30 ವರ್ಷಗಳ ನಂತರ ಪಿಯುಸಿ ಪರೀಕ್ಷೆಯಲ್ಲಿ ಪಾಸ್ ಆದ ಶಾಸಕ ಸಾ ರಾ ಮಹೇಶ್ ಪತ್ನಿ
ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು, ವಿಜ್ಞಾನ ವಿಭಾಗದಲ್ಲಿ ನಾಲ್ವರು, ವಾಣಿಜ್ಯ ವಿಭಾಗದಲ್ಲಿ ನಾಲ್ವರು ಹಾಗೂ ಕಲಾ ವಿಭಾಗದಲ್ಲಿ ಇಬ್ಬರು ಅತ್ಯಧಿಕ ಅಂಕಗಳನ್ನು ಪಡೆದು ಟಾಪರ್ಸ್ಗಳಾಗಿ ಹೊರಹೊಮ್ಮಿದ್ದಾರೆ.
ಮೈಸೂರು: ಸಾಧನೆ ಮಾಡಲು ವಯಸ್ಸಾಗಲಿ, ಜೀವನದ ಕಷ್ಟಗಳಾಗಲಿ, ಒತ್ತಡಗಳಾಗಲಿ ಅಡ್ಡಿಯಾಗುವುದಿಲ್ಲ. ಸಾಧಿಸುವ ಮನಸಿದ್ದರೆ ಸಾಕು ಅಂದುಕೊಂಡಿದ್ದನ್ನು ಸಾಧಿಸಬಹುದು. ಇದಕ್ಕೆ ತಾಜಾ ಉದಾಹರಣೆ ಮೈಸೂರು ಜಿಲ್ಲೆ ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಾ ರಾ ಮಹೇಶ್ ಪತ್ನಿ ಎಂ ಎನ್ ಅನಿತಾ ಸಾ ರಾ ಮಹೇಶ್. 30 ವರ್ಷಗಳ ನಂತರ ಅನಿತಾ ಅವರು ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಅದು ಸಹಾ ಉತ್ತಮ ಶ್ರೇಣಿಯಲ್ಲಿ. ಶಾಸಕ ಸಾ ರಾ ಮಹೇಶ್ ಪತ್ನಿ ಅನಿತಾ 30 ವರ್ಷದ ನಂತರ ಪಿಯುಸಿ ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 419 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಅನಿತಾ ಸಾ ರಾ ಮಹೇಶ್ ಅವರು1993ರಲ್ಲಿ ಎಸ್ ಎಸ್ಎಲ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. ನಂತರ ಮುಂದಿನ ವಿದ್ಯಾಭ್ಯಾಸ ಮುಂದುವರಿಸಿರಲಿಲ್ಲ. ಇದೀಗ ಖಾಸಗಿಯಾಗಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಸಾ ರಾ ಮಹೇಶ್ ಮತ್ತು ಅನಿತಾ ಸಾ ರಾ ಮಹೇಶ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹಿರಿಯ ಪುತ್ರ ಧನುಷ್ ಎಂಬಿಬಿಎಸ್ ಮುಗಿಸಿ ಎಂಎಸ್ ಮಾಡುತ್ತಿದ್ದಾರೆ. ಕಿರಿಯ ಪುತ್ರ ಜಯಂತ್ ಉದ್ಯಮಿಯಾಗಿದ್ದಾರೆ.
ಮಧ್ಯಮ ಕುಟುಂಬ – ಜವಾಬ್ದಾರಿಗಳ ನಡುವೆ: ಸಾ ರಾ ಮಹೇಶ್ ಪತ್ನಿ ಅನಿತಾ ಹುಟ್ಟಿದ್ದು ಮೈಸೂರು ನಗರದ ಚಾಮರಾಜ ಮೊಹಲ್ಲಾದಲ್ಲಿ. ತಂದೆ ನಾರಾಯಣ್ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ರಾಧಮ್ಮ ಗೃಹಿಣಿ. ಇವರಿಗೆ ಅನಿತಾ ಸೇರಿ ಮೂವರು ಹೆಣ್ಣು ಮಕ್ಕಳು. ಅನಿತಾರೇ ಮನೆಯ ಹಿರಿಯ ಮಗಳು. ತಂದೆ ತರುವ ಸಂಬಳದಲ್ಲೇ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸ ಎಲ್ಲವೂ ಆಗಬೇಕಿತ್ತು. ಇಷ್ಟಾದರು ತಂದೆ ಎಂದು ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡರು. ಅಷ್ಟೇ ಅಲ್ಲ ಸ್ವಾಭಿಮಾನದಿಂದ ಬದುಕುವುದನ್ನು ಹೇಳಿಕೊಟ್ಟರು. ಮನೆಯ ಹಿರಿಯ ಮಗಳಾದ ಅನಿತಾ ಎಲ್ಲರಿಗಿಂತ ಬುದ್ದಿವಂತೆ ಓದಿನಲ್ಲೂ ಮುಂದಿದ್ದರು. ಹಿರಿಯ ಮಗಳಾದ ಕಾರಣ ಜವಾಬ್ದಾರಿ ಸಹಾ ಜಾಸ್ತಿಯಿತ್ತು. ಎಸ್ ಎಸ್ ಎಲ್ ಸಿಯಲ್ಲಿ ಅನಿತಾ ಉತ್ತಮ ಅಂಕ ಗಳಿಸಿದ್ರು. ಆದರೆ ಅವರಿಗೆ ಮುಂದೆ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಲಿಲ್ಲ. ಚೆನ್ನಾಗಿ ಓದಬೇಕೆಂಬ ಕನಸು ಕಟ್ಟಿಕೊಂಡಿದ್ದರು ಪರಿಸ್ಥಿತಿ ಅದಕ್ಕೆ ಪೂರಕವಾಗಿರಲಿಲ್ಲ.
ಇದನ್ನೂ ಓದಿ: Viral Video: ವಿವಾಹ ಸಂಭ್ರಮದಲ್ಲಿ ಭರ್ಜರಿ ಡಾನ್ಸ್, ಕಣ್ಣು ಮಿಟುಕಿಸಿ ನೋಡುವಷ್ಟರಲ್ಲಿ ಹೊಂಡದಲ್ಲಿದ್ದ ಜನರು! ವಿಡಿಯೋ ವೈರಲ್
ಕನ್ನಡಲ್ಲಿ 100ಕ್ಕೆ 98: ಕಂತೆಗೆ ತಕ್ಕ ಬೊಂತೆ ಅಂತಾ ನಮ್ಮ ಕಡೆ ಒಂದು ನಾಣ್ಣುಡಿಯಿದೆ. ಈ ಮಾತು ಸಾರಾ ಮಹೇಶ್ ಹಾಗೂ ಅನಿತಾ ದಂಪತಿ ವಿಷಯದಲ್ಲಿ ನಿಜವಾಗಿದೆ. ಹೇಳಿ ಕೇಳಿ ಸಾ ರಾ ಮಹೇಶ್ ಅಪ್ಪಟ ಕನ್ನಡ ಪ್ರೇಮಿ. ಅದಕ್ಕಾಗಿಯೇ ತಮ್ಮ ಹೆಸರಿನ ಮುಂದೆ ಎಸ್ ಆರ್ ಅಂತಾ ಹಾಕಿಕೊಳ್ಳದೆ ಸಾ ರಾ ಅಂತಾ ಹಾಕಿಕೊಂಡಿದ್ದಾರೆ. ಅನಿತಾ ಅವರಿಗೂ ಕನ್ನಡ ಅಂದರೆ ಎಲ್ಲಿಲ್ಲದ ಪ್ರೀತಿ. ಇದಕ್ಕೆ ಸಾಕ್ಷಿ ಅವರು ದ್ವಿತೀಯ ಪಿಯುಸಿ ಕನ್ನಡದಲ್ಲಿ ಪಡೆದಿರುವ ಅಂಕ. ಕನ್ನಡದಲ್ಲಿ ಅನಿತಾ 100ಕ್ಕೆ 98 ಅಂಕ ಪಡೆದಿದ್ದಾರೆ. ಉಳಿದಂತೆ ಇಂಗ್ಲೀಷ್‌ನಲ್ಲಿ 70, ಇತಿಹಾಸದಲ್ಲಿ 70, ಅರ್ಥಶಾಸ್ತ್ರದಲ್ಲಿ 56, ಸಮಾಜಶಾಸ್ತ್ರದಲ್ಲಿ 70 ಹಾಗೂ ರಾಜಕೀಯ ಶಾಸ್ತ್ರದಲ್ಲಿ 55 ಅಂಕಗಳೊಂದಿಗೆ ಒಟ್ಟು 419 ಅಂಕವನ್ನು ಗಳಿಸಿದ್ದಾರೆ.
ಸಂಗೀತದಲ್ಲಿ ಪದವಿ – ಹಿಂದಿ ಭಾಷೆಯಲ್ಲೂ ಪದವಿ: ಅನಿತಾ ಅವರಿಗೆ ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದಿದ್ದರು, ಸಂಗೀತದಲ್ಲಿ ತಮ್ಮ ಪದವಿ ಮುಗಿಸಿದ್ದರು. ತಮ್ಮ ಬಿಡುವಿನ ಸಮಯದಲ್ಲಿ ಹಿಂದೂಸ್ಥಾನಿ ಸಂಗೀತ ಹಾಗೂ ಕರ್ನಾಟಕ ಸಂಗೀತದ ಸಂಗೀತಾಭ್ಯಾಸ ಮಾಡಿದ್ದು ಮಾತ್ರವಲ್ಲ ಅದರಲ್ಲಿ ಪದವಿ ಸಹಾ ಪಡೆದರು. ಇದರ ಜೊತೆಗೆ ಹಿಂದಿ ಭಾಷೆ ಬಗ್ಗೆ ಅಧ್ಯಯನ ಮಾಡಿದ ಅನಿತಾ ಅದರಲ್ಲೂ ಪದವಿ ಪಡೆದಿದ್ದಾರೆ.
ಮನೆಯವರಿಗೂ ಗೊತ್ತಿಲ್ಲದೆ ಪರೀಕ್ಷೆಗೆ ತಯಾರಿ: ಅನಿತಾ ಸಾ ರಾ ಮಹೇಶ್ ಅವರು ಖಾಸಗಿಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಕಟ್ಟಿದ್ದ ವಿಚಾರ ಖುದ್ದು ಸಾ ರಾ ಮಹೇಶ್‌ಗಾಗಲಿ, ಇಬ್ಬರು ಮಕ್ಕಳಿಗಾಗಲಿ ಗೊತ್ತೇ ಇರಲಿಲ್ಲ. ಪರೀಕ್ಷೆ ಕಟ್ಟಿದ ನಂತರ ಅನಿತಾ ತಾವೇ ಕೆಲ ಸ್ನೇಹಿತರ ಬಳಿ ನೋಟ್ಸ್‌ಗಳನ್ನು ಪಡೆದುಕೊಂಡು ಪರೀಕ್ಷೆಗೆ ತಯಾರಿ ನಡೆಸಿದ್ದರು. ಮನೆ ಕೆಲಸ ಎಲ್ಲಾ ಮುಗಿದ ಮೇಲೆ ಪತಿ, ಮಕ್ಕಳು ಮನೆಯಿಂದ ಹೊರಗೆ ಹೋದ ಮೇಲೆ ಓದುವುದಕ್ಕೆ ಶುರು ಮಾಡುತ್ತಿದ್ದರು. ಪತಿ ಮಕ್ಕಳು ಬರುವ ಸಮಯಕ್ಕೆ ಎಲ್ಲವನ್ನೂ ನಿಲ್ಲಿಸಿ ಟಿವಿ ಮುಂದೆ ಕುಳಿತುಕೊಳ್ಳುವುದು ಅಥವಾ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಪರೀಕ್ಷೆಗೆ ಕೆಲ ದಿನ ಇರುವಂತೆ ಈ ವಿಚಾರವನ್ನು ಪತಿ ಸಾ ರಾ ಮಹೇಶ್ ಅವರಿಗೆ ಅನಿತಾ ತಿಳಿಸಿದ್ದಾರೆ.
ಹಿರಿಯ ಮಗ ಧನುಷ್ ಮಾತನಾಡಿ, ಅಮ್ಮ ಬರೀ ಎಸ್ಎಸ್ಎಲ್ಸಿ ಓದಿದ್ದಾರೆ ಅನ್ನೋ ಫೀಲ್ ನನಗೆ ಯಾವತ್ತು ಬಂದೇ ಇರಲಿಲ್ಲ. ಯಾಕಂದ್ರೆ ಅಮ್ಮನ ಸಾಮಾನ್ಯ ಜ್ಞಾನ ಅಷ್ಟರಮಟ್ಟಿಗಿತ್ತು. ನಾನು ವೈದ್ಯನಾಗಿದ್ದೇನೆ ಅಂದರೆ ಅದಕ್ಕೆ ಅಮ್ಮನೇ ಕಾರಣ. ಕೂರಿಸಿಕೊಂಡು ನನಗೆ ಜಯಂತ್‌ಗೆ ಓದಿಸುತ್ತಿದ್ದದ್ದು ಈಗಲೂ ಚೆನ್ನಾಗಿ ನೆನಪಿದೆ. ಆಕೆಗೆ ವಿಚಾರಗಳ ಬಗ್ಗೆ ಇದ್ದ ಅರಿವು ನಿಜಕ್ಕೂ ನಮಗೆ ಅಚ್ಚರಿ ತರಿಸುತಿತ್ತು ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಿರಿಯ ಮಗ ಜಯಂತ್, ಅಮ್ಮ ನಮಗೆ ಓದಿ ಓದಿ ಅಂತಾ ಹೇಳುತ್ತಿದ್ದಾಗ ಏಕೆ ಈ ರೀತಿ ಹೇಳುತ್ತಿದ್ದರು ಅಂತಾ ಗೊತ್ತಾಗುತ್ತಿರಲಿಲ್ಲ. ಈಗ ನನಗೆ ಅದರ ಅರಿವಾಯಿತು. ಅಮ್ಮ ಸಾಕಷ್ಟು ಬಾರಿ ಶಿಕ್ಷಣದ ಮಹತ್ವದ ಬಗ್ಗೆ ನನಗೆ ತಿಳಿ ಹೇಳಿದ್ದಾರೆ. ಓದಿ ವಿದ್ಯಾವಂತನಾಗು ಅಂತಾ ಬುದ್ದಿ ಹೇಳಿದ್ದಾರೆ. ಇವತ್ತು ನಿಜಕ್ಕೂ ಅಮ್ಮನ ಸಾಧನೆ ನನಗೆ ತುಂಬಾ ಖುಷಿ ಕೊಟ್ಟಿದೆ ಎಂದರು
ವರದಿ: ರಾಮ್
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Sat, 18 June 22