‘ಸಂಸತ್ ಭವನದ ಮುಂದೆ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಿ’ – ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಹೇಳಿಕೆ
ಟಿಪ್ಪು ಸುಲ್ತಾನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಅಂತವರ ಬಗ್ಗೆ ಗೌರವದಿಂದ ಮಾತನಾಡಬೇಕು. ಪಾರ್ಲಿಮೆಂಟ್ ಮುಂದೆ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಬೇಕು. ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಾವಣೆ ಮಾಡದೆ ಬೇರೊಂದು ರೈಲು ತಂದು ಒಡೆಯರ್ ಹೆಸರು ಇಡಿ. -ವಾಟಾಳ್ ನಾಗರಾಜ್
ಬೆಂಗಳೂರು: ‘ಸಂಸತ್ ಭವನದ ಮುಂದೆ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಿ’ ಎಂದು ಮೈಸೂರಿನಲ್ಲಿ ಹೋರಾಟಗಾರ ವಾಟಾಳ್ ನಾಗರಾಜ್(Vatal Nagaraj) ಹೇಳಿಕೆ ನೀಡಿದ್ದಾರೆ. ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾವಣೆ ಬಗ್ಗೆ ಹೇಳಿಕೆ ನೀಡಿದ ವಾಟಾಳ್ ನಾಗರಾಜ್, ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರು ಬದಲಾವಣೆ ಮಾಡುತ್ತೇವೆ ಎನ್ನುವುದು ಖಂಡನೀಯ. ಪ್ರತಾಪ್ ಸಿಂಹ ಬೇಜವಾಬ್ದಾರಿಯುತ ಹೇಳಿಕೆ ನೀಡಬಾರದು ಎಂದು ಮೈಸೂರಿನಲ್ಲಿ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ಹೊರ ಹಾಕಿದ್ದಾರೆ.
ಟಿಪ್ಪು ಸುಲ್ತಾನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಅಂತವರ ಬಗ್ಗೆ ಗೌರವದಿಂದ ಮಾತನಾಡಬೇಕು. ಪಾರ್ಲಿಮೆಂಟ್ ಮುಂದೆ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಬೇಕು. ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಾವಣೆ ಮಾಡದೆ ಬೇರೊಂದು ರೈಲು ತಂದು ಒಡೆಯರ್ ಹೆಸರು ಇಡಿ. ಇಲ್ಲ ಮೈಸೂರು ರೈಲ್ವೆ ನಿಲ್ದಾಣಕ್ಕೆ ಒಡೆಯರ್ ಹೆಸರಿಡಿ. ಆದರೆ ಈ ರೀತಿ ಸಣ್ಣತನದಲ್ಲಿ ಹೆಸರು ಬದಲಾವಣೆ ಮಾಡೋದು ಸರಿಯಲ್ಲ. ರಾಜೀವ್ ಗಾಂಧಿ ಉದ್ಯಾನವನದ ಹೆಸರು ಬದಲಾವಣೆ ಮಾಡಿ ಅನ್ನೋದು ಕೂಡಾ ಸಣ್ಣತನ. ಮೈಸೂರು ಸಂಸದರು ಅವಿವೇಕ ಪ್ರದರ್ಶನ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಟಿಪ್ಪು ಸುಲ್ತಾನ್ ಹೆಸರು ಬದಲಾವಣೆ ಮಾಡಬಾರದು ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.
ಇನ್ನು ಇದೇ ವೇಳೆ ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ಕೊಟ್ಟ ವಾಟಾಳ್, ಇದೊಂದು ದೊಡ್ಡ ದೌರ್ಜನ್ಯ, ದುರ್ದೈವ. ಪೊಲೀಸರು ಎಚ್ಚೆತ್ತುಕೊಂಡಿದ್ದರೆ ಹರ್ಷ ಹತ್ಯೆಯಾಗ್ತಿರಲಿಲ್ಲ. ಇದು ಆತಂಕಕಾರಿ ಸಂಸ್ಕೃತಿ, ಇದನ್ನ ಬೆಳೆಯಲು ಬಿಡಬಾರದು. ಒಬ್ಬ ಯುವಕನ ಹತ್ಯೆ ಮಾಡಿರುವುದು ನೋವಿನ ಸಂಗತಿ. ಕೊಲೆ ಮಾಡಿದವರನ್ನು ಗಲ್ಲಿಗೆ ಹಾಕಬೇಕು, ಈ ಬಗ್ಗೆ ಸಿಬಿಐ ತನಿಖೆ ಮಾಡಬೇಕು. ಮೃತ ಹರ್ಷನ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ಸರ್ಕಾರ ತಮ್ಮ ಜವಾಬ್ದಾರಿಯನ್ನು ಪ್ರದರ್ಶನ ಮಾಡಿ ಗಲಭೆಯಿಂದಾಗಿ ಅಮಾಯಕರು ಬಲಿಯಾಗುತ್ತಿರುವುದನ್ನು ತಪ್ಪಿಸಿ ಎಂದು ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬದಲಾದ ‘ಕಚ್ಚಾ ಬದಾಮ್’ ಸಿಂಗರ್ ಬದುಕು; ಕಾಡುತ್ತಿದೆ ಅವಮಾನ ಎದುರಿಸುವ ಆತಂಕ
ಮಕ್ಕಳ ಹೃದಯ ಕಲಕಿ ರಾಜಕಾರಣ ಮಾಡಬಾರದು: ಹಿಜಾಬ್ ವಿವಾದದ ಕುರಿತು ವಾಟಾಳ್ ನಾಗರಾಜ್ ಪ್ರತಿಕ್ರಿಯೆ
Published On - 1:44 pm, Tue, 22 February 22