ಬೆಂಗಳೂರು, (ಸೆಪ್ಟೆಂಬರ್ 03): ಮುಖ್ಯಮಂತ್ರಿ ಸಿದ್ದರಾಮ್ಯಯ ಅವರು ಇಂದು (ಸೆಪ್ಟೆಂಬರ್ 03) ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಮೊದಲು ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಅಮ್ಮನ ದರ್ಶನ್ ಪಡೆದುಕೊಂಡರು. ಬಳಿಕ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನಡೆಸಿದರು. ಈ ಸಭೆಯಲ್ಲಿ ಬೆಟ್ಟದ ಅಭಿವೃದ್ಧಿಯ ಬಗ್ಗೆ ಮಹತ್ವದ ಚರ್ಚೆಗಳು ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧಿಸಲಾಗಿದೆ. ಅಲ್ಲದೇ ಚಾಮುಂಡಿ ದರ್ಶನ ವೇಳೆ ಮೊಬೈಲ್ ನಿಷೇಧ ಮಾಡಲಾಗಿದೆ ಎಂದು ಘೋಷಿಸಿದರು.
ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಚಾಮುಂಡಿಬೆಟ್ಟದಲ್ಲಿ ಪ್ರಸಾದ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ. ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ, ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧಿಸಲಾಗಿದೆ. ಅಲ್ಲದೇ ಚಾಮುಂಡಿ ದರ್ಶನ ವೇಳೆ ಮೊಬೈಲ್ ನಿಷೇಧ ಮಾಡಲಾಗಿದೆ . ಚಾಮುಂಡಿಬೆಟ್ಟವಷ್ಟೇ ಅಲ್ಲ ಎಲ್ಲಾ ದೇಗುಲಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಚಾಮುಂಡಿಬೆಟ್ಟದಲ್ಲಿ ಸುರಕ್ಷತೆ ಇರಬೇಕೆಂದು ಸಿಸಿಟಿವಿ ಅಳವಡಿಕೆ ಮಾಡಲಾಗುವುದು. ಚಾಮುಂಡಿಬೆಟ್ಟದಲ್ಲಿ ಪ್ರಸಾದ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ನಮ್ಮ ಆಚರಣೆ, ಪರಂಪರೆಗೆ ಧಕ್ಕೆ: ಯದುವೀರ್
ಚಾಮುಂಡಿ ಬೆಟ್ಟ ಅಭಿವೃದ್ಧಿ ದೃಷ್ಟಿಯಿಂದ ಪ್ರಾಧಿಕಾರ ಮಾಡಿದ್ದೇವೆ. ಹಾಗಿಯೇ ಭಕ್ತಾದಿಗಳಿಗೆ ಸೌಲಭ್ಯ ಒದಗಿಸಲು ಪ್ರಾಧಿಕಾರ ರಚನೆ ಮಾಡಲಾಗಿದ್ದು, ಅಪರಾಧ ತಡೆಗಟ್ಟಲು ಟಾಸ್ಕ್ಫೋರ್ಸ್ ರಚನೆ ಮಾಡುತ್ತೇವೆ. ದಸರಾ ಸಂದರ್ಭದಲ್ಲಿ ವಿವಿಧ ಭಾಗದಿಂದ ಜನರು ಬರುತ್ತಾರೆ. ಚಾಮುಂಡಿಬೆಟ್ಟಕ್ಕೆ ಬರುವ ಭಕ್ತರಿಗೆ ಸೌಲಭ್ಯ ಒದಗಿಸಬೇಕಿದೆ. ಚಾಮುಂಡಿಬೆಟ್ಟದಲ್ಲಿ ಸ್ವಚ್ಛತೆ ಬಗ್ಗೆ ಗಮನಹರಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೇವಿ ಕೆರೆ, ನಂದಿ ಪ್ರದೇಶ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ. ಮುಂದಿನ 5 ವರ್ಷದ ಅಭಿವೃದ್ಧಿಗೆ ಪ್ಲ್ಯಾನ್ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. ಚಾಮುಂಡಿಬೆಟ್ಟದಲ್ಲಿ ರೋಪ್ ವೇ ಯೋಜನೆ ಚಿಂತನೆ ನಡೆದಿದೆ. ಪರಿಸರವಾದಿಗಳ ವಿರೋಧದಿಂದ ಹಾಗೆಯೇ ನಿಂತು ಹೋಗಿದೆ. ಚಾಮುಂಡಿ ಬೆಟ್ಟದ ಮೆಟ್ಟಿಲುಗಳ ಅಭಿವೃದ್ಧಿಗೂ ಕ್ರಮ ಕೈಳ್ಳಲಾಗುವುದು. ದೇವಾಲಯದ ಆಸ್ತಿ ಸರ್ವೆ, ಒತ್ತುವರಿ ತೆರವಿಗೆ ಸೂಚಿಸಿದ್ದೇನೆ. ಅಲ್ಲದೇ ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗೆ ಯಾವುದೇ ವಸ್ತ್ರ ಸಂಹಿತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನನ್ನ ಅಧ್ಯಕ್ಷತೆಯಲ್ಲಿ ನಡೆದಿದೆ. ಹಿಂದಿನ ಸಮಿತಿ ಕ್ಷೇತ್ರ ಅಭಿವೃದ್ಧಿ ಹಾಗೂ ಭಕ್ತರಿಗೆ ಮೂಲಸೌಕರ್ಯ ಒದಗಿಸುವ ಕೆಲಸ ಮಾಡ್ತಿತ್ತು. ಮಹದೇಶ್ವರ ಬೆಟ್ಟದ ರೀತಿ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಪ್ರಾಧಿಕಾರ ರಚನೆ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತಾದಿಗಳು ಬರುತ್ತಾರೆ. ಹೀಗಾಗಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸ ಆಗಬೇಕಿದೆ. ಚಾಮುಂಡೇಶ್ವರಿ ಕ್ಷೇತ್ರ ಹಾಗೂ ಕ್ಷೇತ್ರಕ್ಕೆ ಸೇರಿದ ದೇವಾಲಯಗಳ ಅಭಿವೃದ್ಧಿ ಪ್ರಾಧಿಕಾರದ ಉದ್ದೇಶವಾಗಿದೆ. ಭಕ್ತರಿಗೆ ಅಗತ್ಯ ಸೌಲಭ್ಯ ಒದಗಿಸುವುದು ಉದ್ದೇಶ. ಈ ಹಿಂದೆ ಬಸ್ ಸ್ಟ್ಯಾಂಡ್, ಪಾರ್ಕಿಂಗ್ ಹಾಗೂ ಸ್ಟಾಲ್‌ಗಳನ್ನ ನಿರ್ಮಾಣ ಮಾಡಲಾಗಿತ್ತು. ಬಾಕಿಯಿರುವ ಯೋಜನೆಗಳು ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
ಕೇಂದ್ರ ಸರ್ಕಾರದ ಪ್ರಸಾದ ಯೋಜನೆ ಜಾರಿ ಮಾಡಬೇಕು. ಈ ಯೋಜನೆ ಬೇಕಾದ ಹೆಚ್ಚುವರಿ 60 ಕೋಟಿ ರೂ, ಹಣ ಪ್ರಾಧಿಕಾರ ಭರಿಸಲಿದೆ. 5 ಸಮೂಹ ದೇವಾಲಯಗಳ ಜೀರ್ಣೋದ್ಧಾರ. ಪ್ರಸನ್ನ ಕೃಷ್ಣಸ್ವಾಮಿ ದೇವಾಲಯ, ಗಾಯತ್ರಿ ಅಮ್ಮನವರ ದೇವಾಲಯ, ಕೋಟೆ ಆಂಜನೇಯ ದೇವಾಲಯ, ಭುವನೇಶ್ವರಿ ದೇವಾಲಯ, ವರಹಾಸ್ವಾಮಿ ದೇವಾಲಯ ಜೀರ್ಣೋದ್ಧಾರ ಮಾಡಲಾಗುವುದು. ದೇವಾಲಯ ಒಳಭಾಗದಲ್ಲಿ ಮೊಬೈಲ್ ಬಳಕೆ ಮತ್ತು ಫೋಟೋಗ್ರಫಿ ನಿಷೇಧಿಸಲಾಗಿದೆ. ಬೆಟ್ಟದ ಸಿಬ್ಬಂದಿಗಳಿಗೆ ವೈದ್ಯಕೀಯ ಸೌಲಭ್ಯ, ಶಾಶ್ವತ ಸಿಬ್ಬಂದಿ ಮಕ್ಕಳಿಗೆ ಶಿಕ್ಷಣ ಸೌಲಭ್ಯ ನೀಡಲಾಗುತ್ತದೆ. ಚಾಮುಂಡಿ ಬೆಟ್ಟ ಮತ್ತಷ್ಟು ಆಕರ್ಷಣೀಯವಾಗಬೇಕು. ದಾಸೋಹ ಭವನದಲ್ಲಿ ಊಟದ ವ್ಯವಸ್ಥೆ ಸುಧಾರಣೆ ಮಾಡಲಾಗುತ್ತೆ. ರುಚಿಕರ ಊಟ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.
ದಾಸೋಹ ಭವನ ಅಭಿವೃದ್ಧಿಗೆ ಶೀಘ್ರದಲ್ಲೇ ಕ್ರಮ ವಹಿಸಲಾಗುವುದು. ಪ್ರಾಧಿಕಾರದಲ್ಲಿ ದುಡ್ಡಿಗೆ ಕೊರತೆ ಇಲ್ಲ. 169 ಕೋಟಿ ರೂ. ನಿಶ್ಚಿತ ಠೇವಣಿ ಇದೆ. ಪ್ರತಿವರ್ಷ ಆದಾಯ ಬರುತ್ತಿದೆ. ಖರ್ಚು ಮಾಡಿಯೂ ಆದಾಯ ಉಳಿಯುತ್ತಿದೆ. 2023-24ರಲ್ಲಿ 49.64 ಕೋಟಿ ರೂ. ಆದಾಯ. ಖರ್ಚು 21ಕೋಟಿ ರೂ. ಆಗಿದ್ದು, ಇನ್ನು 28.18 ಕೋಟಿ ಉಳಿತಾಯವಾಗಿದೆ. ಪ್ರತಿವರ್ಷ ಭಕ್ತರು ಹೆಚ್ಚಾಗುತ್ತಿದ್ದಾರೆ, ಆದಾಯ ಹೆಚ್ಚುತ್ತಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Tue, 3 September 24