
ಮೈಸೂರು, ಫೆಬ್ರವರಿ 09: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಕುಂಭಮೇಳ (Prayagraj Kumbamela) ಕೋಟ್ಯಾಂತರ ಜನರನ್ನು ಸೆಳೆಯುತ್ತಿದೆ. ಪ್ರಯಾಗ್ ರಾಜ್‌ನ ತ್ರಿವೇಣಿ ಸಂಗಮದಲ್ಲಿ ಮಿಂದು ಭಕ್ತರು ಪುನೀತರಾಗುತ್ತಿದ್ದರೆ. ಕನ್ಯಾಕುನಾರಿಯಿಂದ ಕಾಶ್ಮೀರದವರೆಗೂ ಎಲ್ಲರ ಬಾಯಲ್ಲೂ ಪ್ರಯಾಗ್ ರಾಜ್ ಕುಂಭಮೇಳದ ವೈಭವದ ಮಾತುಗಳು ಚರ್ಚೆಗಳು ಜೋರಾಗಿದೆ. ಈ ಮಧ್ಯೆ ಇತ್ತ ದಕ್ಷಿಣ ಭಾರತದ ಮೈಸೂರು (Mysore) ಜಿಲ್ಲೆಯ ಟಿ.ನರಸೀಪುರದ (T Narasipura) ತ್ರಿವೇಣಿ ಸಂಗಮದಲ್ಲಿ (Triveni Sangama) ನಡೆಯುವ ಕುಂಭಮೇಳ ನಾಳೆಯಿಂದ ಆರಂಭವಾಗುತ್ತಿದೆ.
ರಾಜ್ಯದ ಜೀವಧಾತೆಯರಾದ ಕಾವೇರಿ, ಕಪಿಲೆ ಹಾಗೂ ಸ್ಪಟಿಕ ಸರೋವರದ ಸಂಗಮ ಸ್ಥಾನವೇ ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಗುಂಜಾನರಸಿಂಹ ಸ್ವಾಮಿ ದೇಗುಲ. ಜೀನನದಿ ಕಾವೇರಿ ತಲಕಾವೇರಿಯಲ್ಲಿ ಜನ್ಮತಾಳಿ ಭಾಗಮಂಡಲ ಸಿದ್ದಾಪುರವನ್ನು ದಾಟಿ ಶ್ರೀರಂಗಸಮುದ್ರಕ್ಕೆ ಬಂದು ಮುಂದೆ ಕುಶಾಲನಗರ ಶಿರಂಗಲ, ರಾಮನಾಥಪುರ, ಬಸವಾಪಟ್ಟಣ, ರುದ್ರಪಟ್ಟಣ, ಸಾಲಿಗ್ರಾಮ, ಚುಂಚನಕಟ್ಟೆ, ಕನ್ನಂಬಾಡಿ (ಕೃಷ್ಣರಾಜಸಾಗರ) ದಾಟಿ ರಂಗನತಿಟ್ಟು ಎಂಬ ಪಕ್ಷಿಧಾಮಕ್ಕೆ ಎಂಟ್ರಿ ಕೊಟ್ಟು ಪಶ್ಚಿಮವಾಹಿನಿಯಾಗಿ ಶ್ರೀರಂಗಪಟ್ಟಣದ ಮೂಲಕ ತಿರುಮಕೂಡಲು ನರಸೀಪುರಕ್ಕೆ ಬರುತ್ತಾಳೆ. ಮತ್ತೊಂದು ಕಡೆ ಕಪಿಲೆ ಸಹ ಕೇರಳದ ವೈನಾಡಿನಲ್ಲಿ ಹುಟ್ಟಿ ಹೆಚ್ಡಿ ಕೋಟೆ ಕಬಿನಿ ಜಲಾಶಯದ ಮೂಲಕ ಹರಿದು ನಂಜನಗೂಡು ಮೂಲಕ ಟಿ ನರಸೀಪುರಕ್ಕೆ ಆಗಮಿಸುತ್ತಾಳೆ. ಮತ್ತೊಂದು ಗುಪ್ತಗಾಮಿನಿ ಸ್ಪಟಿಕ ಸರೋವರ ಕಾವೇರಿ ಕಪಿಲೆಯನ್ನು ಸೇರುತ್ತದೆ. ಈ ಮೂಲಕ ತಿರುಮಕೂಡಲ ನರಸೀಪುರ ಪವಿತ್ರ ನದಿಗಳ ಸಂಗಮ ಸ್ಥಾನವಾಗಿದೆ.
1989 ರಿಂದ ಪ್ರತಿ 3 ವರ್ಷಗಳಿಗೊಮ್ಮೆ ಇಲ್ಲಿ ಕುಂಭಮೇಳ ನಡೆಸಿಕೊಂಡು ಬರಲಾಗುತ್ತಿದೆ. 2022ರಲ್ಲಿ ಕೋವಿಡ್ ಕಾರಣದಿಂದ ಕುಂಭಮೇಳ ನಡೆದಿರಲಿಲ್ಲ. ಇದೀಗ 6 ವರ್ಷದ ಬಳಿಕ ಕುಂಭಮೇಳ ನಡೆಯುತ್ತಿದೆ. ಈ ಬಾರಿಯ ಕುಂಭಮೇಳಕ್ಕೆ ಟಿ.ನರಸೀಪುರ ಸಜ್ಜಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಪವಿತ್ರ ತೀರ್ಥ ಸ್ನಾನಕ್ಕಾಗಿ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಕಾವೇರಿ, ಕಪಿಲೆ ಮತ್ತು ಸ್ಪಟಿಕ ಸರೋವರಗಳು ಸೇರುವ ತ್ರಿವೇಣಿ ಸಂಗಮದಲ್ಲಿ ಮೂರು ಕಡೆ ಸ್ನಾನಘಟ್ಟದ ವ್ಯವಸ್ಥೆ ಮಾಡಲಾಗಿದೆ.
ಭಕ್ತರ ಪವಿತ್ರ ಸ್ನಾನಕ್ಕಾಗಿ ಅಗಸ್ತೇಶ್ವರ, ಗುಂಜಾ ನರಸಿಂಹಸ್ವಾಮಿ ಮತ್ತು ಭಿಕ್ಷೇಶ್ವರ ಸ್ವಾಮಿ ದೇವಾಲಯದ ಬಳಿ ಸ್ನಾನಘಟ್ಟ ನಿರ್ಮಿಸಲಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಕಾರಣ, 6 ಅಡಿ ಆಳವಿರುವುದರಿಂದ ವೃದ್ಧರು ಮತ್ತು ಮಕ್ಕಳು ಮುಳುಗದಂತೆ ಕ್ರಮ ವಹಿಸಲಾಗಿದೆ. ಸ್ನಾನ ಮಾಡುವವರು 3 ಅಡಿ ಆಳದವರೆಗೆ ಹೋಗಿ ಸ್ನಾನ ಮಾಡಲು ಅವಕಾಶವಿದ್ದು, ಮೂರು ಅಡಿ ಆಳದ ನಂತರ ಬ್ಯಾರಿಕೇಡ್ ನಿರ್ಮಾಣ ಮಾಡಿ, ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಈ ಬಾರಿ ತೇಲುವ ಸೇತುವೆ ನಿರ್ಮಾಣ ಮಾಡಿಲ್ಲ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ರಂಗನತಿಟ್ಟು ಪಕ್ಷಿಧಾಮದಿಂದ 2, ಸ್ಥಳೀಯವಾಗಿ 12 ರೆಸಾರ್ಟ್‌ಗಳಿಂದ 4 ಬೋಟ್‌ಗಳನ್ನು ತರಿಸಲಾಗಿದೆ. ಜೊತೆಗೆ ಈಜು ತಜ್ಞರನ್ನು ಸಜ್ಜುಗೊಳಿಸಲಾಗಿದೆ. ಪವಿತ್ರ ಸ್ನಾನ ಮಾಡುವ ಸಲುವಾಗಿ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಯಾವುದೇ ಅವಘಡ ಆಗದಂತೆ ಪ್ರತ್ಯೇಕವಾಗಿ ಪ್ರವೇಶ ಮತ್ತು ನಿರ್ಗಮನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿ ಸಂಗಮದ ಕುಂಭಮೇಳದ ಪ್ರಮುಖ ಆಕರ್ಷಣೆ ಸಂಗಮ ಆರತಿ. ಗಂಗಾ ನದಿ ತಟದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ಮೈಸೂರು ಜಿಲ್ಲೆ ಟಿ ನರಸೀಪುರದ ಕುಂಭಮೇಳದಲ್ಲಿ ಸಂಗಮ ಆರತಿಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಸಂಗಮ ಸ್ಥಾನದ ಮಧ್ಯ ಭಾಗದಲ್ಲಿ ವೇದಿಕೆ ಮಾಡಲಾಗಿದೆ. ಸಂಗಮದ ಮಧ್ಯ ಭಾಗದಲ್ಲಿ ಶ್ರದ್ದಾ ಭಕ್ತಿಯಿಂದ ಆರತಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಕುಂಭಮೇಳದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗದಂತೆ ಸಂಗಮದ ಬಳಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇನ್ನು ಈ ಬಾರಿಯ ಕುಂಭಮೇಳದಲ್ಲಿ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಕ್ಕಾಗಿ ಒಟ್ಟು ಮೂರು ವೇದಿಕೆಗಳನ್ನು ನಿರ್ಮಿಸಲಾಗಿದೆ. ಮೂರು ದಿನವೂ ಕುಂಭಮೇಳದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದರ ಜೊತೆಗೆ ಬೆಳ್ಳಿ ರಥದಲ್ಲಿ ಮಠಾಧೀಶರ ಮೆರವಣಿಗೆ ಸಹಾ ಆಯೋಜಿಸಲಾಗಿದೆ. ಮೂರು ದಿನವೂ ಆಕರ್ಷಕ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ.
ಕುಂಭಮೇಳಕ್ಕೆ ಫೆ.10 ರಂದು ಚಾಲನೆ ಸಿಗಲಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ಚಾಲನೆ ನೀಡಲಿದ್ದಾರೆ. ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶ್ರೀ ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿ ಹಲವರು ಭಾಗಿಯಾಗಲಿದ್ದಾರೆ. ಕುಂಭಮೇಳದ ಹಿನ್ನೆಲೆ ಸಂಕಲ್ಪ ಹೋಮ, ಅಗಸ್ತೇಶ್ವರನಿಗೆ ರುದ್ರಾಭಿಷೇಕ, ಅನುಜ್ಞೆ ಧ್ವಜಾರೋಹಣ, ಹೋಮ-ಹವನ ಸೇರಿ ಅನೇಕ ಧಾರ್ಮಿಕ ಕಾರ್ಯ ನೆರವೇರಲಿವೆ.
ಕುಂಭಮೇಳದ ಮೊದಲ ದಿನ ಬೆಳಗ್ಗೆ 9 ಗಂಟೆಗೆ ಮಾಘ ಶುದ್ದ ತ್ರಯೋದಶಿ ಪುಷ್ಯ ನಕ್ಷತ್ರದಲ್ಲಿ ಶ್ರೀ ಅಗಸ್ತ್ಯೇಶ್ವರ ಸನ್ನಿಧಿಯಲ್ಲಿ ಅನುಜ್ಞೆ ಪುಣ್ಯಾಹ ವಾಸ್ತು ಹೋಮ ನಡೆಯಲಿದೆ. ಸಂಜೆ ಧರ್ಮಸಭೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಕುಂಭಮೇಳದ ಧ್ವಜಾರೋಹಣ ನಡೆಯಲಿದೆ.
ಕುಂಭಮೇಳದ ಎರಡನೇ ದಿನವಾದ ಮಂಗಳವಾರ ಬೆಳಗ್ಗೆ 6 ಗಂಟೆಗೆ ಮಾಘಶುದ್ದ ಚತುರ್ದಶಿ ಆಶ್ಲೇಷ ನಕ್ಷತ್ರದಲ್ಲಿ ಪುಣ್ಯಾಹ ನವಗ್ರಹ ಪೂಜೆ, ಜಪ ನವಗ್ರಹ ಹೋಮ,ಫುರ್ಣಾಹುತಿ ನಡೆಯಲಿದೆ. ಬೆಳಗ್ಗೆ 1ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಸಂಜೆ 4 ಗಂಟೆಗೆ ಗುಂಜಾ ನರಸಿಂಹ ಸ್ವಾಮಿ ದೇಗುಲದಿಂದ ಮಠಾಧೀಶರ ಮೆರವಣಿಗೆ ನಡೆಯಲಿದೆ. ವಿಶ್ವಕರ್ಮ ಬೀದಿ ಭಗವಾನ್ ಟಾಕೀಸ್ ವೃತ್ತ ಸೇರಿ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಲಿದೆ. ಮೆರವಣಿಗೆಯಲ್ಲಿ ಮಂಗಳ ವಾದ್ಯ ಕಲಾತಂಡಗಳು ಸ್ಥಬ್ದಚಿತ್ರ ಸೇರಿ ಹಲವು ಕಲಾತಂಡಗಳು ಭಾಗಿಯಾಗಲಿವೆ. ಸಂಜೆ 6ಕ್ಕೆ ಸುದರ್ಶನ ಪೂಜೆ ಹೋಮ ನಡೆಯಲಿದೆ. ರಾತ್ರಿ 7 ಗಂಟೆಗೆ ತ್ರಿವೇಣಿ ಸಂಗಮದಲ್ಲಿ ಕಾಶಿಯಲ್ಲಿ ನಡೆಯುವ ಗಂಗಾರತಿ ಮಾದರಿ ಸಂಗಮ ಆರತಿ ನಡೆಯಲಿದೆ. ಇದಕ್ಕಾಗಿ ಕಾಶಿಯಿಂದ 15 ಮಂದಿಯನ್ನು ಕರೆಸಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 10ರಿಂದ ಮೂರು ದಿನ ಕುಂಭಮೇಳ
ಮೂರನೇ ದಿನ ಫೆ.12ರ ಮುಂಜಾನೆ 5.30ಕ್ಕೆ ಮಾಘ ಶುದ್ಧ ವ್ಯಾಸ ಪೂರ್ಣಿಮಾ ಮಖಾನಕ್ಷತ್ರದಲ್ಲಿ ಚಂಡಿಹೋಮ, ಪುಷ್ಯನಕ್ಷತ್ರದಲ್ಲಿ ಪುಣ್ಯಾಹ, ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥಗಳ ಪೂಜೆ, ಕಳಶ ಪೂಜೆ, ಹೋಮ, ಕುಂಭಲಗ್ನದಲ್ಲಿ ಪುರ್ಣಾಹುತಿ, ಕುಂಭೋ ದ್ವಾಸನ ಹಾಗೂ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥಗಳನ್ನು ತ್ರಿವೇಣಿ ಸಂಗಮ ದಲ್ಲಿ ಸಂಯೋಜನೆ ಮಾಡಿ ಪುಣ್ಯ ಸ್ನಾನ ಹಾಗೂ ಧಾರ್ಮಿಕ ಸಭೆ ಮಾಡಲಾಗುವುದು. ಪ್ರಾತಃಕಾಲ 9.35ರಿಂದ 9.50ರ ಮೀನ ಲಗ್ನದಲ್ಲಿ ಬೆಳಗ್ಗೆ 11.30ರಿಂದ 12ಗಂಟೆಯ ವೃಷಭ ಲಗ್ನ, ಅಭಿಜಿನ್ ಮುಹೂರ್ತ, ವಿಧಿ ಮುಹೂರ್ತ ಹಾಗೂ ವೇದ ಮುಹೂರ್ತಗಳಲ್ಲಿ ಮಹೋದಯ ಪುಣ್ಯಸ್ನಾನ ನಡೆಯಲಿದೆ.
ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿರುವ ಕಾರಣ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ಯಾವುದೇ ಲೋಪದೋಷಗಳಿಗೆ ಅವಕಾಶವಾಗದಂತೆ ಎಚ್ಚರವಹಿಸಿದೆ. ಜಿಲ್ಲೆಯ ಅಧಿಕಾರಿಗಳನ್ನು ಕುಂಭಮೇಳದ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಸ್ ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ಪೊಲೀಸ್ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ. ಅಡಿಷನಲ್ ಎಸ್ ಪಿ ಡಿವೈಎಸ್‌ಪಿ ಇನ್ಸಪೆಕ್ಟರ್ ಸಬ್ ಇನ್ಸಪೆಕ್ಟರ್ ಮಹಿಳಾ ಸಿಬ್ಬಂದಿ ಸೇರಿ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಕುಂಭಮೇಳಕ್ಕೆ ನಿಯೋಜಿಸಲಾಗಿದೆ. ಮೂರು ದಿನವೂ ಕುಂಭಮೇಳದಲ್ಲಿ ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಮೂಲಕ ಕುಂಭಮೇಳದ ಯಶಸ್ಸಿಗಾಗಿ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
Published On - 7:10 pm, Sun, 9 February 25