Umesh Katti: ಸಿಎಂ ಆಗಲು ನನಗೆ ಎಲ್ಲ ಅರ್ಹತೆ ಇದೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿ; ಉಮೇಶ್ ಕತ್ತಿ
ನನ್ನ ಹಣೆಬರದಲ್ಲಿ ಬರೆದಿದ್ದರೆ ನಾನು ಸಿಎಂ ಆಗುತ್ತೇನೆ. ಇರುವ 224 ಶಾಸಕರಲ್ಲಿ ನಾನೇ ಹಿರಿಯ ಶಾಸಕ. ನನಗೆ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದೆ ಎಂದು ಉಮೇಶ್ ಕತ್ತಿ ಹೇಳಿದ್ದಾರೆ.
ಮೈಸೂರು: ಆಂಧ್ರಪ್ರದೇಶ, ತೆಲಂಗಾಣದಂತೆ ನಮ್ಮ ರಾಜ್ಯದಲ್ಲೂ ಉತ್ತರ ಕರ್ನಾಟಕ (North Karnataka) ಪ್ರತ್ಯೇಕ ರಾಜ್ಯವಾಗಲಿ ಎಂದು ಮೈಸೂರಿನಲ್ಲಿ ಪ್ರತ್ಯೇಕ ರಾಜ್ಯದ ಬಗ್ಗೆ ಉಮೇಶ್ ಕತ್ತಿ (Umesh Katti) ಪುನರುಚ್ಛರಿಸಿದ್ದಾರೆ. ನಾನು ಸಿಎಂ ಆಗುವುದಾದರೆ ಅಖಂಡ ಕರ್ನಾಟಕದ ಸಿಎಂ ಆಗುತ್ತೇನೆ. ನನ್ನ ಹಣೆಬರದಲ್ಲಿ ಬರೆದಿದ್ದರೆ ನಾನು ಸಿಎಂ ಆಗುತ್ತೇನೆ. ಇರುವ 224 ಶಾಸಕರಲ್ಲಿ ನಾನೇ ಹಿರಿಯ ಶಾಸಕ. ನನಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ ಎಂದು ಉಮೇಶ್ ಕತ್ತಿ ಹೇಳಿದ್ದಾರೆ.
ಸಿಎಂ ಸ್ಥಾನಕ್ಕಾಗಿ ನಾನು ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ. ನನಗೆ ಅಖಂಡ ಕರ್ನಾಟಕದ ಸಿಎಂ ಆಗಬೇಕೆಂಬ ಬಯಕೆ ಇದೆ. ಪ್ರತ್ಯೇಕ ರಾಜ್ಯವಾದರೂ ಕೂಡಾ ನಾವು ಕನ್ನಡಿಗರೇ. ಆಂಧ್ರ ಪ್ರದೇಶ, ತೆಲಂಗಾಣ ರೀತಿಯಲ್ಲೇ ನಮ್ಮ ರಾಜ್ಯದಲ್ಲೂ ಪ್ರತ್ಯೇಕ ರಾಜ್ಯವಾಗಲಿ ಎಂದು ಬಯಸಿದ್ದೇನೆ. ನಮ್ಮ ಜನರ ದೃಷ್ಟಿಯಿಂದ ನಾನೇ ಹಿರಿಯನಾಗಿ ಧ್ವನಿ ಎತ್ತಿದ್ದೇನೆ ಎಂದು ಉಮೇಶ್ ಕತ್ತಿ ಹೇಳಿದ್ದಾರೆ.
ನಮ್ಮ ಜನರ ದೃಷ್ಟಿಯಿಂದ ನಾನೇ ಹಿರಿಯನಾಗಿ ಧ್ವನಿ ಎತ್ತಿದ್ದೇನೆ. ಹೈಕಮಾಂಡ್ ಮಟ್ಟದಲ್ಲೂ ಹೊಸ ರಾಜ್ಯಗಳ ರಚನೆ ಬಗ್ಗೆ ಚಿಂತನೆ ನಡೆದಿದೆ ಎಂಬುದು ನನ್ನ ಅನಿಸಿಕೆ. ನಾನು ಮಾತಾಡಿದರೆ ಆ ವಿಚಾರ ಕೇಂದ್ರದ ಮಟ್ಟಕ್ಕೂ ಹೋಗುತ್ತದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡುತ್ತೇನೆ ಎಂದು ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಈ ಹಿಂದೆಯೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದಿದ್ದ ಸಚಿವ ಉಮೇಶ್ ಕತ್ತಿ ಆ ಹೇಳಿಕೆಯನ್ನು ಮತ್ತೆ ಪ್ರಸ್ತಾಪಿಸಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ನಾನು ಪ್ರತ್ಯೇಕ ರಾಜ್ಯ ಕೇಳುತ್ತಿದ್ದೇನೆಯೇ ಹೊರತು ಬೇರೆ ಉದ್ದೇಶದಿಂದಲ್ಲ ಎಂದಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಪ್ರಧಾನಿ ಮೋದಿ ಚಿಂತನೆ ಮಾಡಿದ್ದಾರೆ ಎಂದ ಉಮೇಶ್ ಕತ್ತಿ, ಬೊಮ್ಮಾಯಿ ಏನಂದರು?
ಈ ವೇಳೆ, ತಮ್ಮ ಸರ್ಕಾರದ ಆಡಳಿತವನ್ನೇ ಪ್ರಶ್ನಿಸಿದ ಸಚಿವ ಉಮೇಶ್ ಕತ್ತಿ, ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ? ದೊಡ್ಡ ರಾಜ್ಯಗಳಾದಾಗ ಇಂತಹ ಸಮಸ್ಯೆಗಳು ಇದ್ದೇ ಇರುತ್ತವೆ. ಇದೇ ಕಾರಣಕ್ಕೆ ನಾವು ರಾಜ್ಯ ಇಬ್ಭಾಗ ಆಗಬೇಕೆಂದು ಕೇಳುತ್ತಿದ್ದೇನೆ. ಜಲಾಶಯಗಳ ನೀರಿನ ಬಳಕೆ ಗಡಿ ಸಮಸ್ಯೆಗಳ ನಿವಾರಣೆ ಇದರ ದೃಷ್ಟಿಯಿಂದ ಚಿಕ್ಕ ರಾಜ್ಯಗಳು ಆಗಬೇಕು. ಅತಿ ಹೆಚ್ಚು ಜನಸಂಖ್ಯೆ ಇದ್ದಾಗ ಇಂತಹ ಯಾವ ಸಮಸ್ಯೆಗಳು ಬಗೆಹರಿಯುವುದಿಲ್ಲ. ಬೆಳಗಾವಿ ಗಡಿ ಸಮಸ್ಯೆಗೂ ಪ್ರತ್ಯೇಕ ರಾಜ್ಯವೇ ಪರಿಹಾರ ಎಂದು ಮೈಸೂರಿನಲ್ಲಿ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಉಮೇಶ್ ಕತ್ತಿ, ಮಹಾರಾಷ್ಟ್ರದ ಬಿಜೆಪಿಯೇ ಬೇರೆ ಕರ್ನಾಟಕದ ಬಿಜೆಪಿಯೇ ಬೇರೆ. ಮಹಾರಾಷ್ಟ್ರದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಬೆಳಗಾವಿ ಕನ್ನಡಿಗರದ್ದು. ಇದರಲ್ಲಿ ಯಾವ ಅನುಮಾನಗಳು ಬೇಡ. ಯಾವುದೇ ರಾಜ್ಯದಲ್ಲಿ ಯಾವುದೇ ಸರ್ಕಾರ ಇದ್ದರೂ ಗಡಿಭಾಗಗಳಲ್ಲಿ ಗಲಾಟೆ ಮಾಡಲು ಕೆಲವು ಪುಂಡರು ಇದ್ದೇ ಇರುತ್ತಾರೆ. ಅವರಿಗೆ ಕಾನೂನಾತ್ಮಕ ಶಿಕ್ಷೆ ಆಗಬೇಕು ಅಷ್ಟೇ. ಗಡಿ ಖ್ಯಾತೆ ಬಗೆಹರಿದು ಬಹಳ ವರ್ಷವಾಗಿದೆ. ಆಗಾಗ ಪುಂಡರು ಗಲಾಟೆ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಮಹತ್ವ ಕೊಡಬೇಡಿ ಎಂದಿದ್ದಾರೆ.
ಇದನ್ನೂ ಓದಿ: ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ವಿಭಜನೆಯಾಗಬೇಕು: ಉಮೇಶ್ ಕತ್ತಿ ಒತ್ತಾಯ
ಈ ಹಿಂದೆಯೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ಉಮೇಶ್ ಕತ್ತಿ ಕೆಲವು ಬಾರಿ ಹೇಳಿಕೆ ನೀಡಿದ್ದರು. 2024ರ ಚುನಾವಣೆ ನಂತರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ. 2024ರ ನಂತರ ದೇಶದಲ್ಲಿ 50 ಹೊಸ ರಾಜ್ಯಗಳು ಉದಯಿಸಲಿವೆ. ಆಗ ಕರ್ನಾಟಕವೂ ಎರಡು ರಾಜ್ಯಗಳಾಗಲಿವೆ. ಧಾರವಾಡದಲ್ಲಿ ಹೈಕೋರ್ಟ್, ಬೆಳಗಾವಿಯಲ್ಲಿ ಸುವರ್ಣಸೌಧ ಇದೆ. ಉತ್ತರ ಕರ್ನಾಟಕ ರಾಜ್ಯವಾದಾಗ ಪ್ರತ್ಯೇಕ ರಾಜ್ಯಕ್ಕೆ ಬೇಕಾದ ಮೂಲಸೌಕರ್ಯ ನಮ್ಮಲ್ಲಿವೆ. ಕರ್ನಾಟಕದಾದ್ಯಂತ ಹರಡಿರುವ ಜನಸಂಖ್ಯೆಯ ಆಧಾರದ ಮೇಲೆ ಕರ್ನಾಟಕವೂ ಪ್ರತ್ಯೇಕ ರಾಜ್ಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಈ ವಿಷಯದ ಬಗ್ಗೆ ಉಪಕ್ರಮ ತೆಗೆದುಕೊಳ್ಳುತ್ತಾರೆ. ಮಹಾರಾಷ್ಟ್ರದಿಂದ ಮೂರು ಹೊಸ ರಾಜ್ಯಗಳು, ಉತ್ತರಪ್ರದೇಶದಲ್ಲಿ ನಾಲ್ಕು ಮತ್ತು ಕರ್ನಾಟಕದಲ್ಲಿ ಎರಡು ಹೊಸ ರಾಜ್ಯಗಳನ್ನು ಘೋಷಿಸಲಾಗುವುದು ಎಂದು ಹೇಳಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು.
Published On - 2:08 pm, Thu, 30 June 22