಳ್ಳೂರು ಪಕ್ಷಿಧಾಮದ ಅಂಚೆ ಲಕೋಟೆ ಹಾಗೂ ತಾಂತ್ರಿಕ ವರದಿಯನ್ನು ಮುಖ್ಯಮಂತ್ರಿ ಹಾಗೂ ಗಣ್ಯರು ಬಿಡುಗಡೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:42 pm, Sat, 7 October 23