ಸಂಪುಟ ಪುನಾರಚನೆ ಸುತ್ತ ಪ್ರಶ್ನೆಗಳ ಹುತ್ತ: ಕಾಂಗ್ರೆಸ್ನಲ್ಲಿ ನವೆಂಬರ್ ಶಾಂತಿ ಕ್ರಾಂತಿಯ ಇನ್ಸೈಡ್ ಮಾಹಿತಿ
ಸಚಿವ ಸಂಪುಟ ಪುನಾರಚನೆ ಚರ್ಚೆ ಕರ್ನಾಟಕ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಜೋರಾಗಿದೆ. ಸಚಿವ ಸ್ಥಾನ ಆಕಾಂಕ್ಷಿಗಳು ಈಗಾಗಲೇ ಸಿಎಂ ಸಿದ್ದರಾಮಯ್ಯನವರ ಬೆನ್ನು ಬಿದ್ದಿದ್ದು ಲಾಬಿ ನಡೆಸಿದ್ದಾರೆ. ಆದರೆ ನಾಯಕರು ಅಂದುಕೊಂಡಷ್ಟು ಸುಲಭವಲ್ಲ ಈ ಪುನರ್ ರಚನೆಯ ಕಾರ್ಯ. ಯಾಕಂದ್ರೆ ಸರ್ಕಾರ ಸಂಪುಟ ಸರ್ಜರಿ ಮಾಡಬೆಕು ಅಂದ್ರೆ ಕಾಲಾವಕಾಶ ಹಿಡಿಯಲಿದೆ. ಯಾಕೆ ಅಂತೀರಾ? ಇಲ್ಲಿದೆ ನವೆಂಬರ್ ಕ್ರಾಂತಿ ಶಾಂತಿಯ ಇನ್ಸೈಡ್ ಡಿಟೇಲ್ಸ್

ಬೆಂಗಳೂರು, (ನವೆಂಬರ್ 17): ರಾಜ್ಯ ಸಚಿವ ಸಂಪುಟ ಪುನಾರಚನೆ (Karnataka cabinet reshuffle) ಕುರಿತು ನಡೆಯುತ್ತಿರುವ ಚರ್ಚೆ ಬಹುತೇಕ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದ್ದು, ರಾಜ್ಯದಲ್ಲಿ ಘಟಿಸಬಹುದೆಂದು ನಿರೀಕ್ಷಿಸಲಾಗುತ್ತಿರುವ ನವೆಂಬರ್ ಕ್ರಾಂತಿ ಠುಸ್ ಆದಂತಾಗಿದೆ. ಹೌದು.. ದೆಹಲಿಯಲ್ಲಿ ಸಂಪುಟ ಪುನರ್ ರಚನೆಯ ಚರ್ಚೆ ಏನೋ ಮುನ್ನಲೆಗೆ ಬಂದಿದೆ. ಆದ್ರೆ ರಾಜ್ಯ ಸರ್ಕಾರ ಹಾಗೂ ನಾಯಕರು ಅಂದುಕೊಂಡಷ್ಟು ಪುನರ್ ರಚನೆ ಮಾಡೋದು ಸುಲಭನಾ ಎನ್ನುವುದು ಮುಂದಿರವ ಪ್ರಶ್ನೆ. ಯಾಕಂದ್ರೆ ಸಂಪುಟ ಸರ್ಜರಿ ಮಾಡುವುದು ಅಂದ್ರೆ ಅದೊಂತರ ಜೇನುಗೂಡಿಗೆ ಕೈಹಾಕಿದಂತೆ. ಕೊಂಚ ಯಾಮಾರಿದ್ರೂ ಸಂಕಷ್ಟ, ಪಕ್ಷಕ್ಕೆ ಸಂಕಟ ಕಟ್ಟಿಟ್ಟ ಬುತ್ತಿ. ಹೀಗಿರುವಾಗ ಸಂಪುಟ ಪುನರ್ ರಚನೆ ಸದ್ಯ ಮಾತುಕತೆಗಷ್ಟೇ ಸೀಮಿತ ಎನ್ನುವುದು ರಾಜಕೀಯ ಪಡಸಾಲೆಯ ವಿಶ್ಲೇಷಣೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಅವರೇನೋ ಸಂಪುಟ ಪುನರ್ ರಚನೆ ಮಾಡ್ತೀವಿ ಅನ್ನೋ ಬೇಡಿಕೆ ಇಟ್ಟಿದ್ದಾರೆ. ಆದ್ರೆ ಈ ಬೆಳವಣಿಗೆಯ ಸುತ್ತ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.
ಸಂಪುಟದ ಸುತ್ತ ಪ್ರಶ್ನೆಗಳ ಹುತ್ತ
ಸಂಪುಟ ಪುನರ್ ರಚನೆ ಮಾಡಿದ್ರೆ ಎಷ್ಟು ಜನರನ್ನ ಕೈಬಿಡಬೇಕು. ಯಾಱರನ್ನ ಸಂಪುಟದಿಂದ ತೆಗೆಯಬೇಕು. ಇವರನ್ನ ತೆಗೆಯೋದಕ್ಕೆ ಸರ್ಕಾರ ಅನುಸರಿಸುವ ಮಾನದಂಡವೇನು ಎನ್ನುವ ಪ್ರಶ್ನೆ ಮೂಡುತ್ತೆ.ನಿಮ್ಮ ಪ್ರದರ್ಶನವಿಲ್ಲ ಅಂತಾರಾ? ಜಾತಿ ಸಮೀಕರಣದ ಲೆಕ್ಕ ಹಾಗೂ ಪ್ರಾದೇಶಿಕ ಪ್ರಾತಿನಿಧ್ಯದ ಪ್ರಸ್ತಾಪ ಮುಂದಿಟ್ಟು ಪುನರ್ ರಚನೆ ಮಾಡುತ್ತಾರಾ ಎನ್ನುವುದು ಸರ್ಕಾರದ ಮುಂದಿರುವ ಚಾಲೆಂಜ್.
ಇದನ್ನೂ ಓದಿ: ದಿಲ್ಲಿ ಯಾತ್ರೆ ಮುಗಿಸಿ ಬೆಂಗಳೂರಿನತ್ತ ಡಿಕೆ ಶಿವಕುಮಾರ್: ನವೆಂಬರ್ ಕ್ರಾಂತಿನಾ? ಶಾಂತಿನಾ?
ನವೆಂಬರ್ ಕ್ರಾಂತಿಯಲ್ಲಿ ಶಾಂತಿ
ಈಗ ಖರ್ಗೆ ಸಂಪುಟ ಪುನರ್ ರಚನೆಗೆ ಒಪ್ಪಿಗೆ ಕೊಟ್ಟರೂ ಈ ಕ್ಷಣಕ್ಕೆ ಬದಲಾವಣೆ ಆಗಿಬಿಡುತ್ತೆ ಎನ್ನಲಾಗಲ್ಲ. ಯಾಕಂದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಪಟ್ಟಿ ರೆಡಿ ಮಾಡಬೇಕು. ಬಳಿಕ ಪಟ್ಟಿಯನ್ನ ತೆಗೆದುಕೊಂಡು ಹೋಗಿ ಖರ್ಗೆ ಅವರೊಂದಿಗೆ ಚರ್ಚಿಸಬೇಕು. ಇದಾದ ಬಳಿಕ ಖರ್ಗೆ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಜೊತೆಗೆ ಮಾತುಕತೆ ಮಾಡಬೇಕು. ಇದಿಷ್ಟೆ ಅಲ್ಲ ಯಾವುದೇ ಸಂಪುಟ ರಚನೆ ಮಾಡ್ಬೇಕಾದ್ರೂ ಪಕ್ಷದ ಅಧ್ಯಕ್ಷರ ಅಭಿಪ್ರಾಯ ಅತ್ಯಗತ್ಯ. ಹೀಗಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸ್ಬೇಕು. ಆಗ ಡಿಕೆ ತಮ್ಮ ಬೆಂಬಲಿಗರ ಪಟ್ಟಿಯನ್ನೂ ಕೊಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.ಇದೆಲ್ಲ ಮುಗಿಯೋದಕ್ಕೆ ಏನಿಲ್ಲ ಅಂದ್ರು 15 ದಿನ ಬೇಕೇಬೇಕು.. ಆದ್ರೆ 15 ದಿನ ಮುಗಿದ ಬಳಿಕವೂ ಸಂಪುಟ ರಚನೆ ಆಗುವುದು ಬಹುತೇಕ ಅನುಮಾನ.
ಸರ್ಕಾರದ ಮುಂದಿನ ಸವಾಲೇನು?
13 ದಿನ ಕಳೆದರೆ ನವೆಂಬರ್ ದಾಟಿ ಡಿಸೆಂಬರ್ಗೆ ಎಂಟ್ರಿಯಾಗ್ತೀವಿ. ಡಿಸೆಂಬರ್ 1ರಿಂದ ಸಂಸತ್ ಅಧಿವೇಶನ ಆರಂಭವಾಗಲಿದೆ. ರಾಜ್ಯದಲ್ಲಿಯೂ ಡಿಸೆಂಬರ್ 8ರಿಂದ ಬೆಳಗಾವಿ ಅಧಿವೇಶನ ಶುರುವಾಗಲಿದ್ದು, ಡಿಸೆಂಬರ್ 19ರವರೆಗೆ ಕಲಾಪ ನಡೆಯಲಿದೆ. ಇದರ ನಡುವೆ ಸಂಪುಟ ಪುನಾರಚನೆ ಮಾಡಲು ಸಾಧ್ಯವಿಲ್ಲ. ಇದಾದ ಬಳಿಕ ಹೊಸ ವರ್ಷ ಶುರುವಾಗಲಿದೆ. ಸಂಕ್ರಾಂತಿ ಸಂಭ್ರಮ ಮನೆ ಮಾಡಿರುತ್ತದೆ. ಬೆನ್ನಲ್ಲೇ ಫೆಬ್ರವರಿಯಲ್ಲಿ ಬಜೆಟ್ ತಯಾರಿ ಕಾರ್ಯ ಶುರುವಾಗಲಿದೆ. ಹೀಗಿರೋವಾಗ, ಸಂಪುಟ ಪುನರಾಚನೆ ಸಾಧ್ಯನಾ ಅನ್ನೋದು ಇಲ್ಲಿರುವ ಮೂಲ ಪ್ರಶ್ನೆ. ಈ ನಡುವೆ ಗಾಂಧಿ ಪರಿವಾರ ಸಿಎಂ ಸಂಪುಟ ಪ್ರಸ್ತಾಪ ಮಾಡಿದ್ದಕ್ಕೆ ಹುನೂ ಅಂದಿಲ್ಲ. ಉಹುನೂ ಅಂದಿಲ್ಲ. ಹೀಗಾಗಿ ರಾಹುಲ್ ಗಾಂಧಿಯ ಸೂಚನೆಯ ಒಳಾರ್ಥವನ್ನ ನಾಯಕರೇ ಡಿಕೋಡ್ ಮಾಡ್ಬೇಕಿದೆ.
ಮೊದಲಾಗಿದ್ರೆ ಸಿಎಂ ಸಿದ್ದರಾಮಯ್ಯ ಒಬ್ಬರೇ ಪವರ್ ಸೆಂಟರ್. ಆದ್ರೆ ಇದೀಗ ರಾಜಕೀಯ ಸನ್ನಿವೇಶ ಬದಲಾಗಿದೆ. ಡಿಕೆ ಶಿವಕುಮಾರ್ ಒಂದು ಪವರ್ ಸೆಂಟರ್ ಆಗಿದ್ರೆ, ಖರ್ಗೆ ದೆಹಲಿಯಲ್ಲಿ ಕೂತಿದ್ದಾರೆ. ಈ ಮೂರು ಶಕ್ತಿ ಕೇಂದ್ರಗಳ ಹೊಂದಾಣಿಕೆ ಕಾಂಗ್ರೆಸ್ ಪಾಲಿಗೆ ಅತ್ಯಗತ್ಯ. ಒಂದ್ವೇಳೆ ಹೊಂದಾಣಿಕೆಯಾದರೂ ದೆಹಲಿಯಲ್ಲಿ ಶುರುವಾಗುವ ಕೋಟಾ ಹಾಗೂ ಲಾಬಿ ಆಟಕ್ಕೆ ಇಂತಿಷ್ಟೇ ಸಮಯ ಅಂತಿರಲ್ಲ.
ಇನ್ನು ಸಚಿವ ಸಂಪುಟದ ವಿಚಾರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಹೊಸ ಅರ್ಥ ಕಲ್ಪಿಸಿದ್ದಾರೆ. ಸಂಪುಟ ಪುನರ್ ರಚನೆ ಮೇಲೆ ಸಿಎಂ ಕುರ್ಚಿ ಆಟ ನಿಂತಿರೋದಾಗಿ ಹೇಳಿಕೆ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ಸಚಿವ ಸಂಪುಟ ಪುನರ್ ರಚನೆ ಸದ್ಯಕ್ಕಂತೂ ಆಗಲ್ಲ ಎನ್ನುವುದು ಬಹುತೇಕ ಖಚಿತ. ಹೀಗಾಗಿ ಶಾಂತಿಯಲ್ಲೇ ನವೆಂಬರ್ ಕ್ರಾಂತಿ ಅಂತ್ಯವಾಗಲಿದೆ.



