
ಮೈಸೂರು, ಆಗಸ್ಟ್ 17: ಜಂಬೂ ಸವಾರಿ (jamboo savari) ಅಂದರೆ ಅದು ಮೈಸೂರು ದಸರಾ (Mysuru Dasara) ಅಂತ ಇಡೀ ವಿಶ್ವಕ್ಕೆ ಗೊತ್ತು. ದಸರಾ ಹಬ್ಬದಂದು ಎಲ್ಲರ ಕಣ್ಣು ಅಂಬಾರಿ ಮತ್ತು ಆ ಅಂಬಾರಿ ಹೊತ್ತ ಆನೆಗಳ ಮೇಲಿರುತ್ತದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಅರಮನೆಯಲ್ಲಿ ದಸರಾ ಗಜಪಡೆಗೆ ರಾಜಾತಿಥ್ಯ ನೀಡಲಾಗುತ್ತಿದೆ. ಪ್ರತಿನಿತ್ಯ 2 ಬಾರಿ ವಿಶೇಷ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು, ಪ್ರತ್ಯೇಕ ವಿಶೇಷ ಅಡುಗೆ ಕೋಣೆಯನ್ನು ನಿರ್ಮಿಸಲಾಗಿದೆ. ಒಟ್ಟು 14 ಆನೆಗಳ ಆಹಾರದ ವೆಚ್ಚ 55 ರಿಂದ 60 ಲಕ್ಷ ರೂ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಗೆ ಕ್ಯಾಪ್ಟನ್ ಅಭಿಮನ್ಯು ಪಡೆ ಸಿದ್ಧವಾಗುತ್ತಿದೆ. ಹಾಗಾಗಿ 14 ಆನೆಗಳಿಗೆ ಮೈಸೂರಿನ ಅರಮನೆಯಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ. ಅದರಲ್ಲೂ ಅವುಗಳ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಅದಕ್ಕಾಗಿ ವಿಶೇಷ ಅಡುಗೆ ಕೋಣೆ ನಿರ್ಮಿಸಲಾಗಿದೆ. ಇದಕ್ಕಾಗಿ ಅಡುಗೆ ತಯಾರಕರ ತಂಡವೇ ಇದೆ. ಒಂದು ಆನೆಗೆ 10 ಕೆಜಿಯಷ್ಟು ಆಹಾರ ನೀಡಲಾಗುತ್ತಿದೆ.
ಇದನ್ನೂ ಓದಿ: ಮೈಸೂರು ದಸರಾ ಗಜಪಡೆ: ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯುಗಿಂತ ಭೀಮ ಹೆಚ್ಚು ! ನಂ.1
ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ತಾಲೀಮು ಮುಗಿಸಿ ಬಂದ ನಂತರ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಆ ಮೂಲಕ ಆನೆಗಳ ಶಕ್ತಿ ವೃದ್ಧಿ, ತೂಕ ಹೆಚ್ಚಿಸಲು ಅರಣ್ಯ ಇಲಾಖೆ ಮುಂದಾಗಿದೆ. ಹಾಗಾಗಿ ಹಸಿರು ಕಾಳು ಸೇರಿ ವಿವಿಧ ಬಗೆಯ ವಿಶೇಷ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ. ಸೌತೆಕಾಯಿ, ಮೂಲಂಗಿ, ಕ್ಯಾರೆಟ್, ಬೀಟ್ರೂಟ್ ಸೇರಿ ವಿವಿಧ ತರಕಾರಿಗಳನ್ನು ಬೇಯಿಸಿ ದೊಡ್ಡ ದೊಡ್ಡ ತಟ್ಟೆಯಲ್ಲಿಟ್ಟು ಉಂಡೆ ಕಟ್ಟಿ ಗಜಪಡೆಗೆ ನೀಡಲಾಗುತ್ತದೆ.
ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವ 2025: ಜಂಬೂ ಸವಾರಿಗಾಗಿ ತಾಲೀಮು ಆರಂಭಿಸಿದ ಗಜಪಡೆ
ಈ ಕುರಿತಾಗಿ ಟಿವಿ9ಗೆ ಡಿಸಿಎಫ್ ಡಾ.ಪ್ರಭುಗೌಡ ಹೇಳಿಕೆ ನೀಡಿದ್ದು, ದಸರಾದಲ್ಲಿ ಪಾಲ್ಗೊಳ್ಳುವ 14 ಆನೆಗಳ ಆಹಾರ ವೆಚ್ಚ 55 ರಿಂದ 60 ಲಕ್ಷ ರೂ ಆಗುತ್ತದೆ. ಆನೆಗಳನ್ನು ಅರಮನೆಯಲ್ಲಿ ರಾಯಲ್ ಆಗಿ ನೋಡಿಕೊಳ್ಳುತ್ತೇವೆ. ನಿತ್ಯ ಗಂಡಾನೆಗೆ 750 ಕೆಜಿ ಆಹಾರ, ಹೆಣ್ಣಾನೆಗೆ 450 ಕೆಜಿ ಆಹಾರ ನೀಡುತ್ತಿದ್ದೇವೆ. ಸದ್ಯ ಅರಮನೆಯಲ್ಲಿರುವ ಅಭಿಮನ್ಯು ನೇತೃತ್ವದ 9 ಆನೆಗಳು ಇದ್ದು, ಕೆಲವೇ ದಿನಗಳಲ್ಲಿ ಕಾಡಿನಿಂದ ನಾಡಿಗೆ 5 ಆನೆಗಳು ಆಗಮಿಸಲಿವೆ ಎಂದು ಅವರು ಹೇಳಿದರು.
ನಿತ್ಯ ಆನೆಗಳಿಗೆ ಹಸಿರು ಹುಲ್ಲು, ಭತ್ತದ ಹುಲ್ಲು, ಕಬ್ಬು, ತರಕಾರಿಗಳನ್ನು ನೀಡಲಾಗುತ್ತಿದೆ. ಅದರಲ್ಲೂ ಭೀಮ ತಿಂಡಿಪೋತ. ಇನ್ನು 25 ವರ್ಷದ ಭೀಮನಿಗೆ 750 ಕೆಜಿ ಊಟ ಕೊಟ್ಟರು ಮತ್ತೆ ಬೇಕು ಎನ್ನುತ್ತಾನೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:20 am, Sun, 17 August 25