ಮೈಸೂರು ಭಾಗದಲ್ಲಿ ಒಂದೇ ದಿನ ಎರಡು ಆನೆಗಳ ಸಾವು
ನಿನ್ನೆ ಬಂದೇ ದಿನ ಪ್ರತ್ಯೇಕ ಘಟನೆಗಳಲ್ಲಿ 2 ಆನೆಗಳು ಮೃತಪಟ್ಟಿವೆ. ನಂಜನಗೂಡು ತಾಲೂಕಿನ ಮಲ್ಲಹಳ್ಳಿ ಗ್ರಾಮದ ಬಳಿ ಕಂದಕಕ್ಕೆ ಉರುಳಿಬಿದ್ದು ಕಾಡಾನೆ ಮೃತಪಟ್ಟಿದ್ದು ಮತ್ತೊಂದೆಡೆ ಹಾಸನ ಜಿಲ್ಲೆಯ ಹೆತ್ತೂರು ಹೋಬಳಿಯ ವನಗೂರು ಗ್ರಾಮ ಪಂಚಾಯಿತಿಯ ಕಡ್ರಳ್ಳಿಯಲ್ಲಿ ಅನಾರೋಗ್ಯದಿಂದ 22 ವರ್ಷದ ಹೆಣ್ಣಾನೆ ಸಾವನ್ನಪ್ಪಿದೆ.
ಮೈಸೂರು, ಅ.04: ಮೈಸೂರು ಜಿಲ್ಲೆಯ ಭಾಗದಲ್ಲಿ ನಿನ್ನೆ ಬಂದೇ ದಿನ ಎರಡು ಪ್ರತ್ಯೇಕ ಘಟನೆಗಳಲ್ಲಿ ಎರಡು ಆನೆಗಳು ಮೃತಪಟ್ಟಿವೆ (Elephant Death) ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೈಸೂರು ಭಾಗದ ಗುಂಡ್ಲುಪೇಟೆ ಮತ್ತು ಹೆತ್ತೂರಿನಲ್ಲಿ ಗುರುವಾರ ಎರಡು ಆನೆಗಳು ಮೃತಪಟ್ಟಿವೆ. ನಂಜನಗೂಡು ತಾಲೂಕಿನ ಮಲ್ಲಹಳ್ಳಿ ಗ್ರಾಮದ ಬಳಿ ಕಂದಕಕ್ಕೆ ಉರುಳಿಬಿದ್ದು ಕಾಡಾನೆ ಮೃತಪಟ್ಟಿದ್ದು ಮತ್ತೊಂದೆಡೆ ಹಾಸನ ಜಿಲ್ಲೆಯ ಹೆತ್ತೂರು ಹೋಬಳಿಯ ವನಗೂರು ಗ್ರಾಮ ಪಂಚಾಯಿತಿಯ ಕಡ್ರಳ್ಳಿಯಲ್ಲಿ ಅನಾರೋಗ್ಯದಿಂದ 22 ವರ್ಷದ ಹೆಣ್ಣಾನೆ ಸಾವನ್ನಪ್ಪಿದೆ.
ಮೈಸೂರು ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವನ್ಯಜೀವಿ ವಲಯ ವ್ಯಾಪ್ತಿಯ ಮಲ್ಲಹಳ್ಳಿ ಅರಣ್ಯ ಪ್ರದೇಶದಲ್ಲಿ 45 ವರ್ಷ ವಯಸ್ಸಿನ ಗಂಡಾನೆ ಕಂದಕಕ್ಕೆ ಬಿದ್ದು ಮೃತಪಟ್ಟಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ತಪ್ಪಿಸಲು ಗ್ರಾಮಸ್ಥರು ಕಂದಕ ನಿರ್ಮಿಸಿದ್ದರು. ಆಹಾರ ಅರಸಿ ಗ್ರಾಮದ ಕಡೆ ಬರುವಾಗ ಕಾಡಾನೆ ಕಂದಕಕ್ಕೆ ಬಿದ್ದಿದೆ. ಕಂದಕದಲ್ಲಿ ಸಾವು-ಬದುಕಿನ ನಡುವೆ ನರಳಾಡುತ್ತಿದ್ದ ಕಾಡಾನೆಯನ್ನು ಕಂಡ ಜನ ಕೂಡಲೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಕಾಡಾನೆ ಕೊನೆಯುಸಿರೆಳೆದಿದೆ. ಸದ್ಯ ಜೆಸಿಬಿ ಮೂಲಕ ಮೃತ ಕಾಡಾನೆಯನ್ನು ಅರಣ್ಯ ಸಿಬ್ಬಂದಿ ಹೊರತೆಗೆದಿದ್ದಾರೆ.
ಆನೆಯ ಒಂದು ಕಣ್ಣು ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡಿತ್ತು. ಮತ್ತೊಂದು ಕಣ್ಣಿಗೂ ಪೊರೆ ಬಂದಿತ್ತು. ಕರಳಿನ ಕಾಯಿಲೆಯಿಂದಲೂ ಬಳಲುತ್ತಿತ್ತು. ಆನೆ ಹೃದಯಾಘಾತದಿಂದ ಅಸುನೀಗಿದೆ ಎಂದು ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ದಸರಾಕ್ಕೆ ಸಕ್ರೆಬೈಲಿನ ಮೂರು ಆನೆಗಳಿಗೆ ವಿಶೇಷ ಆಹ್ವಾನ: ಅಂಬಾರಿ ಹೊರಲು ಸಾಗರಗೆ ತಾಲೀಮು
ಇನ್ನು ಮತ್ತೊಂದೆಡೆ ಹಾಸನ ಜಿಲ್ಲೆಯ ಹೆತ್ತೂರು ಹೋಬಳಿಯ ವನಗೂರು ಗ್ರಾಮ ಪಂಚಾಯಿತಿಯ ಕಡ್ರಳ್ಳಿಯಲ್ಲಿ ಅನಾರೋಗ್ಯದಿಂದ 22 ವರ್ಷದ ಹೆಣ್ಣಾನೆ ಮೃತಪಟ್ಟಿದೆ. ಮೃತ ಆನೆ ಕಾಡಾನೆ ಹಿಂಡಿದ್ದ ಬೇರ್ಪಟ್ಟಿತ್ತು. ಮೂರು ತಿಂಗಳಿನಿಂದ ಆನೆಗುಂಡಿ ಪಟ್ಲ, ಬೆಟ್ಟದ ಮನೆ, ವನಗೂರು, ಕಡ್ರಳ್ಳಿ ಸುತ್ತಮುತ್ತ ಓಡಾಡಿಕೊಂಡಿದ್ದ ಕಾಡಾನೆಗಳ ಗುಂಪಿನಿಂದ ಬೇರ್ಪಟ್ಟು ಆಹಾರವಿಲ್ಲದೆ ಪರದಾಡಿತ್ತು ಎಂದು ತಿಳಿದುಬಂದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ