ಮೈಸೂರು, ಜನವರಿ 2: ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram Mandir) ಪ್ರತಿಷ್ಠಾಪನೆಗೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ನಿರ್ಮಿಸಿರುವ ವಿಗ್ರಹ ಆಯ್ಕೆಯಾಗಿರುವ ಬೆನ್ನಲ್ಲೇ ಅವರ ಮನೆಯವರನ್ನು ಕಾಂಗ್ರೆಸ್ ಮುಖಂಡರು ಸನ್ಮಾನಿಸಿದ್ದಾರೆ. ಅರುಣ್ ಯೋಗಿರಾಜ್ ನಿರ್ಮಿಸಿರುವ ವಿಗ್ರಹ ಆಯ್ಕೆಯಾಗಿರುವುದರಿಂದ ಮೈಸೂರಿನಲ್ಲಿ ಸಂಭ್ರಮ ಮನೆಮಾಡಿದೆ. ಅರುಣ್ ರಾಷ್ಟ್ರದ ಗಮನ ಸೆಳೆದಿರುವುದು ಅವರ ಕುಟುಂಬದವರು, ಸ್ಥಳೀಯರನ್ನು ಹರ್ಷಚಿತ್ತರಾನ್ನಾಗಿಸಿದೆ.
ಜನವರಿ 22 ರಂದು ಅಯೋದ್ಯೆಯಲ್ಲಿ ರಾಮಲಲ್ಲಾ ವಿಗ್ರಹ ಅನಾವರಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅರುಣ್ ಯೋಗಿ ಮನೆಗೆ ಭೇಟಿ ನೀಡಿರುವ ಕಾಂಗ್ರೆಸ್ಸಿಗರು ರಾಜ್ ಕುಟುಂಬಸ್ಥರನ್ನು ಸನ್ಮಾನಿಸಿದ್ದಾರೆ. ಅರುಣ್ ಯೋಗಿ ರಾಜ್ ಪತ್ನಿ ವಿಜೇತ ಹಾಗೂ ತಾಯಿ ಸರಸ್ವತಿ ಅವರನ್ನು ಸನ್ಮಾನಿಸಿದ್ದಾರೆ.
ಮೈಸೂರಿನ ಪಾಠಶಾಲಾ ಬಳಿ ಇರುವ ಅರುಣ್ ಯೋಗಿರಾಜ್ ನಿವಾಸಕ್ಕೆ ಕಾಂಗ್ರೆಸ್ ಶಾಸಕ ಹರೀಶ್ ಗೌಡ, ಮಾಜಿ ಶಾಸಕ ಎಂಕೆ ಸೋಮಶೇಖರ್ ತೆರಳಿ ಸನ್ಮಾನಿಸಿದ್ದಾರೆ. ಈ ವೇಳೆ ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ. ಸುಶೃತ್ ಗೌಡ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಮಧ್ಯೆ, ರಾಮ ಮಂದಿರ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ರಾಜಕೀಯ ಲಾಭಕ್ಕಾಗಿ ಪೈಪೋಟಿಯೂ ನಡೆಯುತ್ತಿದೆ. ಒಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಕೊಟ್ಟಿಲ್ಲ ಎಂದು ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಆಹ್ವಾನ ನೀಡುವುದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ಗೆ ಬಿಟ್ಟ ವಿಚಾರ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
‘ಯಾವ ರಾಜ್ಯದ ಬಿಜೆಪಿ ಸಿಎಂ ಅನ್ನೂ ಸಮಾರಂಭಕ್ಕೆ ಕರೆದಿಲ್ಲ. ನಾನು ಕೇಂದ್ರ ಸರ್ಕಾರ ಸಚಿವ, ನನಗೇ ಆಹ್ವಾನವಿಲ್ಲ. ನನಗೆ, ಕರೆಯೋದಲ್ಲ ಬರಬೇಡಿ ಎಂದು ಹೇಳಿದ್ದಾರೆ. ಅಲ್ಲಿ ಜಾಗ ಇಲ್ಲ, ಅಲ್ಲಿನ ವ್ಯವಸ್ಥೆ ಸೀಮಿತವಾಗಿದೆ. ಯಾರನ್ನು ಕರೆಯಬೇಕು, ಕರೆಯಬಾರದು ಅನ್ನೋದು ಟ್ರಸ್ಟ್ನ ಸ್ವತಂತ್ರ ನಿರ್ಧಾರವಾಗಿರುತ್ತದೆ’ ಎಂದು ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಮೈಸೂರಿನ ಶಿಲ್ಪಿ ಕೆತ್ತಿದ ವಿಗ್ರಹ, ಯಾರು ಅರುಣ್ ಯೋಗಿರಾಜ್?
ಈ ಮಧ್ಯೆ, ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರವಾಗಿ ಪ್ರತಿಪಕ್ಷಗಳು ಹೇಗೆ ಅಡ್ಡಗಾಲು ಹಾಕುತ್ತಾ ಬಂದಿದ್ದವು ಎಂಬ ಬಗ್ಗೆ ಕಿರುಪುಸ್ತಕ ಬಿಡುಗಡೆ ಮಾಡಲು ಬಿಜೆಪಿ ಮುಂದಾಗಿದೆ ಎಂದು ವರದಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ