ನೈಟ್ ಕರ್ಫ್ಯೂ: ಬಹಿರಂಗಗೊಂಡ ಮಾರ್ಗಸೂಚಿ ಅಧಿಕೃತವಲ್ಲ ಎಂದ ಸರ್ಕಾರ
ನಾಳೆಯಿಂದ ನೈಟ್ ಕರ್ಫ್ಯೂ ಎಂದು ಬಹಿರಂಗಗೊಂಡಿದ್ದ ದಾಖಲೆಯಲ್ಲಿ ಹೇಳಲಾಗಿತ್ತು. ಆದರೆ ಈಗ ಇದು ನಕಲಿ ಎಂದು ಸ್ಪಷ್ಟನೆ ನೀಡಲಾಗಿದೆ.
ಬೆಂಗಳೂರು: ಕರ್ನಾಟಕ ಸರ್ಕಾರವು ನಾಳೆಯಿಂದ (ಏಪ್ರಿಲ್ 20) ಮೇ 3ರವರೆಗೆ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ ಎಂದು ಬಹಿರಂಗಗೊಂಡಿರುವ ದಾಖಲೆಯನ್ನು ‘ನಕಲಿ’ ಎಂದು ರಾಜ್ಯ ಸರ್ಕಾರ ತಳ್ಳಿಹಾಕಿದೆ.
ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಜಾರಿಯಲ್ಲಿರುವ ಈ ನೈಟ್ ಕರ್ಫ್ಯೂ ಇಡೀ ರಾಜ್ಯಕ್ಕೆ ಅನ್ವಯಿಸಲಿದೆ. ಸಾರ್ವಜನಿಕ ಸ್ಥಳದಲ್ಲಿ ಕಾರಣವಿಲ್ಲದೆ ಗುಂಪು ಸೇರುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಶಾಲಾ ಕಾಲೇಜು, ಸಿನಿಮಾ ಹಾಲ್, ಜಿಮ್, ಮನರಂಜನಾ ಪಾರ್ಕ್, ಶಾಪಿಂಗ್ ಕಾಂಪ್ಲೆಕ್ಸ್ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಬಹಿರಂಗಗೊಂಡಿರುವ ಮಾರ್ಗಸೂಚಿಗಳ ದಾಖಲೆಯಲ್ಲಿ ಮಾಹಿತಿಯಿತ್ತು.
ಇದೀಗ ಈ ಕುರಿತು ಸ್ಪಷ್ಟನೆ ನೀಡಿರುವ ಮುಖ್ಯಕಾರ್ಯದರ್ಶಿ ರವಿಕುಮಾರ್, ಈ ದಾಖಲೆ ನಕಲಿ ಎಂದು ಸ್ಟಷ್ಟಪಡಿಸಿದ್ದಾರೆ. ನೈಟ್ ಕರ್ಫ್ಯೂ ಜಾರಿಗೆ ಸರ್ಕಾರ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿರಲಿಲ್ಲ. ಅಷ್ಟರಲ್ಲಿ ಯಾರೋ ಈ ಮಾರ್ಗಸೂಚಿ ಬಹಿರಂಗಗೊಳಿಸಿದ್ದಾರೆ. ಮುಜುಗರಕ್ಕೆ ಒಳಗಾಗಿರುವ ಸರ್ಕಾರ ಇದೀಗ ಸ್ಪಷ್ಟನೆ ನೀಡಿದೆ ಎಂಬ ಮಾತುಗಳು ವಿಧಾನಸೌಧದ ವಲಯದಲ್ಲಿ ಕೇಳಿಬರುತ್ತಿದೆ.
ನಾಳೆ ಸರ್ವಪಕ್ಷ ಸಭೆಯ ನಂತರ ರಾಜ್ಯದಲ್ಲಿ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬಹಿರಂಗಗೊಂಡಿರುವ ಮಾರ್ಗಸೂಚಿಯ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಕಳೆದ ವರ್ಷದ ಮಾರ್ಗಸೂಚಿಯನ್ನೇ ಯಾರೋ ದಿನಾಂಕ ಬದಲಿಸಿ ಹರಿಬಿಟ್ಟಿದ್ದಾರೆ. ಕಿಡಿಗೇಡಿಗಳ ಕೃತ್ಯದ ಬಗ್ಗೆ ತನಿಖೆಗೆ ಆದೇಶಿಸುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಹೆಸರಿನಲ್ಲಿ ನಕಲಿ ಮಾರ್ಗಸೂಚಿ ಬಹಿರಂಗಗೊಂಡಿರುವುದು ಇದು ಎರಡನೇ ಬಾರಿ. ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ರಾಜ್ಯ ಸರ್ಕಾರದ ಲಾಂಛನ, ಕಡತ ಸಂಖ್ಯೆ ಬಳಸಿ ದುಷ್ಕರ್ಮಿಗಳು ನಕಲಿ ಮಾರ್ಗಸೂಚಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿ ಮತ್ತು ಮುಖ್ಯಕಾರ್ಯದರ್ಶಿ ಸ್ಪಷ್ಟನೆ ನೀಡಿದ್ದಾರೆ. ಕಳೆದ ವರ್ಷ ಕೂಡಾ ಕೋವಿಡ್ ವೇಳೆ ಸರ್ಕಾರದ ಹೆಸರಿನಲ್ಲಿ ನಕಲಿ ಮಾರ್ಗಸೂಚಿ ಹರಿದಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ಮುಸ್ಲಿಮರ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ಸ್ಥಳಾವಕಾಶ ಕೇಳಿದ ಜಮೀರ್ ಅಹ್ಮದ್
ಇದನ್ನೂ ಓದಿ: ಲಾಕ್ಡೌನ್ ಮಾಡುವುದಿದ್ದರೆ ಮೊದಲು ಜನರ ಅಕೌಂಟ್ಗೆ 25,000 ರೂ ಹಾಕಿ; ಸಭೆಯಲ್ಲಿ ಪ್ರತಿಪಕ್ಷಗಳ ಒತ್ತಾಯ
Published On - 6:42 pm, Mon, 19 April 21