ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ಜುಲೈ 15 ರಿಂದ ನೀರು ಬಿಡುಗಡೆ: ಸಚಿವ ಎಸ್.ಟಿ.ಸೋಮಶೇಖರ್
ಕಬಿನಿ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಿಗೆ ಜುಲೈ 15 ರಿಂದ ಹತ್ತು ದಿನಗಳ ಕಾಲ ನಿತ್ಯ 1 ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗುವುದು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಮೈಸೂರು: ಕಬಿನಿ ಜಲಾಶಯದ (Kabini Dam) ಅಚ್ಚುಕಟ್ಟು ಪ್ರದೇಶಗಳಿಗೆ ಜುಲೈ 15 ರಿಂದ ಹತ್ತು ದಿನಗಳ ಕಾಲ ನಿತ್ಯ 1 ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗುವುದು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ (ST Somashekar) ಹೇಳಿದ್ದಾರೆ. 2022ರ ಮುಂಗಾರು (Monsoon) ಹಂಗಾಮಿಗೆ ನೀರು ಒದಗಿಸುವ ಕುರಿತು ಜಿಪಂ ಕಚೇರಿಯಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ ಮೊದಲಿಗೆ ಕೆರೆ ಕಟ್ಟೆಗಳು ಭರ್ತಿಯಾಗಲು ನೀರು ಹರಿಸಲಾಗುವುದು. ಈಗಾಗಲೇ ಕೆರೆಗಳಲ್ಲಿ 30% ನೀರು ತುಂಬಿದೆ. ಹತ್ತು ದಿನ ಕೆರೆಗಳಿಗೆ ನೀರು ಹರಿಸಿ ನಂತರ ನಾಲೆಗಳಿಗೆ ನೀರು ಹರಿಸುವಂತೆ ಸಚಿವರು ಸೂಚಿಸಿದರು.
ಕಬಿನಿ ಜಲಾಶಯದಲ್ಲಿ 1,08,060, ಹುಲ್ಲಹಳ್ಳಿ ಅಣೆಕಟ್ಟು ನಾಲೆ ಭಾಗದಲ್ಲಿ 14,309 ಎಕರೆ ಪ್ರದೇಶ ಸೇರಿದಂತೆ 1,22,369 ಎಕರೆ ಪ್ರದೇಶವಿದೆ. ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ 120ಕ್ಕೂ ಹೆಚ್ಚು ಕೆರೆಗಳಿವೆ. ಕೊನೆಭಾಗದ ಕೆರೆಗಳು ಭರ್ತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು.
ಜುಲೈ 12ರ ಅಂಕಿಅಂಶದಂತೆ ಜಲಾಶಯದ ನೀರಿನ ಮಟ್ಟ 2282.51 ಅಡಿಗಳಷ್ಟಿದ್ದು 8.74 ಟಿಎಂಸಿ ನೀರಿನ ಸಂಗ್ರಹಣೆ ಇದೆ. 34 ಸಾವಿರ ಕ್ಯೂಸೆಕ್ಸ್ ಒಳ ಹರಿವು, 35,333 ಕ್ಯೂಸೆಕ್ಸ್ ಹೊರ ಹರಿವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜುಲೈ 15 ರಿಂದ 24ರವರೆಗೆ ಕೆರೆಗಳಿಗೆ, ಜುಲೈ 25 ರಿಂದ ಆಗಸ್ಟ್ 14ರವರೆಗೆ ನಾಲೆಗಳಿಗೆ ನೀರು ಹರಿಸಲಾಗುವುದು. ಆಗಸ್ಟ್ 15ರಿಂದ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲಾಗುವುದು ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದ್ದಾರೆ.
ಸಭೆಯಲ್ಲಿ ಶಾಸಕರುಗಳಾದ ಅಶ್ವಿನ್ ಕುಮಾರ್, ಹರ್ಷವರ್ಧನ್, ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಪಂ ಸಿಇಒ ಪೂರ್ಣಿಮಾ, ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಪಂ ಸಿಇಒ ಗಾಯತ್ರಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
Published On - 8:17 pm, Tue, 12 July 22