ಮಕ್ಕಳ ಹೃದಯ ಕಲಕಿ ರಾಜಕಾರಣ ಮಾಡಬಾರದು: ಹಿಜಾಬ್ ವಿವಾದದ ಕುರಿತು ವಾಟಾಳ್ ನಾಗರಾಜ್ ಪ್ರತಿಕ್ರಿಯೆ
Hijab Row: ರಾಜ್ಯದಲ್ಲಿ ಹಿಜಾಬ್ ವಿವಾದ ಜೋರಾಗಿದೆ. ರಾಜಕೀಯ ನಾಯಕರು, ಪಕ್ಷಗಳ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಹಿಜಾಬ್ ವಿವಾದ ಇತರ ಕಾಲೇಜುಗಳಿಗೂ ಹಬ್ಬುತ್ತಿದೆ. ವಿವಾದದ ಕುರಿತಂತೆ ವಿವಿಧ ವಲಯದ ನಾಯಕರ ಪ್ರತಿಕ್ರಿಯೆ ಇಲ್ಲಿದೆ.
ಮೈಸೂರು: ಮಕ್ಕಳ ಹೃದಯ ಕಲಕಿ ರಾಜಕಾರಣ ಮಾಡಬಾರದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagarj) ನುಡಿದಿದ್ದಾರೆ. ಹಿಜಾಬ್ ವಿವಾದದ ಕುರಿತಂತೆ ಅವರು ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದರು. ಹಿಜಾಬ್ (Hijab) ವಿಚಾರದಲ್ಲಿ ರಾಜಕಾರಣ ಸರಿಯಲ್ಲ ಎಂದಿರುವ ವಾಟಾಳ್, ಮಕ್ಕಳಿಗೆ ಯಾವುದೇ ರಾಜಕೀಯ ಇಲ್ಲ, ಧರ್ಮ ಇಲ್ಲ. ಪ್ರಸ್ತುತ ಆಗುತ್ತಿರುವುದು ತೀಟೆ ಜಗಳ ಎಂದು ಕಿಡಿಕಾರಿದರು. ಮಕ್ಕಳ ಹೃದಯ ಕಲಕಿ ರಾಜಕಾರಣ ಮಾಡಬಾರದು. ಹೊಸದಾಗಿ ಹಿಜಾಬ್ ಧರಿಸಿ ಮಕ್ಕಳು ಶಾಲೆಗೆ ಬರುತ್ತಿಲ್ಲ. ಆದರೆ ಕೇಸರಿ ಶಾಲು ಯಾವಾಗಿನಿಂದ ಬಂತು? ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದ್ದಾರೆ. ಈ ಮೂಲಕ ಹಿಜಾಬ್ಗೆ ಧರಿಸುವುದಕ್ಕೆ ಅವರು ಬೆಂಬಲ ಸೂಚಿಸಿದ್ದಾರೆ.
ಹಿಜಾಬ್ ಹಾಕಿಕೊಂಡು ಬಂದರೂ ತಪ್ಪೇ, ಕೇಸರಿ ಹಾಕಿಕೊಂಡು ಬಂದರೂ ತಪ್ಪೇ: ಸಚಿವ ಆರ್.ಅಶೋಕ್
ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸೌಧದಲ್ಲಿ ಸಚಿವ ಅಶೋಕ್ (R Ashok) ಪ್ರತಿಕ್ರಿಯೆ ನೀಡಿದ್ದಾರೆ. ಹಿಜಾಬ್ ಹಾಕಿಕೊಂಡು ಬಂದರೂ ತಪ್ಪೇ, ಕೇಸರಿ ಹಾಕಿಕೊಂಡು ಬಂದರೂ ತಪ್ಪೇ. ಕೇಸರಿ ಹಾಕಿದರೂ ವಿರೋಧ ಮಾಡುತ್ತೇವೆ, ಹಿಜಾಬ್ ಹಾಕಿದರೂ ವಿರೋಧ ಮಾಡುತ್ತೇವೆ. ಹಿಜಾಬ್ ಹಿಂದೆ ಕಾಂಗ್ರೆಸ್ ಕೈವಾಡ ಇರುವುದರಲ್ಲಿ ಅನುಮಾನವೇ ಇಲ್ಲ. ಎಲ್ಲಾ ಕಾಂಗ್ರೆಸ್ ನವರೂ ಅವರ ಪರವಾಗಿಯೇ ಮಾತಾಡುತ್ತಿದ್ದಾರೆ. ಕೇಸರಿ ಹಿಂದೆ ಸಂಘ ಪರಿವಾರದ ಕೈವಾಡ ಇಲ್ಲ. ಅವರು ಹಿಜಾಬ್ ಹಾಕಿಕೊಂಡು ಬಂದಿದ್ದಾರೆ, ಅದಕ್ಕೆ ಇವರು ಹಾಕಿಕೊಂಡು ಬಂದಿದ್ದಾರೆ. ಅವರು ನಿಲ್ಲಿಸಿದರೆ ಇವರೂ ಬಿಟ್ಟು ಬಿಡುತ್ತಾರೆ ಎಂದು ಅಶೋಕ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹಿಜಾಬ್ ವಿವಾದ ರಾಜಕೀಯ ದುರುದ್ದೇಶದಿಂದ ಕೂಡಿದೆ: ಮಾಜಿ ಸಚಿವ ತನ್ವೀರ್ ಸೇಠ್
ಮೈಸೂರು: ರಾಜಕೀಯ ದುರುದ್ದೇಶದಿಂದ ಹಿಜಾಬ್ ಅನ್ನು ವಿವಾದ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ತನ್ವೀರ್ ಸೇಠ್ (Tanveer Sait) ಹೇಳಿದ್ದಾರೆ. ಮೈಸೂರಿನಲ್ಲಿ ಅವರು ಮಾತನಾಡಿದರು. ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಸಮವಸ್ತ್ರ ಕಡ್ಡಾಯ ನಿಯಮವಿಲ್ಲ. ಕಡ್ಡಾಯ ಮಾಡಿದರೆ ಕ್ರಮ ಕೈಗೊಳ್ಳಬೇಕು ಎಂಬ ನಿಯಮವೇ ಇದೆ. ಆದರೂ ಈ ವಿಚಾರ ಈಗ ವಿವಾದವಾಗುತ್ತಿದೆ. ರಾಜಕೀಯ ದುರುದ್ದೇಶದಿಂದ ಈ ಸೂಕ್ಷ್ಮ ವಿಚಾರವನ್ನು ವಿವಾದ ಮಾಡಲಾಗುತ್ತಿದೆ. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎಂಬಂತೆ ವರ್ತನೆಗಳು ಈಗ ಸಾಗಿವೆ. ಸರ್ಕಾರ ತಕ್ಷಣ ಈ ವಿಚಾರದ ಬಗ್ಗೆ ಚರ್ಚೆಗೆ ಸಮಿತಿ ರಚಿಸಬೇಕು. ಸಮಿತಿಯಲ್ಲಿ ಈ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಿ ತೀರ್ಮಾನವಾಗಲಿ. ನಾನು ಸಮಿತಿಗೆ ಸ್ವಯಂಪ್ರೇರಿತವಾಗಿ ಬರುತ್ತೇನೆ. ಅಲ್ಲೇ ಎಲ್ಲವನ್ನೂ ತೀರ್ಮಾನ ಮಾಡೋಣ ಎಂದು ತನ್ವೀರ್ ಸೇಠ್ ಹೇಳಿದ್ದಾರೆ.
ವಕ್ಫ್ ಹಾಗೂ ರಘುಪತಿ ಭಟ್ ಅವರ ಮಧ್ಯಸ್ಥಿಕೆಗೂ ಕಿಡಿ ಕಾರಿದ ತನ್ವೀರ್, ನಿಮ್ಮಲ್ಲಿ ನೋಂದಾಯಿತವಾಗಿರುವ ಸಂಸ್ಥೆಗಳ ಬಗ್ಗೆ ಕ್ರಮ ವಹಿಸಿ. ಅನಗತ್ಯವಾಗಿ ಖಾಸಗಿ ಸಂಸ್ಥೆಗಳ ವಿಚಾರದಲ್ಲಿ ಮೂಗು ತೂರಿಸಬೇಡಿ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು: ಹಿಜಾಬ್ ಹಾಕಿಕೊಂಡು ಕಾಲೇಜಿಗೆ ಬಂದರೆ ತಪ್ಪೇನು? ವಿದ್ಯಾರ್ಥಿನಿ ಪ್ರಶ್ನೆ
ಹಿಜಾಬ್ ಧರಿಸಿ ಬರುವುದು ಬೇಡವೆಂದು ಯಾರೂ ಹೇಳಿರಲಿಲ್ಲ. ಪ್ರವೇಶಾತಿ ಸಮಯದಲ್ಲಿ ಹೇಳಿದ್ದರೆ ಅಡ್ಮಿಷನ್ ಆಗುತ್ತಿರಲಿಲ್ಲ. ನಾವೀಗ ಹಿಜಾಬ್ ತೆಗೆಯುವುದಿಲ್ಲ. ಹಿಜಾಬ್ ಹಾಕಿಕೊಂಡು ಕಾಲೇಜಿಗೆ ಬಂದರೆ ತಪ್ಪೇನು? ಇಷ್ಟು ದಿನಗಳ ಕಾಲ ಇಲ್ಲದಿದ್ದದ್ದು ಇವಾಗ ಏನು ಸಮಸ್ಯೆ? ಎಂದು ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜು ವಿದ್ಯಾರ್ಥಿನಿ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾಳೆ.
ಐಡಿಎಸ್ಜಿ ಕಾಲೇಜಿನಲ್ಲಿ ನಾರೂರು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಆಗಮಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿದ್ದಾರೆ. ಕೇಸರಿ-ಹಿಜಾಬ್ ಜಟಾಪಟಿ ತಿಳಿದು ಪೊಲೀಸರು ಕಾಲೇಜಿಗೆ ಆಗಮಿಸಿದ್ದಾರೆ.
ಯಾರೂ ಹಿಜಾಬ್ ಮತ್ತು ಕೇಸರಿ ಧರಿಸುವುದು ಬೇಡ: ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ:
ಯಾರು ಹಿಜಾಬ್ ಅಥವಾ ಕೇಸರಿ ಧರಿಸುವುದು ಬೇಡ. ಮೇಲಾಗಿ ಈ ವಿಚಾರದಲ್ಲಿ ಸಂಘರ್ಷ ಅಥವಾ ರಾಜಕೀಯ ಬೇಡ. ಎಲ್ಲರಿಗೂ ಸಮವಸ್ತ್ರ ಮಾಡಿದರೆ ಸಾಕು ಎಂದು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದ ಶಾಲಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಬ್ಬರೊಂದು ಇನ್ನೊಬ್ಬರೊಂದು ರೀತಿಯಲ್ಲಿ ಶಾಲೆಗಳಲ್ಲಿ ಕಾಣುವುದು ಬೇಡ. ಎಲ್ಲರೂ ಸಮವಸ್ತ್ರ ಧರಿಸಲಿ. ಕೇಸರಿ ಅಂದರೆ ನಮಗೆ ಇಷ್ಟ. ಅದರಲ್ಲಿ ಒಂದು ರೀತಿಯ ಶಕ್ತಿ ಇದೆ. ಹಾಗಂತ ಕೇಸರಿ ಶಾಲ್ ಹಾಕಿಕೊಂಡು ಶಾಲೆಗೆ ಹೋಗುವುದು ಸೂಕ್ತವಲ್ಲ. ಈಗಾಗಲೇ ಸರ್ಕಾರ ಇದರ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿದೆ. ಹಿಜಾಬ್ ಮತ್ತು ಕೇಸರಿ ಎರಡೂ ಬೇಡ. ಇದರಿಂದ ಶಾಲಾ ಆಡಳಿತ ಮಂಡಳಿಗೆ ಶಿಕ್ಷಕರಿಗೆ ತೊಂದರೆ ಆಗುವ ಸಾಧ್ಯತೆಗಳಿವೆ ಎಂದು ರೇಣುಕಾಚಾರ್ಯ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Hijab Row: ಹಿಜಾಬ್ ಹೆಸರಿನಲ್ಲಿ ಮಕ್ಕಳಲ್ಲಿ ಏಕೆ ಕೋಮು ಭಾವನೆ ಬಿತ್ತುತ್ತಿದ್ದೀರಿ?; ಹೆಚ್ಡಿ ಕುಮಾರಸ್ವಾಮಿ ಕಿಡಿ
Published On - 3:51 pm, Sat, 5 February 22