ವರಮಹಾಲಕ್ಷ್ಮೀ ಹಬ್ಬ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ; ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲಕ್ಕೂ ನೋ ಎಂಟ್ರಿ

| Updated By: ಸಾಧು ಶ್ರೀನಾಥ್​

Updated on: Aug 20, 2021 | 8:04 AM

Chamundi Betta: ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗದ ಕಾರಣ ಹಾಗೂ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಮೈಸೂರು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ.

ವರಮಹಾಲಕ್ಷ್ಮೀ ಹಬ್ಬ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ; ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲಕ್ಕೂ ನೋ ಎಂಟ್ರಿ
ಮೈಸೂರು ಚಾಮುಂಡಿ ಬೆಟ್ಟ (ಸಂಗ್ರಹ ಚಿತ್ರ)
Follow us on

ಮೈಸೂರು: ಕೊರೊನಾ ಪ್ರಕರಣಗಳು ಹೆಚ್ಚಾಗುವ ಭೀತಿ ಹಿನ್ನೆಲೆಯಲ್ಲಿ ಹಾಗೂ ಮುಂಜಾಗೃತಾ ಕ್ರಮವಾಗಿ ಮೈಸೂರು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ವರಮಹಾಲಕ್ಷ್ಮಿ ಹಬ್ಬದ ದಿನವಾದ ಇಂದು (ಆಗಸ್ಟ್ 20) ಚಾಮುಂಡಿ ದೇವಿಯ ದರ್ಶನ ಸಾರ್ವಜನಿಕರಿಗೆ ಇರುವುದಿಲ್ಲ. ಈ ಬಗ್ಗೆ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಆದೇಶ ಹೊರಡಿಸಿದ್ದಾರೆ. ಕೇವಲ ಪ್ರತಿ ನಿತ್ಯದ ಪೂಜಾ ಕೈಂಕರ್ಯಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೊರೊನಾ ಪ್ರಕರಣಗಳು ಕರ್ನಾಟಕದಲ್ಲಿ ಸಂಪೂರ್ಣ ಇಳಿಕೆಯಾಗಿಲ್ಲ. ಅದರಲ್ಲೂ ಬೆಂಗಳೂರು, ಮೈಸೂರು, ಮಂಗಳೂರು ನಗರಗಳಲ್ಲಿ ಕೊವಿಡ್ ಪ್ರಕರಣಗಳು ಕೊಂಚ ಹೆಚ್ಚಾಗೇ ಇದೆ. ಗಡಿ ಜಿಲ್ಲೆಗಳಲ್ಲಿ ಕೂಡ ಕೊರೊನಾ ನಿಯಂತ್ರಣ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತೆ ಅನಿವಾರ್ಯವಾಗಿದೆ.

ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗದ ಕಾರಣ ಹಾಗೂ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಮೈಸೂರು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಸಾಮಾನ್ಯವಾಗಿ ವರಮಹಾಲಕ್ಷ್ಮೀ ಹಬ್ಬದ ದಿನ ಬೆಟ್ಟಕ್ಕೆ, ದೇವಿ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ. ಸಾಮಾನ್ಯ ದಿನಕ್ಕಿಂತಲೂ ಹೆಚ್ಚು ಜನರು ಹಬ್ಬದ ದಿನ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಈ ಕಾರಣದಿಂದ ಇಂದು ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.

ಬೆಂಗಳೂರು: ಹಬ್ಬದ ಸಂಭ್ರಮದಲ್ಲಿ ಕೊರೊನಾ ನಿಯಮ ಮರೆತ ಜನತೆ
ಒಂದೆಡೆ ಹೀಗೆ ನಿರ್ಬಂಧಗಳನ್ನು ವಿಧಿಸಿ ಆಡಳಿತ ಕೊರೊನಾ ನಿಯಂತ್ರಣಕ್ಕೆ ಕ್ರಮ ವಹಿಸಿದ್ದರೆ ಇಲ್ಲಿ ಮತ್ತೊಂದೆಡೆ ಜನರು ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ನಿಯಮ ಮರೆತು ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ. ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಜನಜಾತ್ರೆಯೇ ಕಂಡುಬಂದಿದೆ. ಕಳೆದ ಒಂದೆರಡು ದಿನದಿಂದಲೂ ಇಂತಹ ವಾತಾವರಣ ಕಂಡುಬರುತ್ತಿದೆ. ಕೊವಿಡ್ ನಿಯಮ ಉಲ್ಲಂಘಿಸಿ ಜನರು ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ವರಮಹಾಲಕ್ಷ್ಮೀ ಹಬ್ಬ ಹಿನ್ನೆಲೆ ಹೂವು, ಹಣ್ಣು ಖರೀದಿ ಮಾಡುತ್ತಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಕೊರೊನಾ ಇದೆ ಎಂಬುದನ್ನೇ ಸಾರ್ವಜನಿಕರು ಮರೆತ ಹಾಗಾಗಿದೆ.

ಮಾರ್ಕೆಟ್‌ನಲ್ಲಿ ಬಿಬಿಎಂಪಿ ಗೈಡ್‌ಲೈನ್ಸ್‌ಗೆ ಜನರು ಡೋಂಟ್‌ಕೇರ್ ಎಂದಿದ್ದಾರೆ. ಮಾಸ್ಕ್ ಧರಿಸಿಲ್ಲ, ದೈಹಿಕ ಅಂತರ ಇಲ್ಲವೇ ಇಲ್ಲ. ಬಿಬಿಎಂಪಿ ನಿಯೋಜಿಸಿದ್ದ ಮಾರ್ಷಲ್‌ಗಳು ಕೂಡ ಇಲ್ಲ. ಹೀಗಾಗಿ ಸಾರ್ವಜನಿಕರು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅದೇಶಕ್ಕೆ ಡೋಂಟ್‌ಕೇರ್ ಎಂದಿದ್ದಾರೆ. ಹಬ್ಬಗಳ ಹಿನ್ನೆಲೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೊಸ ರೊನಾಕೊ ನಿಯಮಗಳನ್ನು ಸೂಚಿಸಿದ್ದರು. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವುದಾಗಿಯೂ ತಿಳಿಸಿದ್ದರು.

ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲಕ್ಕೆ ಭಕ್ತರಿಗೆ ಪ್ರವೇಶವಿಲ್ಲ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮೀ ದೇಗುಲಕ್ಕೆ ಕೂಡ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ದೇಗುಲಕ್ಕೆ ಭಕ್ತರಿಗೆ ಪ್ರವೇಶವಿಲ್ಲ ಎಂದು ಸೂಚನೆ ನೀಡಲಾಗಿದೆ. ಕೇವಲ ಅರ್ಚಕರು ಪೂಜೆ ಸಲ್ಲಿಸುವುದಕ್ಕೆ ಮಾತ್ರ ಅವಕಾಶ ಕೊಡಲಾಗಿದೆ. ಕೊರೊನಾ ಹಿನ್ನೆಲೆ ದೇಗುಲಕ್ಕೆ ಹೆಚ್ಚು ಭಕ್ತರು ಬಂದರೆ ಸಮಸ್ಯೆ ಆಗಬಹುದು ಎಂಬ ಮುಂಜಾಗ್ರತಾ ಕ್ರಮವಾಗಿ 4 ದಿನ ದೇಗುಲ ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ಶುಕ್ರವಾರ, ಶನಿವಾರ, ಭಾನುವಾರ, ಸೋಮವಾರ ದೇವಾಲಯ ಭಕ್ತರ ಪ್ರವೇಶಕ್ಕೆ ತೆರೆದಿರುವುದಿಲ್ಲ. ಬೆಳಿಗ್ಗೆ 5 ಗಂಟೆಗೆ ಪೂಜೆ ಸಲ್ಲಿಸಿ ಬಾಗಿಲು ಬಂದ್ ಮಾಡಲಾಗುವುದು ಹಾಗಾಗಿ, ಭಕ್ತರು ಯಾರು ಬಾರದಂತೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬಕ್ಕೆ ಖರೀದಿಗೆ ಮುಗಿಬಿದ್ದ ಜನ; ಕೆ.ಆರ್.ಪುರಂನಲ್ಲಿ 2 ಕಿಲೋಮೀಟರ್​ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್

ಈಗಲೂ ನಾವು ಭೇಟಿ ಕೊಡಬಹುದಾದ ರಾಮಾಯಣದ 13 ಪ್ರಾಚೀನ ತಾಣಗಳು ಇಲ್ಲಿವೆ

Published On - 7:33 am, Fri, 20 August 21