ಮೈಸೂರು, ಫೆಬ್ರವರಿ 12: ನಗರದ ಉದಯಗಿರಿ (Udayagiri) ಬೂದಿ ಮುಚ್ಚಿದ ಕೆಂಡದಂತಾಗಿದೆ. ಮೊನ್ನೆ ರಾತ್ರಿ ಭುಗಿಲೆದ್ದ ಗಲಭೆ ಭಯದ ವಾತಾವರಣ ನಿರ್ಮಿಸಿ ಬಿಟ್ಟಿತ್ತು. ಉದಯಗಿರಿಯಲ್ಲಿ ಪುಂಡಾಟ ಮಾಡಿದ್ದವರಿಗೆ ಬಲೆ ಬೀಸಿದ್ದ ಸಿಸಿಬಿ ಪೊಲೀಸರು ಸದ್ಯ ಪ್ರಕರಣ ಸಂಬಂಧ 8 ಮಂದಿ ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಮೈಸೂರಿನ ಶಾಂತಿನಗರದ ಸುಹೇಲ್@ಸೈಯದ್ ಸುಹೇಲ್, ರಹೀಲ್ ಪಾಷಾ, ಅಯಾನ್, ಸತ್ಯನಗರದ ನಿವಾಸಿ ಏಜಾಜ್, ಮೈಸೂರಿನ ಗೌಸಿಯಾನಗರದ ನಿವಾಸಿ ಸೈಯದ್ ಸಾದಿಕ್, ರಾಜೀವ್ ನಗರದ ಸಾದಿಕ್ ಪಾಷಾ ಅಲಿಯಾಸ್ ಸಾದಿಕ್, ಅರ್ಬಾಜ್ ಷರೀಫ್, ಶೋಹೆಬ್ ಪಾಷಾ ಬಂಧಿತ ಆರೋಪಿಗಳು. ಮತ್ತಷ್ಟು ಆರೋಪಿಗಳ ಸೆರೆಗೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.
ನಿನ್ನೆ ರಾತ್ರಿ ಪೊಲೀಸರು ಆರೋಪಿಗಳ ಸೆರೆಗೆ ಹೋಗಿದ್ದರು. ಟವರ್ ಲೊಕೇಶನ್ ಆಧಾರದಲ್ಲಿ ಮನೆ ಮನೆ ತೆರಳಿದ್ದರು. ಆದರೆ ಪೊಲೀಸರು ಅರೆಸ್ಟ್ ಮಾಡುತ್ತಾರೆಂಬ ಭೀತಿಯಲ್ಲೇ ಆರೋಪಿಗಳು ಮನೆ ಬಿಟ್ಟು ಓಡಿಹೋಗಿದ್ದಾರೆ. ಮೊಬೈಲ್ ಮನೆಯಲ್ಲೇ ಇಟ್ಟು ಊರು ಬಿಟ್ಟಿದ್ದಾರೆ. ಸದ್ಯ ಮೈಸೂರಿನ ಸಿಸಿಬಿ ಪೊಲೀಸರು ಪ್ರಕರಣ ಕೈಗೆತ್ತಿಕೊಂಡಿದ್ದಾರೆ. ಉದಯಗಿರಿ ಠಾಣೆ ರಸ್ತೆಯಲ್ಲಿನ 10ಕ್ಕೂ ಹೆಚ್ಚು ಸಿಸಿಕ್ಯಾಮರಾ ಡಿವಿಆರ್ ವಶಕ್ಕೆ ಪಡೆದು ಪರಿಶೀಲನೆ ಮಾಡಿದ್ದಾರೆ.
ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ಮಾಡುತ್ತಿದ್ದಾರೆ. ಗಲಭೆಗೆ ಮುಫ್ತಿ ಮುಷ್ತಾಕ್ ಮಕ್ಬೋಲಿ ಎಂಬಾತನ ಭಾಷಣವೇ ಕಾರಣವಾಯಿತಾ ಎಂಬ ಶಂಕೆ ಶುರುವಾಗಿದೆ. ಗಲಾಟೆಗೆ ಮುನ್ನ ಮುಷ್ತಾಕ್ ಆಡಿದ್ದಾನೆ ಎನ್ನಲಾದ ಆಡಿಯೋ ಸದ್ಯ ವೈರಲ್ ಆಗಿದೆ. ನಾವು ಪ್ರಾಣ ಬೇಕಾದರೂ ಕೊಡುತ್ತೇವೆ. ನನ್ನ ಮಾಲೀಕನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾನೆ. ಆತನನ್ನು ಕೂಡಲೇ ಬಂಧಿಸಿ ಆತನನ್ನು ನೇಣಿಗೆ ಹಾಕಬೇಕು ಅಂತಾ ಮೈಕ್ನಲ್ಲಿ ಕೂಗಿದ್ದಾನೆ. ಪ್ರಚೋದನೆ ಮಾಡಿದ ಮುಷ್ತಾಕ್ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಇದನ್ನೂ ಓದಿ: ಮೈಸೂರು: ಉದಯಗಿರಿ ಗಲಭೆಗೆ ಕಾರಣವಾಯ್ತಾ ಮುಷ್ತಾಕ್ನ ಪ್ರಚೋದನಾಕಾರಿ ಹೇಳಿಕೆ?
ಇನ್ನು ನಿನ್ನೆ ಸಚಿವ ಕೆ.ಎನ್ ರಾಜಣ್ಣ ಗಲಭೆಗೆ ಪೊಲೀಸರನ್ನೇ ಹೊಣೆ ಮಾಡಿದ್ದರು. ಇಂದು ಈ ಹೇಳಿಕೆಯನ್ನ ಡಿಸಿಎಂ ಡಿಕೆ ಶಿವಕುಮಾರ್ ತಳ್ಳಿಹಾಕಿದ್ದಾರೆ. ಡಿಸಿಎಂ ಆಗಿ ಹೇಳುತ್ತಿದ್ದೇನೆ ಪೊಲೀಸರ ತಪ್ಪೇನು ಇಲ್ಲ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.