18 ವರ್ಷ ಮೇಲ್ಪಟ್ಟವರಿಗೆ ಸದ್ಯ ಕೊವಿಡ್ ಲಸಿಕೆ ಇಲ್ಲ: ರಾಜ್ಯ ಸರ್ಕಾರ ಆದೇಶ
Karnataka Govt On above 18 Covid Vaccination: ಲಸಿಕೆಯ ಅಗತ್ಯ ಸಂಗ್ರಹ ಇರಿಸಿಕೊಂಡೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ದಿನಾಂಕ ಘೋಷಣೆ ಮಾಡಲಾಗುವುದು ಎಂಬ ನಿರ್ಣಯವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಬೆಂಗಳೂರು: 18ರಿಂದ 44 ವರ್ಷದವರಿಗೆ ಮೇ 14ರಿಂದ ಕೊರೊನಾ ಲಸಿಕೆ ನೀಡಿಕೆ ಸ್ಥಗಿತಗೊಳಿಸಲು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ತಾತ್ಕಾಲಿಕವಾಗಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಸ್ಥಗಿತಗೊಳಿಸಲಾಗಿದೆ. ಮುಂದಿನ ಆದೇಶ ಹೊರಡಿಸುವವರೆಗೂ ಇದೇ ಆದೇಶ ಜಾರಿಯಲ್ಲಿರಲ್ಲಿದೆ. ಈಗಾಗಲೇ ಲಸಿಕೆಗೆ ಸಮಯ ನಿಗದಿಪಡಿಸಲ್ಪಟ್ಟಿರುವರೂ ಸೇರಿದಂತೆ ಲಸಿಕೆ ತಾತ್ಕಾಲಿಕ ಸ್ಥಗಿತಗೊಳ್ಳಲಿದೆ ಎಂದು ಸರ್ಕಾರ ಸೂಚಿಸಿದೆ.
45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಲಸಿಕೆ ನೀಡಿ ಮುಗಿದ ಬಳಿಕವೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು. ಲಸಿಕೆಯ ಅಗತ್ಯ ಸಂಗ್ರಹ ಇರಿಸಿಕೊಂಡೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ದಿನಾಂಕ ಘೋಷಣೆ ಮಾಡಲಾಗುವುದು ಎಂಬ ನಿರ್ಣಯವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಜತೆಗೆ ಲಾಕ್ ಡೌನ್ ಅವಧಿಯಲ್ಲಿ ಶ್ರಮಿಕ ವರ್ಗಕ್ಕೆ ವಿಶೇಷ ನೆರವು ಬಗ್ಗೆ ಸದ್ಯ ಯಾವುದೇ ನಿರ್ಧಾರವನ್ನೂ ಕೈಗೊಳ್ಳುವುದು ಬೇಡ ಎಂದು ಕೊವಿಡ್ ಪರಿಸ್ಥಿತಿ ಅವಲೋಕಿಸಿ ನಡೆಸಿದ ಸಭೆ ನಿಶ್ಚಯಿಸಿತು.
ರಾಜ್ಯದ ಜನರಲ್ಲಿ ವ್ಯಾಕ್ಸಿನ್ ಬಗ್ಗೆ ಇರುವ ಗೊಂದಲವನ್ನು ಆದಷ್ಟು ಬೇಗ ನಿವಾರಿಸಿ. ಜಿಲ್ಲೆಗಳಲ್ಲಿ ಆಕ್ಸಿಜನ್ ಸರಬರಾಜು ವ್ಯತ್ಯಾಸವಾಗದಂತೆ ಕ್ರಮ ಜಿಲ್ಲೆಗಳಲ್ಲಿ ಕೊರತೆ ಉಂಟಾದರೆ ಕೂಡಲೇ ಬಗೆಹರಿಸಬೇಕು. ಆಕ್ಸಿಜನ್, ಐಸಿಯು ಬೆಡ್ ಸಂಖ್ಯೆ ಹೆಚ್ಚಿಸಲು ಗಮನಹರಿಸಿ. 2ನೇ ಡೋಸ್ ಲಸಿಕೆ ಪಡೆಯುವವರಿಗೆ ಮೊದಲ ಆದ್ಯತೆ ಒದಗಿಸಿ. ಪ್ರತಿ ಜಿಲ್ಲೆಯ ವ್ಯಾಕ್ಸಿನ್ ಲಭ್ಯತೆ ಬಗ್ಗೆ ಮಾಹಿತಿ ಇರಬೇಕು. ವ್ಯಾಕ್ಸಿನ್ ಪೂರೈಸುವ ಕಂಪನಿಗಳ ಜೊತೆ ಸಂಪರ್ಕವಿರಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆಯಲ್ಲಿ ಉಪಸ್ಥಿತರಿದ್ದ ಸಚಿವರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಡಾ.ಅಶ್ವತ್ಥ್ ನಾರಾಯಣ, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಆರ್.ಅಶೋಕ್, ಡಾ.ಸುಧಾಕರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಸಿ ಪಿ.ರವಿಕುಮಾರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಪೊಲೀಸ್ ಆಯುಕ್ತ ಕಮಲ್ ಪಂತ್ ಭಾಗಿಯಾಗಿದ್ದರು.
ಇದನ್ನೂ ಓದಿ: ಸಮಾಜದಲ್ಲಿನ ದುರ್ಬಲ ವಿಭಾಗದವರ ಮನೆ ಬಾಗಿಲಿಗೆ ತೆರಳಿ ಕೊವಿಡ್ ಲಸಿಕೆ ನೀಡಲು ನಿರ್ದೇಶಿಸಿ: ಸುಪ್ರೀಂಕೋರ್ಟ್ಗೆ ವೈಬಿಎಐ ಮನವಿ
ಸುದ್ದಿ ವಿಶ್ಲೇಷಣೆ | ಕೊವಿಡ್ ಸುನಾಮಿ ಮಧ್ಯೆ ರಾಜ್ಯದ ಐಎಎಸ್ ಅಧಿಕಾರಿಗಳ ವಿಫಲತೆ ಬಗ್ಗೆ ಮಾತನಾಡುವವರು ಯಾರು?
(No vaccine for people over 18 order by Karnataka state government)
Published On - 10:15 pm, Wed, 12 May 21