ಉದಯಗಿರಿ ಗಲಭೆ: ಕಲ್ಲು ಎಸೆದವರು 14, 15 ವರ್ಷದ ಹುಡುಗರು, ಪೊಲೀಸರದ್ದು ತಪ್ಪಿಲ್ಲ, ಡಿಕೆ ಶಿವಕುಮಾರ್
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಉದಯಗಿರಿ ಗಲಭೆಗೆ ಸಂಬಂಧಿಸಿದಂತೆ ಪೊಲೀಸರನ್ನು ಸಮರ್ಥಿಸಿಕೊಂಡಿದ್ದಾರೆ. ಪೊಲೀಸರು ಸರಿಯಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿ, ಸಚಿವ ಕೆ.ಎಸ್. ರಾಜಣ್ಣ ಅವರ ಹೇಳಿಕೆಗೆ ಮುಖ್ಯಮಂತ್ರಿಗಳು ಉತ್ತರಿಸುವುದಾಗಿ ತಿಳಿಸಿದ್ದಾರೆ. ಮೆಟ್ರೋ ದರ ಏರಿಕೆಯನ್ನು ಬಿಜೆಪಿ ರಾಜಕೀಯ ಎಂದು ಟೀಕಿಸಿದ್ದಾರೆ.
ಮೈಸೂರು, ಫೆಬ್ರವರಿ 12: ಯಾರು ಏನು ಹೇಳಿದರು ಎಂಬುದು ಮುಖ್ಯವಲ್ಲ. ನಾನು ಉಪಮುಖ್ಯಮಂತ್ರಿಯಾಗಿ ಹೇಳುತ್ತಿದ್ದೇನೆ, ಉದಯಗಿರಿ ಗಲಭೆ (Udayagiri riots) ಪೊಲೀಸರದ್ದು ಯಾವುದೇ ತಪ್ಪಿಲ್ಲ. ಪೊಲೀಸರು ಸರಿಯಾಗಿ ಕೆಲಸ ಮಾಡಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಪೊಲೀಸರು ಗಾಯಗೊಂಡರೂ ಸಮಯ ಪ್ರಜ್ಞೆಯಿಂದ ಕೆಲಸ ಮಾಡಿದ್ದಾರೆ. ನಾನು ನಮ್ಮ ಪೊಲೀಸರ ಪರವಾಗಿಯೇ ಇದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು.
ಉದಯಗಿರಿ ಗಲಭೆಗೆ ಪೊಲೀಸರ ಕರ್ತವ್ಯಲೋಪ ಕಾರಣ ಎಂಬ ಸಚಿವ ಕೆಎಸ್ ರಾಜಣ್ಣ ಹೇಳಿಕೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ರಾಜಣ್ಣ ಅವರ ಮಾತಿಗೆ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಾರೆ. 8-10 ದಿನದಲ್ಲಿ ಮುಖ್ಯಮಂತ್ರಿಗಳೇ ಪ್ರತಿಕ್ರಿಯೆ ಕೊಡುತ್ತಾರೆ. ಮೈಸೂರಿನ ನೆಲದಲ್ಲಿ ನಿಂತು ಹೇಳ್ತಿದ್ದೇನೆ, ಪೊಲೀಸರದ್ದು ತಪ್ಪಿಲ್ಲ. ಎಲ್ಲಾ ಮಾಹಿತಿ ಪಡೆದಿದ್ದೇನೆ, ಪೊಲೀಸರು ಅನಾಹುತ ತಪ್ಪಿಸಿದ್ದಾರೆ ಎಂದರು.
ಕಲ್ಲು ಎಸೆದಿರುವವರೆಲ್ಲರೂ 14, 15 ವರ್ಷದ ಹುಡುಗರು. ಮುಖಂಡರ ಮಾತನ್ನೂ ಅವರು ಕೇಳಿಲ್ಲ. ಹಿರಿಯರು ಮತ್ತು ಮುಖಂಡರೂ ಸೇರಿ ಗಲಭೆ ಕಂಟ್ರೋಲ್ ಮಾಡಿದ್ದಾರೆ. ಪೊಲೀಸರಿಗಾದರೆ ಪ್ರೊಟೆಕ್ಷನ್ ಇತ್ತು, ಅಲ್ಲಿದ್ದ ಜನರಿಗೆ ಇರಲಿಲ್ಲ. ಪೊಲೀಸರು ಗಲಭೆ ಮಾಡಿದವರ ಪತ್ತೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಅರೆಸ್ಟ್ ಮಾಡುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಉದಯಗಿರಿ ಗಲಭೆಗೆ ಕಾರಣವಾಯ್ತಾ ಮುಷ್ತಾಕ್ನ ಪ್ರಚೋದನಾಕಾರಿ ಹೇಳಿಕೆ?
ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರದಲ್ಲಿ ಮಾತ್ರವಲ್ಲ, ಬಿಜೆಪಿ ಎಲ್ಲ ವಿಚಾರಗಳಲ್ಲೂ ರಾಜಕೀಯ ಮಾಡುತ್ತಿದೆ. ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರ ಕೇಂದ್ರ ವ್ಯಾಪ್ತಿಗೆ ಬರುತ್ತೆ. ದರ ಏರಿಕೆಗೆ ನೇಮಿಸಿರುವ ಮುಖ್ಯಸ್ಥರು ಅದನ್ನು ನಿರ್ಧಾರ ಮಾಡ್ತಾರೆ. ಮೆಟ್ರೋ ಪ್ರಯಾಣ ದರ ಇಳಿಕೆ ಮಾಡುವುದು ನಮ್ಮ ಕೈಯಲ್ಲಿ ಇಲ್ಲ ಎಂದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ದೆಹಲಿ ಪ್ರವಾಸ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್, ಅವರು ದೊಡ್ಡವರು, ನಾನು ದೊಡ್ಡವರ ಬಗ್ಗೆ ಮಾತನಾಡಲ್ಲ. ರಾಜಣ್ಣ ನಮ್ಮ ಪಕ್ಷದ ಹಿರಿಯ ನಾಯಕರು. ಕೆ.ಎನ್.ರಾಜಣ್ಣ ಬಗ್ಗೆ ನಾನೇನು ಪ್ರತಿಕ್ರಿಯೆ ಕೊಡಲಿ ಹೇಳಿ? ಎಂದು ಪ್ರಶ್ನಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ