ಬೆಂಗಳೂರು: ಮೇಕೆದಾಟು ಅಣೆಕಟ್ಟು ಯೋಜನೆಗೆ ಸಂಬಂಧಿಸಿ ಹಸಿರು ನ್ಯಾಯಮಂಡಳಿಯಲ್ಲಿ ಕರ್ನಾಟಕ ನಿಟ್ಟುಸಿರು ಬಿಡುವಂತಾಗಿದೆ. ಮಾಧ್ಯಮಗಳ ವರದಿ ಆಧರಿಸಿ ಕರ್ನಾಟಕ ವಿರುದ್ಧ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣವನ್ನು ರಾಷ್ಟ್ರೀಯ ಹಸಿರು ಪೀಠ (ಎನ್ಜಿಟಿ) ಕೈಬಿಟ್ಟಿದೆ.
ಮೇಕೆದಾಟು ಅಣೆಕಟ್ಟು ಯೋಜನೆಗೆ ಸಂಬಂಧಿಸಿ ಪರಿಸರ ಅನುಮತಿ ಇಲ್ಲದೇ ಕಾಮಗಾರಿಗೆ ಸಿದ್ಧತೆ ನಡೆಸಿದ ಆರೋಪದಲ್ಲಿ ಸ್ಥಳ ಪರಿಶೀಲನೆಗೆ ಜಂಟಿ ಸಮಿತಿ ರಚಿಸಲಾಗಿತ್ತು. ರಾಷ್ಟ್ರೀಯ ಹಸಿರು ಪೀಠದ ಆದೇಶದ ಮರುಪರಿಶೀಲನೆ ಕೋರಿ ಕರ್ನಾಟಕ ಸರ್ಕಾರ ಅರ್ಜಿ ಸಲ್ಲಿಸಿತ್ತು.
ಮೇಕೆದಾಟು ಯೋಜನೆಗೆ ಕೇಂದ್ರ ತಾತ್ವಿಕ ಒಪ್ಪಿಗೆ ನೀಡಿದೆ. ಮೇಕೆದಾಟು ಯೋಜನೆ ಪ್ರಶ್ನಿಸಿ ಈಗಾಗಲೇ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಈ ಮಧ್ಯೆ ಚೆನ್ನೈ ರಾಷ್ಟ್ರೀಯ ಹಸಿರು ಪೀಠದಿಂದ ಸಮಿತಿ ರಚನೆ ಸರಿಯಲ್ಲ ಎಂದು ಸರ್ಕಾರದ ಪರ ಎಜಿ ಪ್ರಭುಲಿಂಗ್ ನಾವದಗಿ ವಾದಿಸಿದ್ದರು. ಈ ವಾದ ರಾಷ್ಟ್ರೀಯ ಹಸಿರು ಪೀಠ ಪ್ರಕರಣ ಮುಕ್ತಾಯಗೊಳಿಸಿದೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ
ಮೇಕೆದಾಟು ಯೋಜನೆಗೆ ರಾಷ್ಟ್ರೀಯ ಹಸಿರು ಪೀಠ ಗ್ರೀನ್ಸಿಗ್ನಲ್ ನೀಡಿದ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸುಪ್ರೀಂಕೋರ್ಟ್ನಲ್ಲೂ ರಾಜ್ಯದ ಹಿತಾಸಕ್ತಿ ಕಾಪಾಡುತ್ತೇವೆ. ಮೇಕೆದಾಟು ಯೋಜನೆಯಲ್ಲಿ ಜನರ ಹಿತಾಸಕ್ತಿ ಕಾಪಾಡುತ್ತೇವೆ. ಕರ್ನಾಟಕದ ಹಿತಾಸಕ್ತಿ ಕಾಪಾಡುವ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನೆಲ ಜಲದ ವಿಚಾರ ಬಂದಾಗ ಸರ್ಕಾರ ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
(NGT Orders for Karnataka in Mekedatu project)