ಮೈಸೂರು ದಸರಾ: 20 ಅಪ್ರಾಪ್ತ ಮಕ್ಕಳ ರಕ್ಷಣೆ, ಮಕ್ಕಳ ಸ್ನೇಹಿ ದಸರಾಗೆ ವಿಶೇಷ ತಂಡಗಳ ಕಾರ್ಯಾಚರಣೆ

ಮೈಸೂರು ದಸರಾವನ್ನು ಮಕ್ಕಳ ಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ, ಬಾಲಕಾರ್ಮಿಕರು ಹಾಗೂ ಭಿಕ್ಷಾಟನೆಯಲ್ಲಿದ್ದ 20 ಅಪ್ರಾಪ್ತ ಮಕ್ಕಳನ್ನು ರಕ್ಷಿಸಿವೆ. ಇನ್ನೊಂದೆಡೆ, ದಸರಾ ಸಂದರ್ಭದಲ್ಲಿ ರಸ್ತೆಬದಿಗಳಲ್ಲಿ ವಾಸಿಸುತ್ತಿರುವ ಯುವ ವಲಸೆ ಮಹಿಳೆಯರ ಸಂಕಷ್ಟದ ಬಗ್ಗೆಯೂ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ದಸರಾ ಅಧಿಕಾರಿಗಳು ಈ ಮಹಿಳೆಯರ ಪರಿಸ್ಥಿತಿಯತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮೈಸೂರು ದಸರಾ: 20 ಅಪ್ರಾಪ್ತ ಮಕ್ಕಳ ರಕ್ಷಣೆ, ಮಕ್ಕಳ ಸ್ನೇಹಿ ದಸರಾಗೆ ವಿಶೇಷ ತಂಡಗಳ ಕಾರ್ಯಾಚರಣೆ
ಮೈಸೂರು ದಸರಾ: 20 ಅಪ್ರಾಪ್ತ ಮಕ್ಕಳ ರಕ್ಷಣೆ
Image Credit source: PTI

Updated on: Oct 18, 2026 | 10:06 AM

ಮೈಸೂರು, ಅಕ್ಟೋಬರ್​​ 18: ಮಕ್ಕಳ ಕಲ್ಯಾಣ ಸಮಿತಿ (CWC) ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ (DCPU) ರಚಿಸಿದ್ದ ವಿಶೇಷ ತಂಡಗಳು ಮೈಸೂರು ನಗರದಲ್ಲಿ 20 ಅಪ್ರಾಪ್ತ ಮಕ್ಕಳನ್ನು ರಕ್ಷಿಸಿವೆ. ಈ ಬಾರಿಯ ದಸರಾವನ್ನು ಮಕ್ಕಳ ಸ್ನೇಹಿಯಾಗಿ ರೂಪಿಸುವ ಉದ್ದೇಶದಿಂದ ನಡೆಸಲಾಗಿದ್ದ ಕಾರ್ಯಾಚರಣೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ದೇಶದ ಇತರ ಭಾಗಗಳಿಂದ ಬಂದಿದ್ದ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ರಕ್ಷಿಸಲಾದ ಮಕ್ಕಳಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದವರು, ರಸ್ತೆಗಳಲ್ಲಿ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರು ಹಾಗೂ ಭಿಕ್ಷಾಟನೆಯಲ್ಲಿ ತೊಡಗಿದ್ದವರು ಸೇರಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಮಹದೇವ ಕೋಟೆ ಅವರ ಪ್ರಕಾರ, ರಕ್ಷಿಸಲಾದವರಲ್ಲಿ ಹೋಟೆಲ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದ ಮೂವರು ಬಾಲಕಾರ್ಮಿಕರು ಸೇರಿದ್ದಾರೆ. ದಸರಾ ಸಂದರ್ಭದಲ್ಲಿ ನಗರದ ವಿವಿಧ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಹಾಗೂ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮಕ್ಕಳನ್ನೂ ರಕ್ಷಿಸಲಾಗಿದೆ. ದಸರಾ ನೋಡಲು ಬಂದಿದ್ದ ಹಾವೇರಿ ಜಿಲ್ಲೆಯ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ತನ್ನ ಸಹೋದರನೊಂದಿಗೆ ಬಂದು ಶೇಂಗಾ ಮಾರಾಟ ಮಾಡುತ್ತಿದ್ದಾಗ ಆತನನ್ನು ರಕ್ಷಿಸಲಾಗಿದೆ ಎಂದು ಮಹದೇವ ಕೋಟೆ ತಿಳಿಸಿದ್ದಾರೆ.

Loading...

ಇದನ್ನೂ ಓದಿ: ಅಂಬಾರಿ ಆನೆ, ತಾಯಿ ಚಾಮುಂಡೇಶ್ವರಿ ರೂಪದಲ್ಲಿ ಕಂಗೊಳಿಸಿದ ಡ್ರೋನ್‌ಗಳು

ಉತ್ತರ ಕರ್ನಾಟಕ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಿಂದ ಬಂದಿರುವ ಮಕ್ಕಳು ಇಂತಹ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ, ಅಧಿಕಾರಿಗಳ ಕ್ರಮಕ್ಕೆ ಹೆದರಿ ಹಾವೇರಿಯ ಬೀದಿ ವ್ಯಾಪಾರಿಯೊಬ್ಬರ ಕುಟುಂಬವು ತಮ್ಮ ಮೂವರು ಹೆಣ್ಣುಮಕ್ಕಳನ್ನು ದಸರಾ ಮುಗಿಯುವವರೆಗೆ ಬಾಲಕಿಯರ ಬಾಲಮಂದಿರದ ವಶಕ್ಕೆ ಒಪ್ಪಿಸಿದೆ ಎಂದು ತಿಳಿದುಬಂದಿದೆ.

ವಲಸೆ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯಕ್ಕೆ ಒತ್ತಾಯ

ಇನ್ನೊಂದೆಡೆ, ದಸರಾ ಸಂದರ್ಭದಲ್ಲಿ ರಸ್ತೆಬದಿಗಳಲ್ಲಿ ವಾಸಿಸುತ್ತಿರುವ ಯುವ ವಲಸೆ ಮಹಿಳೆಯರ ಸಂಕಷ್ಟದ ಬಗ್ಗೆಯೂ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ದಸರಾ ಅಧಿಕಾರಿಗಳು ಈ ಮಹಿಳೆಯರ ಪರಿಸ್ಥಿತಿಯತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಹಲವಾರು ಯುವ ಮಹಿಳಾ ವ್ಯಾಪಾರಿಗಳು ರಾತ್ರಿ ವೇಳೆ ಸುರಕ್ಷತೆಯಿಲ್ಲದ ಟೆಂಟ್‌ಗಳು ಮತ್ತು ಕಟ್ಟಡಗಳಲ್ಲಿ ವಾಸಿಸುತ್ತಿರುವುದು ಕಂಡುಬರುತ್ತಿದೆ. ದಸರಾ ಆಚರಣೆಗೆ ಸರ್ಕಾರ ದೊಡ್ಡ ಮೊತ್ತದ ಹಣ ಖರ್ಚು ಮಾಡುತ್ತಿರುವಾಗ, ಈ ಮಹಿಳೆಯರ ಸ್ಥಿತಿಯನ್ನೂ ಗಮನಿಸಿ ಅವರಿಗೆ ತಾತ್ಕಾಲಿಕ ಆಶ್ರಯ ಒದಗಿಸಬೇಕು ಎಂದು ಮೈಸೂರಿನ ಸಾಮಾಜಿಕ ಕಾರ್ಯಕರ್ತೆ ಸುಮಾ ಹೆಗಡೆ ಹೇಳಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us