AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಯೋಜನೆಗೆ ಕೊನೆಗೂ ಗ್ರೀನ್ ಸಿಗ್ನಲ್: ಈ ಷರತ್ತುಗಳನ್ನು ಪಾಲಿಸಲೇಬೇಕು!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಮತ್ತು ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಕೊನೆಗೂ ಗ್ರೀನ್ ಸಿಗ್ನಲ್ ದೊರೆತಿದೆ. ಗೃಹ ಇಲಾಖೆ ಸೂಚನೆ ಮೇರೆಗೆ ಬೆಂಗಳೂರು ಪೊಲೀಸರು 17 ಅಂಶಗಳ ಮಾರ್ಗಸೂಚಿ ಹೊರಡಿಸಿದ್ದಾರೆ. ಪ್ರವೇಶ ದ್ವಾರ ಸುಧಾರಣೆ, ಪಾರ್ಕಿಂಗ್ ವ್ಯವಸ್ಥೆ, ಪ್ರೇಕ್ಷಕರ ಸಾಲುಗಳಿಗೆ ಪ್ರತ್ಯೇಕ ವ್ಯವಸ್ಥೆ ಸೇರಿದಂತೆ ಹಲವು ಬದಲಾವಣೆಗಳನ್ನು ಕಡ್ಡಾಯಗೊಳಿಸಲಾಗಿದೆ. ಮಾರ್ಚ್‌ ವೇಳೆಗೆ ಸಿವಿಲ್ ಕಾಮಗಾರಿಗಳು ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಐಪಿಎಲ್ ನಡೆಯೋದು ಪಕ್ಕಾ ಆಗಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಯೋಜನೆಗೆ ಕೊನೆಗೂ ಗ್ರೀನ್ ಸಿಗ್ನಲ್: ಈ ಷರತ್ತುಗಳನ್ನು ಪಾಲಿಸಲೇಬೇಕು!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಆಯೋಜನೆಗೆ ಕೊನೆಗೂ ಗ್ರೀನ್ ಸಿಗ್ನಲ್
Kiran HV
| Edited By: |

Updated on:Dec 19, 2025 | 11:27 AM

Share

ಬೆಂಗಳೂರು, ಡಿಸೆಂಬರ್ 19: ಬೆಂಗಳೂರಿನ ಐತಿಹಾಸಿಕ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪುನರಾರಂಭಿಸಲು ಅಂತಿಮವಾಗಿ ಗ್ರೀನ್ ಸಿಗ್ನಲ್ ದೊರೆತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ಘಟನೆಯ ನಂತರ, ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಇದೀಗ ಬೆಂಗಳೂರು ಪೊಲೀಸರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (KSCA) ಕಟ್ಟುನಿಟ್ಟಾದ 17 ಅಂಶಗಳ ಮಾರ್ಗಸೂಚಿಯನ್ನು ಸಿದ್ಧಪಡಿಸಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಲು ಸಜ್ಜಾಗಿದ್ದಾರೆ.

ಗೃಹ ಇಲಾಖೆ ಸಿದ್ಧಪಡಿಸಿರುವ ಈ ಷರತ್ತುಗಳ ಕುರಿತು ಕೆಎಸ್​​ಸಿಎ ಪದಾಧಿಕಾರಿಗಳು ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಕೆಎಸ್​​ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ತಂಡ ಗೃಹ ಸಚಿವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಲಿದೆ. ಪೊಲೀಸ್ ಕಮಿಷನರ್ ಅವರು ನ್ಯಾ. ಮೈಕಲ್ ಡಿ‌ ಕುನ್ಹಾ ಸಮಿತಿ ವರದಿಯ ಶಿಫಾರಸುಗಳನ್ನು ಆಧರಿಸಿ, ಕಾಲ್ತುಳಿತದಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಈ 17 ಷರತ್ತುಗಳನ್ನು ವಿಧಿಸಿದ್ದಾರೆ. ಕೆಎಸ್​​ಸಿಎ ಈ ಷರತ್ತುಗಳನ್ನು ಈಡೇರಿಸಿದ ತಕ್ಷಣವೇ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಲಾಗುವುದು ಎಂದು ತಿಳಿದುಬಂದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ವೇಳೆಗೆ ಎಲ್ಲವರೂ ಸರಿಯಾಗುವ ನಿರೀಕ್ಷೆ ಇದೆ.

17 ಅಂಶಗಳ ಮಾರ್ಗಸೂಚಿ ಬಿಡುಗಡೆ: ಏನೇನಿವೆ?

ಮಾರ್ಗಸೂಚಿಗಳಲ್ಲಿನ ಪ್ರಮುಖ ಅಂಶಗಳೆಂದರೆ, ಸ್ಟೇಡಿಯಂ ಒಳಗೆ ಮತ್ತು ಹೊರಗೆ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಗಳ ಸುಧಾರಣೆ. ಪ್ರಸ್ತುತ, ಟಿಕೆಟ್ ವಿತರಣೆ ಮತ್ತು ಪ್ರೇಕ್ಷಕರ ಕ್ಯೂಗಳು ಫುಟ್​ಪಾತ್​​​ಗಳ ಮೇಲೆ ನಡೆಯುತ್ತಿದ್ದು, ಇದು ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ತೀವ್ರ ತೊಂದರೆ ಉಂಟುಮಾಡುತ್ತದೆ. ಇದನ್ನು ತಪ್ಪಿಸಲು ಪ್ರತ್ಯೇಕ ಸ್ಥಳಗಳನ್ನು ಗುರುತಿಸಬೇಕು. ಸಾರ್ವಜನಿಕರ ಓಡಾಟಕ್ಕೆ ಅವಕಾಶ ಕಲ್ಪಿಸಬೇಕು. ಹಾಗೆಯೇ, ಸ್ಟೇಡಿಯಂನ ಎಲ್ಲಾ ಗೇಟ್‌ಗಳನ್ನು ಕನಿಷ್ಠ ಆರು ಅಡಿ ಅಗಲಕ್ಕೆ ವಿಸ್ತರಿಸಬೇಕು. ಸದ್ಯದ ಕಿಕ್ಕಿರಿದ ಗೇಟ್‌ಗಳು ಮತ್ತು ಅಸಮವಾದ ಪ್ರವೇಶ ಮಾರ್ಗಗಳು ಅಪಾಯವನ್ನುಂಟುಮಾಡುತ್ತವೆ. ಇದಲ್ಲದೆ, ಅಗ್ನಿಶಾಮಕ ಸುರಕ್ಷತೆಗಾಗಿ ಪ್ರತ್ಯೇಕ ನಿರ್ಗಮನ ದ್ವಾರಗಳನ್ನು ಕಡ್ಡಾಯಗೊಳಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಸ್ಟೇಡಿಯಂ ಒಳಗೆ ಪ್ರತ್ಯೇಕ ಸೌಲಭ್ಯಗಳನ್ನು ಒದಗಿಸಬೇಕು. ಸ್ಟೇಡಿಯಂ ಒಳಗೆ ಪ್ರವೇಶಿಸುವ ಪ್ರೇಕ್ಷಕರ ನೈಜ-ಸಮಯದ ಸಂಖ್ಯೆಯನ್ನು (ರಿಯಲ್ ಟೈಮ್ ಕೌಂಟ್) ನಿಖರವಾಗಿ ಇಟ್ಟುಕೊಳ್ಳುವ ವ್ಯವಸ್ಥೆ ಜಾರಿಗೆ ತರಬೇಕು. ಟಿಕೆಟ್‌ಗಳನ್ನು ಸ್ಟೇಡಿಯಂ ಒಳಗೆ ವಿತರಿಸಲು ಪ್ರತ್ಯೇಕ ಸ್ಥಳಗಳನ್ನು ಗೊತ್ತುಪಡಿಸಬೇಕು. ಸ್ಟೇಡಿಯಂ ಸುತ್ತಲಿನ ಪಾರ್ಕಿಂಗ್, ಪಿಕ್‌ಅಪ್ ಮತ್ತು ಡ್ರಾಪ್ ವ್ಯವಸ್ಥೆಗಳನ್ನು ಸುಧಾರಿಸಬೇಕು.

ಇದನ್ನೂ ಓದಿ: IPL 2026: ಕೊನೆಗೂ RCB ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್

ಈ ಎಲ್ಲಾ ಬದಲಾವಣೆಗಳಿಗೆ ಗಣನೀಯ ಪ್ರಮಾಣದ ಕಾಮಗಾರಿಗಳನ್ನು ನಡೆಸಬೇಕಾದ ಅಗತ್ಯವಿದೆ. ಇವುಗಳನ್ನು ಪೂರ್ಣಗೊಳಿಸಲು ಸುಮಾರು ಎರಡು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಒಮ್ಮೆ ಎಲ್ಲಾ ಕೆಲಸಗಳು ಪೂರ್ಣಗೊಂಡರೆ, ಬಹುಶಃ ಮಾರ್ಚ್ ತಿಂಗಳ ವೇಳೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಲ್ಲಾ ರೀತಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸಲು ಸಂಪೂರ್ಣ ಅವಕಾಶ ಸಿಗಲಿದೆ. ಇದು ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದ್ದು, ಸುರಕ್ಷಿತ ವಾತಾವರಣದಲ್ಲಿ ಪಂದ್ಯಗಳನ್ನು ವೀಕ್ಷಿಸಲು ಅವಕಾಶ ದೊರೆಯಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:27 am, Fri, 19 December 25