ವ್ಯಾಪಾರಕ್ಕೆ ಸಮಯ ನಿಗದಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ ವ್ಯಾಪಾರಸ್ಥರು

ಬೆಳಗ್ಗೆ 6 ರಿಂದ 8 ಗಂಟೆಯವರೆಗೂ ಕೆಲವು ಜನರಿಗಾದರೂ ಅವಕಾಶ ಮಾಡಿಕೊಡಿ ಇಲ್ಲವಾದರೆ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮ್ಮ ಮುಂದೆ ಬೇರೆ ದಾರಿ ಇಲ್ಲ ಎಂದು ಸಂತೆ ಮಾರುಕಟ್ಟೆಯ ವ್ಯಾಪಾರಿಗಳು ಟಿವಿ9 ಡಿಜಿಟಲ್ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

  • TV9 Web Team
  • Published On - 8:54 AM, 2 May 2021
ವ್ಯಾಪಾರಕ್ಕೆ ಸಮಯ ನಿಗದಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ ವ್ಯಾಪಾರಸ್ಥರು
ಪ್ರಾತಿನಿಧಿಕ ಚಿತ್ರ

ಮೈಸೂರು: ಕೊರೊನಾ ಎರಡನೇ ಅಲೆಯ ಹೆಚ್ಚಳದ ಹಿನೆಲೆಯಲ್ಲಿ ಏಪ್ರಿಲ್ 28ರಿಂದ ಜನತಾ ಕರ್ಫೂ ಘೋಷಣೆ ಮಾಡಿದ್ದು, ಬೆಳಿಗ್ಗೆ 10 ಗಂಟೆ ಒಳಗಾಗಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ ಇನ್ನುಳಿದಂತೆ ಸಂತೆ ಮಾರುಕಟ್ಟೆಗಳೇಲ್ಲವೂ ಬಂದ್ ಆಗಿದ್ದು, ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡಿದೆ. ಹೀಗಾಗಿ ಮೈಸೂರಿನಲ್ಲಿ ನೊಂದ ವ್ಯಾಪಾರಿಗಳು ಮಾರುಕಟ್ಟೆಯಲ್ಲಿ ವ್ಯಾಪಾರ ಬಂದ್ ವಿಚಾರಕ್ಕೆ ಸಂಬಂಧಪಟ್ಟಂತೆ ಆಕ್ರೋಶ ಹೊರಹಾಕಿದ್ದು, ನಮಗೆ ವ್ಯಾಪಾರಕ್ಕೆ ಅವಕಾಶ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಮಗೂ ಸಮಯ ನಿಗದಿ ಮಾಡಿ ಎನ್ನುತ್ತಿರುವ ವ್ಯಾಪಾರಿಗಳು, ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ. ಇಲ್ಲವಾದರೆ ಜೀವನ ನಡೆಸುವುದು ಕಷ್ಟವಾಗುತ್ತದೆ. ಬೆಳಗ್ಗೆ 6 ರಿಂದ 8 ಗಂಟೆಯವರೆಗೂ ಕೆಲವು ಜನರಿಗಾದರೂ ಅವಕಾಶ ಮಾಡಿಕೊಡಿ ಇಲ್ಲವಾದರೆ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮ್ಮ ಮುಂದೆ ಬೇರೆ ದಾರಿ ಇಲ್ಲ ಎಂದು ಸಂತೆ ಮಾರುಕಟ್ಟೆಯ ವ್ಯಾಪಾರಿಗಳು ಟಿವಿ9 ಡಿಜಿಟಲ್ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸರ್ಕಾರದಿಂದ ಪರಿಷ್ಕರಣೆ ಮಾರ್ಗಸೂಚಿ ಬಿಡುಗಡೆ
ಒಂದು ಕಡೆ ವ್ಯಾಪರಿಗಳು ತಮ್ಮ ನೋವನ್ನು ಸರ್ಕಾರದ ಮುಂದಿಟ್ಟರೆ ಇನ್ನೊಂದು ಕಡೆ ಮೈಸೂರಿನಲ್ಲಿ ಸರ್ಕಾರದಿಂದ ಪರಿಷ್ಕರಣೆ ಮಾರ್ಗಸೂಚಿ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಸಂತೆ, ಮಾರುಕಟ್ಟೆಯನ್ನು ಸಂಪೂರ್ಣ ಬಂದ್ ಮಾಡಿಸುತ್ತಿದ್ದು, ದೇವರಾಜ ಮಾರುಕಟ್ಟೆಯನ್ನು ಅಧಿಕಾರಿಗಳು ಖಾಲಿ ಮಾಡಿಸುತ್ತಿದ್ದಾರೆ. ಹೀಗಾಗಿ ವ್ಯಾಪಾರಕ್ಕೆ ತಂದ ಹಣ್ಣು-ತರಕಾರಿಗಳನ್ನು ವ್ಯಾಪಾರಸ್ಥರು ಬೇರೆಡೆಗೆ ಸ್ಥಳಾಂತರ ಮಾಡುತ್ತಿದ್ದಾರೆ. ಆದರೆ
ತರಕಾರಿ, ಹಾಲಿನ ಬೂತ್ ತೆರೆಯಲು ಅವಕಾಶ ನೀಡಿದ್ದು, ಜೊತೆಗೆ ತಳ್ಳುಗಾಡಿಗಳಲ್ಲೂ ಹಣ್ಣು, ತರಕಾರಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಹೆಚ್ಚಿನ ವ್ಯಾಪರಕ್ಕಾಗಿ ಎಂ‌ ಜಿ ರಸ್ತೆ ಮಾರುಕಟ್ಟೆಯಲ್ಲಿ ಅವಕಾಶ ನೀಡಿದ್ದು, ಧ್ವನಿವರ್ಧಕದ ಮೂಲಕ ನಾಳೆಯಿಂದ ಬಂದ್ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.

ಒಟ್ಟಾರೆ ಕೊರೊನಾ ಎರಡನೇ ಅಲೆಯಿಂದ ಜಾಗೃತರಾಗಿರುವುದು ಎಷ್ಟು ಮುಖ್ಯವೋ ನಿತ್ಯದ ವ್ಯಾಪರವನ್ನು ಆಧರಿಸಿ ಜೀವನ ನಡೆಸುತ್ತಿದ್ದ ಮಾರಾಟಗಾರರ ಸ್ಥಿತಿ ಕೂಡ ಹದಗೆಡದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ ಎನಿಸಿಕೊಳ್ಳುತ್ತದೆ.

ಇದನ್ನೂ ಓದಿ:

ಕೊವಿಡ್​ ಸಂಬಂಧಿತ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದ್ದರೂ ಕದ್ದು ಮುಚ್ಚಿ ವ್ಯಾಪಾರ; ಎಲ್ಲೆಲ್ಲಿ ನಿಯಮ ಪಾಲಿಸುತ್ತಿಲ್ಲ?

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೂಲ್ಸ್ ಬ್ರೇಕ್; ಹಣ್ಣು, ತರಕಾರಿ ಖರೀದಿಗೆ ಮುಗಿಬಿದ್ದ ಜನ