ನಾಡಗೀತೆಯಲ್ಲಿ ಮಹತ್ವದ ಬದಲಾವಣೆ: ‘ಜೈ ಭಾರತ ಜನನಿಯ ತನುಜಾತೆ’ಯಲ್ಲಿ ‘ಬೌದ್ಧ ಧರ್ಮ’ದ ಹೆಸರು ಸೇರ್ಪಡೆಗೆ ಸಮಿತಿ ಸಲಹೆ

ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಯಲ್ಲಿ ‘ಬೌದ್ಧ ಧರ್ಮ’ದ ಹೆಸರನ್ನು ಸೇರಿಸಲು ಮಹತ್ವದ ಪ್ರಸ್ತಾಪ ಬಂದಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಸಮಿತಿಯು ಈ ಬದಲಾವಣೆಗೆ ಶಿಫಾರಸು ಮಾಡಿದ್ದು, ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಧರ್ಮ ಸಮಾನತೆ ಮತ್ತು ಬೌದ್ಧ ಧರ್ಮದ ಪ್ರಭಾವ ಹೆಚ್ಚಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರ ಅಂಗೀಕರಿಸಿದರೆ, ನಾಡಗೀತೆಯ ಹೊಸ ರೂಪ ಶೀಘ್ರದಲ್ಲೇ ಜಾರಿಗೆ ಬರಲಿದೆ.

ನಾಡಗೀತೆಯಲ್ಲಿ ಮಹತ್ವದ ಬದಲಾವಣೆ: ‘ಜೈ ಭಾರತ ಜನನಿಯ ತನುಜಾತೆ’ಯಲ್ಲಿ ‘ಬೌದ್ಧ ಧರ್ಮ’ದ ಹೆಸರು ಸೇರ್ಪಡೆಗೆ ಸಮಿತಿ ಸಲಹೆ
ಸಾಂದರ್ಭಿಕ ಚಿತ್ರ
Image Credit source: Google

Updated on: Jul 14, 2026 | 6:04 PM

ಮುಖ್ಯಾಂಶಗಳು

  • ನಾಡಗೀತೆ ‘ಜೈ ಭಾರತ ಜನನಿಯ ತನುಜಾತೆ’ಯಲ್ಲಿ ಇನ್ಮುಂದೆ ಮಹತ್ವದ ಬದಲಾವಣೆ
  • 'ಬೌದ್ಧ ಧರ್ಮ'ದ ಹೆಸರನ್ನು ಸೇರ್ಪಡೆಗೊಳಿಸಲು ಚಿಂತನೆ
  • ಪ್ರೊ. ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ಸಮಿತಿಯು ಮಹತ್ವದ ಸಲಹೆ

ಬೆಂಗಳೂರು, ಜು.14: ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ನಾಡಗೀತೆ ‘ಜೈ ಭಾರತ ಜನನಿಯ ತನುಜಾತೆ’ಯಲ್ಲಿ ಇನ್ಮುಂದೆ ಮಹತ್ವದ ಬದಲಾವಣೆಯೊಂದು ಆಗುವ ಸಾಧ್ಯತೆ ದಟ್ಟವಾಗಿದೆ. ನಾಡಗೀತೆಯಲ್ಲಿ ಜೈನ ಧರ್ಮದ ಉಲ್ಲೇಖದ ಜೊತೆಗೆ ಇದೀಗ ‘ಬೌದ್ಧ ಧರ್ಮ’ದ ಹೆಸರನ್ನು ಸೇರ್ಪಡೆಗೊಳಿಸಲು ಚಿಂತನೆ ನಡೆಸಲಾಗುತ್ತಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ಸಮಿತಿಯು ಈ ಮಹತ್ವದ ಸಲಹೆಯನ್ನು ನೀಡಿದ್ದು, ಈ ಸಂಬಂಧ ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಕೆಯಾಗಿದೆ. ಕುವೆಂಪು ಅವರು ಬರೆದಿದ್ದ ಮೂಲ ನಾಡಗೀತೆಯಲ್ಲಿ ಬೌದ್ಧ ಧರ್ಮದ ಹೆಸರನ್ನು ಕೈಬಿಡಲಾಗಿತ್ತು. ಪ್ರಸ್ತುತ ಹಾಡಿನಲ್ಲಿ “ಜೈನರ ಪೂಜ್ಯ ಉದ್ಯಾನ” ಎಂಬ ಸಾಲಿದೆ.

ಇಲ್ಲಿದೆ ನೋಡಿ ವಿಡಿಯೋ:

Changes in Karnataka Naada Geethe: ನಾಡಗೀತೆಯಲ್ಲಿ ಬೌದ್ಧ ಧರ್ಮದ ಹೆಸರು ಸೇರ್ಪಡೆಗೆ ಚಿಂತನೆ
ಪುರುಷೋತ್ತಮ ಬಿಳಿಮಲೆ ಸಮಿತಿಯ ಸಲಹೆಯ ಪ್ರಕಾರ, ಇನ್ನು ಮುಂದೆ ಈ ಸಾಲನ್ನು “ಜೈನ ಬೌದ್ಧರ ಪೂಜ್ಯ ಉದ್ಯಾನ” ಅಥವಾ “ಜೈನರುದ್ಯಾನದ ಜೊತೆಗೆ ಬೌದ್ಧರುದ್ಯಾನ” ಎಂದು ಬದಲಾಯಿಸಲು ಪ್ರಸ್ತಾಪಿಸಲಾಗಿದೆ. ಕುವೆಂಪು ಅವರು ಈ ಗೀತೆಯನ್ನು ರಚಿಸುವ ಸಮಯದಲ್ಲಿ ಮೂಲ ಕಾವ್ಯದಲ್ಲಿ ಬೌದ್ಧ ಧರ್ಮದ ನೇರ ಉಲ್ಲೇಖ ಇರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಕೊಪ್ಪಳ: ಕಲ್ಯಾಣಿ ಸ್ಟೀಲ್ ಕಾರ್ಖಾನೆ ಸೀಜ್ ಮಾಡಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ

ಇತ್ತೀಚಿನ ವರ್ಷಗಳಲ್ಲಿ ಬೌದ್ಧ ಧರ್ಮದ ಪ್ರಭಾವ, ಇತಿಹಾಸ ಹಾಗೂ ಅನುಯಾಯಿಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದ ಹಿನ್ನೆಲೆಯಲ್ಲಿ ಹಾಗೂ ಎಲ್ಲ ಧರ್ಮಗಳ ಸಮಾನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಈ ಬದಲಾವಣೆಗೆ ಸಮಿತಿ ಮುನ್ನುಡಿ ಬರೆದಿದೆ. ಸಮಿತಿಯು ಈ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದ್ದು, ರಾಜ್ಯ ಸರ್ಕಾರ ಈ ಸಲಹೆಯನ್ನು ಅಂಗೀಕರಿಸಿದರೆ ಇನ್ನು ಮುಂದೆ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಬದಲಾದ ಹೊಸ ರೂಪದ ನಾಡಗೀತೆಯನ್ನು ಕೇಳಬಹುದಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Tue, 14 July 26

Follow Us