ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್​ಗಿಲ್ಲ ರಿಲೀಫ್: ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ದುಬೈಯಿಂದ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಹಾಗೂ ಇತರ ಆರೋಪಿಗಳಿಗೆ ಹೈಕೋರ್ಟ್​​ನಲ್ಲಿ ನಿರಾಸೆ ಆಗಿದೆ. ಆರೋಪಿಗಳು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಇದರೊಂದಿಗೆ, ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಸಂಕಷ್ಟ ಮುಂದುವರಿದಂತಾಗಿದೆ.

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್​ಗಿಲ್ಲ ರಿಲೀಫ್: ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ರನ್ಯಾ ರಾವ್
Edited By:

Updated on: Dec 19, 2025 | 11:55 AM

ಬೆಂಗಳೂರು, ಡಿಸೆಂಬರ್ 19: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ (Ranya Rao), ತರುಣ್ ರಾಜ್ ಹಾಗೂ ಸಾಹಿಲ್ ಜೈನ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ (Karnataka High Court) ವಜಾಗೊಳಿಸಿದೆ. ಅಕ್ರಮ ಬಂಧನವಾಗಿದೆ ಎಂದು ಆರೋಪಿಸಿ ಬಿಡುಗಡೆ ಕೋರಿ ಮೂವರು ಆರೋಪಿಗಳು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಹಾಗೂ ವಿಜಯ್ ಕುಮಾರ್ ಪಾಟೀಲ್ ಅವರನ್ನೊಳಗೊಂಡ ಪೀಠ, ಅರ್ಜಿದಾರರ ವಾದವನ್ನು ತಳ್ಳಿ ಹಾಕಿದೆ.

ಬಂಧನ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಮೂವರು ಆರೋಪಿಗಳ ಬಂಧನ ಕಾನೂನುಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ, ರನ್ಯಾ ರಾವ್, ತರುಣ್ ರಾಜ್ ಹಾಗೂ ಸಾಹಿಲ್ ಜೈನ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ಈ ಮೂಲಕ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಆರೋಪಿಗಳಿಗೆ ತಾತ್ಕಾಲಿಕ ರಿಲೀಫ್ ಸಿಗದಂತಾಗಿದೆ. ಪ್ರಕರಣದ ತನಿಖೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ ಹಿನ್ನೆಲೆ

2025 ರ ಮಾರ್ಚ್ 3 ರಂದು ದುಬೈನಿಂದ ಬೆಂಗಳೂರಿಗೆ ಬಂದ ವೇಳೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಟಿ ರನ್ಯಾ ರಾವ್ 14.8 ಕೆಜಿ ಚಿನ್ನದೊಂದಿಗೆ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಡಿಆರ್‌ಐ ತನಿಖೆಯಲ್ಲಿ ರನ್ಯಾ ರಾವ್ ಮತ್ತು ಸಹ-ಆರೋಪಿಗಳು ಒಟ್ಟು 127 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಡಿಆರ್‌ಐ ಸುಮಾರು 250 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿ, 102 ಕೋಟಿ ರೂಪಾಯಿಗೂ ಅಧಿಕ ದಂಡ ವಿಧಿಸಿದೆ. ಜಾರಿ ನಿರ್ದೇಶನಾಲಯವು 34 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ.

ಇದನ್ನೂ ಓದಿ: ಅಕ್ರಮ ಚಿನ್ನ ಸಾಗಣೆ ಕೇಸ್: ನಟಿ ರನ್ಯಾ ರಾವ್​ಗೆ 102.55 ಕೋಟಿ ರೂಪಾಯಿ ದಂಡ

ಈ ಪ್ರಕರಣದಲ್ಲಿ ಹೋಟೆಲ್ ಉದ್ಯಮಿ ತರುಣ್ ಕೊಂಡರಾಜು ಹಾಗೂ ಆಭರಣ ವ್ಯಾಪಾರಿಗಳಾದ ಸಾಹಿಲ್ ಮತ್ತು ಭರತ್ ಜೈನ್ ಸಹ-ಆರೋಪಿಗಳಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ