ತೆರಿಗೆ ಬಾಕಿ ವಸೂಲಿಗೆ ಹೊಸ ಪ್ಲಾನ್; ಸ್ವಸಹಾಯ ಸಂಘಗಳ ಮೊರೆ ಹೋದ ಸರ್ಕಾರ!
ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಹರಸಾಹಸಪಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದೆಡೆ ತೆರಿಗೆ ಬಾಕಿಯನ್ನು ವಸೂಲಿ ಮಾಡುವುದೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಇದೀಗ ಸರ್ಕಾರ ಹೊಸ ಐಡಿಯಾವೊಂದನ್ನು ಕಂಡುಕೊಂಡಿದೆ. ಆ ಮೂಲಕ ತೆರಿಗೆ ಬಾಕಿ ಹಾಗೂ ಇತರ ಬಿಲ್ ಬಾಕಿಗಳನ್ನು ಸಂಗ್ರಹಿಸಲು ಮುಂದಾಗಿದೆ. ಆ ಕುರಿತ ವಿವರ ಇಲ್ಲಿದೆ.

ಬೆಂಗಳೂರು, ಜೂನ್ 25: ಆಸ್ತಿತೆರಿಗೆ (Property Tax), ನೀರಿನ ಬಿಲ್ ಬಾಕಿ ವಸೂಲಿಗೆ ನೋಟಿಸ್ ನೀಡಿ ಸುಸ್ತಾದ ಸರ್ಕಾರ (Karnataka Government), ಇದೀಗ ಹೊಸ ಯೋಜನೆಗೆ ಮುಂದಾಗಿದೆ. ಬಾಕಿ ತೆರಿಗೆ ವಸೂಲಿ ಮಾಡಲು ಸ್ವಸಹಾಯ ಸಂಘಗಳ ಮೊರೆ ಹೋಗಿರುವ ಸರ್ಕಾರ, ರಾಜ್ಯದ ಎನ್ಜಿಒಗಳು, ಸ್ವಸಹಾಯ ಸಂಘಗಳ ಮೂಲಕ ತೆರಿಗೆ ಬಾಕಿ ವಸೂಲಿ ಮಾಡಿಸಲು ಸಜ್ಜಾಗಿದೆ. ಈ ಬಗ್ಗೆ ಸಚಿವ ಸಂಪುಟದಲ್ಲೂ ಚರ್ಚೆ ನಡೆದಿದ್ದು ಸಂಪುಟದಿಂದ ಕೂಡ ಹಸಿರು ನಿಶಾನೆ ಸಿಕ್ಕಿದೆ.
ಸದ್ಯ ಪಾಲಿಕೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಂದ ಆಸ್ತಿ ತೆರಿಗೆ ಒಟ್ಟು 1,860.17 ಕೋಟಿ ರೂ. ಬಾಕಿ ಇದೆ. ಇದನ್ನ ವಸೂಲಿ ಮಾಡಲು ಮುಂದಾಗಿರುವ ಸರ್ಕಾರ, ಬಾಕಿ ವಸೂಲಿ ಜವಬ್ದಾರಿಯನ್ನು ಸ್ವಸಹಾಯ ಸಂಘಗಳು ಹಾಗೂ ಎನ್ಜಿಒಗಳಿಗೆ ವಹಿಸಲು ಸಜ್ಜಾಗಿದೆ. ಇದಕ್ಕೆ ಪ್ರತಿಯಾಗಿ ಸ್ವಸಹಾಯ ಸಂಘಗಳಿಗೆ ವಸೂಲಿಯಾದ ಹಣದ ಶೇಕಡ 5 ರಷ್ಟು ಪಾಲನ್ನ ಕಮಿಷನ್ ಆಗಿ ಕೊಡುವುದಕ್ಕೂ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಹೆಚ್ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
315 ನಗರ ಸ್ಥಳೀಯ ಸಂಸ್ಥೆಗಳು, 10 ಮಹಾನಗರ ಪಾಲಿಕೆಗಳು, 61 ನಗರ ಸಭೆಗಳು, 114 ಪಟ್ಟಣ ಪಂಚಾಯಿತಿಗಳು ಹಾಗೂ 4 ಅಧಿಸೂಚಿತ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ವಸೂಲಿಯ ಹೊಣೆಯನ್ನ ಸ್ವಸಹಾಯ ಸಂಘಗಳಿಗೆ ವಹಿಸೋಕೆ ತಯಾರಿ ನಡೆದಿದ್ದು, ಆ ಮೂಲಕ ಸರ್ಕಾರದ ಬೊಕ್ಕಸ ತುಂಬಿಸಿಕೊಳ್ಳಲು ಸಿದ್ಧತೆ ನಡೆದಿದೆ.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಜೋರಾಗುತ್ತಿದೆ ಡಿಸಿಎಂ ಫೈಟ್: ಶೀಘ್ರದಲ್ಲೇ ದೆಹಲಿಗೆ ಕಾಂಗ್ರೆಸ್ ನಾಯಕರು
ಒಟ್ಟಿನಲ್ಲಿ ಈಗಾಗಲೇ ಪಂಚ ಗ್ಯಾರಂಟಿಗಳನ್ನ ನೀಡಿ ಸುಸ್ತಾಗಿರೋ ಸರ್ಕಾರ, ಇದೀಗ ಒಂದೊಂದಾಗಿ ಆದಾಯದ ಮೂಲ ಹುಡುಕಲು ಮುಂದಾಗಿದೆ ಎಂಬ ಚರ್ಚೆ ಕೇಳಿಬರುತ್ತಿದೆ. ಈ ಮಧ್ಯೆ ಸ್ವಸಹಾಯ ತೆರಿಗೆ ಬಾಕಿ ವಸೂಲಿಗೆ ಸಂಘಗಳ ಮೊರೆ ಹೋಗಿದ್ದು, ಸರ್ಕಾರದ ಈ ಯೋಜನೆಗೆ ತೆರಿಗೆ ಬಾಕಿದಾರರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ