ಮೈಸೂರಿನಲ್ಲಿ ಗುಪ್ತಚರ ನಿವೃತ್ತ ಅಧಿಕಾರಿ ಕೊಲೆ ಪ್ರಕರಣ: ಮನೆ ವಿಚಾರಕ್ಕೆ ಕಿರಿಕ್ ತಂದ ಆಪತ್ತು, ಇಬ್ಬರು ಅರೆಸ್ಟ್
ಮೃತ ಆರ್.ಎನ್. ಕುಲಕರ್ಣಿ ಅವರ ಪಕ್ಕದ ಮನೆಯ ಮಾದಪ್ಪನ ಮಗ ಮನು(30) ಹಾಗೂ ಆತನ ಸ್ನೇಹಿತನನ್ನು ಕೊಲೆ ಪ್ರಕರಣದ ಆರೋಪದಲ್ಲಿ ಬಂಧಿಸಲಾಗಿದೆ.
ಮೈಸೂರು: ನವೆಂಬರ್ 4ರಂದು ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ(Manasa Gangothri) ಆವರಣದಲ್ಲಿ ಶುಕ್ರವಾರ ಸಂಜೆ ಅಪರಿಚಿತ ವಾಹನ ಡಿಕ್ಕಿಯಾಗಿ ಕೇಂದ್ರ ಗುಪ್ತಚರ ದಳದ(Intelligence Bureau-IB) ನಿವೃತ್ತ ಅಧಿಕಾರಿ ಆರ್.ಎನ್. ಕುಲಕರ್ಣಿ ಮೃತಪಟ್ಟಿದ್ದರು. ಈ ಕೇಸ್ ಸಂಬಂಧ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಮೃತ ಆರ್.ಎನ್. ಕುಲಕರ್ಣಿ ಅವರ ಪಕ್ಕದ ಮನೆಯ ಮಾದಪ್ಪನ ಮಗ ಮನು(30) ಹಾಗೂ ಆತನ ಸ್ನೇಹಿತನನ್ನು ಕೊಲೆ ಪ್ರಕರಣದ ಆರೋಪದಲ್ಲಿ ಬಂಧಿಸಲಾಗಿದೆ. ಘಟನೆ ಸಂಬಂಧ ಜಯಲಕ್ಷ್ಮಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಚುರುಕುಗೊಳಿಸಿದ್ದ ಪೊಲೀಸರು ಬೇರೆ ಬೇರೆ ಅಯಾಮಗಳಲ್ಲಿ ತನಿಖೆ ನಡೆಸಿದ್ದರು. ಸದ್ಯ ಈಗ ಪ್ರಕರಣಕ್ಕೆ ಕಾರಣ ಬಯಲಾಗಿದೆ. ನಿವೃತ್ತಿ ನಂತರ ಆರ್.ಎನ್. ಕುಲಕರ್ಣಿ ಅವರು ಮೈಸೂರಿನಲ್ಲಿ ನೆಲೆಸಿದ್ದರು. ಪಕ್ಕದ ಮನೆಯ ಮಾದಪ್ಪ ಕುಟುಂಬ ಹಾಗೂ ಕುಲಕರ್ಣಿಯವರ ನಡುವೆ ವೈಮನಸ್ಸಿತ್ತು. ಈ ಹಿನ್ನೆಲೆ ಘಟನೆ ಬಳಿಕ ಆರ್.ಎನ್. ಕುಲಕರ್ಣಿ ಅವರ ಅಳಿಯ ಮಾದಪ್ಪನ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.
ದೂರು ಆಧರಿಸಿ ತನಿಖೆ ನಡೆಸಿ ಮಾದಪ್ಪನ ಹಿರಿಯ ಮಗ, ಎಂಬಿಎ ಪದವೀಧರ ಮನು ಹಾಗೂ ಎಂಸಿಎ ಪದವೀಧರನಾದ ಆತನ ಸ್ನೇಹಿತನಿಂದ ಕೃತ್ಯ ನಡೆದಿದೆ ಎಂಬ ವಿಚಾರ ಬಹಿರಂಗವಾಗಿದೆ. ಮನೆ ವಿಚಾರವಾಗಿ ಪದೇ ಪದೇ ತೊಂದರೆ ಹಿನ್ನೆಲೆ ಪ್ಲಾನ್ ಮಾಡಿ ಕುಲಕರ್ಣಿ ಅವರ ಕೊಲೆ ಮಾಡಲಾಗಿದೆ ಎನ್ನಲಾಗಿದ್ದು ಮಾದಪ್ಪ ಮಗ ಮನು ಕಾರು ಓಡಿಸಿ ಕೊಲೆ ಮಾಡಿದ್ದಾರೆಂದು ಪೊಲೀಸರು ಮನುನನ್ನು ಬಂಧಿಸಿದ್ದಾರೆ ಜೊತೆಗೆ ಕೊಲೆಗೆ ಸಹಾಯ ಮಾಡಿದ ಆತನ ಸ್ನೇಹಿತನನ್ನೂ ಬಂಧಿಸಲಾಗಿದೆ ಎಂದು ಮೈಸೂರು ಪೊಲೀಸ್ ಕಮಿಷನರ್ ಡಾ ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.
ಕುಲಕರ್ಣಿ ಅವರು ಪ್ರತಿ ನಿತ್ಯ ಹೇಗೆ? ಎಲ್ಲಿ ವಾಕ್ ಮಾಡುತ್ತಾರೆ ಅನ್ನೋ ಬಗ್ಗೆ ಆರೋಪಿಗಳು ಮಾಹಿತಿ ಕಲೆ ಹಾಕಿ ಕೃತ್ಯ ಎಸಗಿದ್ದಾರೆ. ದ್ವಿಚಕ್ರ ವಾಹನದಲ್ಲಿ ಮನು ಸ್ನೇಹಿತ ಕೃತ್ಯಕ್ಕೆ ಸಾಥ್ ನೀಡಿದ್ದಾನೆ. ಹೋಂಡಾ ಕಾರನ್ನು ಮಾರಾಟ ಮಾಡಲು ಮನುಗೆ ನೀಡಲಾಗಿತ್ತು. ಅದೇ ಕಾರನ್ನು ಕೊಲೆ ಮಾಡಲು ಬಳಸಲಾಗಿದೆ. ಇನ್ನು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಮಾದಪ್ಪನ ಕುಟುಂಬಸ್ಥರು ಹಾಗೂ ಕುಲಕರ್ಣಿ ಅವರ ನಡುವೆ ಕಿರಿಕ್ ಆಗಿರುವ ಬಗ್ಗೆ ಈ ಹಿಂದೆ ದೂರು ದಾಖಲಾಗಿತ್ತು. ಆ ವೇಳೆ ಪೊಲೀಸರು ಇಬ್ಬರನ್ನೂ ಕರೆಸಿ ಮುಚ್ಚಳಿಕೆ ಬರೆಸಿ ಕಳುಹಿಸಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದ್ದು ಪ್ರಕರಣ ಭೇಧಿಸಿದ ಎಸಿಪಿ ಶಿವಶಂಕರ್ ಹಾಗೂ ತಂಡಕ್ಕೆ ಪೊಲೀಸ್ ಕಮಿಷನರ್ ಡಾ ಚಂದ್ರಗುಪ್ತ 50 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.
Published On - 2:49 pm, Tue, 8 November 22