ಬೆಂಗಳೂರು: ಓಮ್ಮಿ ಆಂಬುಲೆನ್ಸ್ ಬಳಕೆ ರೋಗಿಗಳಿಗೆ ಅಷ್ಟು ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಸಾರಿಗೆ ಇಲಾಖೆ ಓಮ್ನಿ ಆ್ಯಂಬುಲೆನ್ಸ್ಗಳ ಮೇಲೆ ನಿರ್ಬಂಧ ಹೇರಿತ್ತು. 2018ರ ಏಪ್ರಿಲ್ 1ರಿಂದಲೇ ಯಾವುದೇ ಓಮ್ನಿ ಆಂಬ್ಯುಲೆನ್ಸ್ ಓಡಾಡದಂತೆ ಸೂಚನೆಯನ್ನೂ ನೀಡಿತ್ತು. ಆದರೆ ತನ್ನದೇ ಸೂಚನೆಗೆ ಕಿಮ್ಮತ್ತು ಕೊಡದೇ ಮೃದು ಧೋರಣೆ ತಳೆದಿರುವ ಸಾರಿಗೆ ಇಲಾಖೆ, ಓಮ್ನಿ ಆಂಬ್ಯುಲೆನ್ಸ್ ವಿಚಾರದಲ್ಲಿ ಜಾಣಕುರುಡುತನ ಪ್ರದರ್ಶನಕ್ಕೆ ಮುಂದಾಗಿದೆ.
2018ರಲ್ಲಿ ಓಮ್ನಿ ಆ್ಯಂಬುಲೆನ್ಸ್ಗಳ ಮೇಲೆ ನಿರ್ಬಂಧ ಹೇರಿದ ನಂತರ ರಾಜ್ಯಾದ್ಯಂತ ಸಂಚಾರ ಮಾಡುತ್ತಿರುವ 70 ಸಾವಿರ ಓಮ್ನಿ ಆಂಬುಲೆನ್ಸ್ಗಳ ಸಂಚಾರಕ್ಕೆ ಕಡಿವಾಣ ಬೀಳಲಿದೆ ಎಂದು ಸಾರಿಗೆ ಇಲಾಖೆ ತಿಳಿಸಿತ್ತು. ಓಮ್ನಿ ಆ್ಯಂಬುಲೆನ್ಸ್ಗಳಲ್ಲಿ ಅಗತ್ಯ ಸೌಲಭ್ಯಗಳು ಇರುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅಪಘಾತ ಸಂಭವಿಸಿದರೆ ರೋಗಿ ಸೇರಿದಂತೆ ಜೊತೆಗಿರುವವರ ಪ್ರಾಣಕ್ಕೂ ಅಪಾಯವಾಗುವ ಸಾಧ್ಯತೆಗಳಿವೆ. ಹಾಗಾಗಿ ಈ ಮಾದರಿಯ ಆಂಬುಲೆನ್ಸ್ ಗಳನ್ನು ನಿರ್ಬಂಧಿಸುವಂತೆ ಆರೋಗ್ಯ ಇಲಾಖೆ 2017 ರಲ್ಲೇ ಸಾರಿಗೆ ಇಲಾಖೆಗೆ ಮನವಿ ಮಾಡಿತ್ತು. ಆನಂತರ ಓಮ್ನಿ ಆಂಬುಲೆನ್ಸ್ಗಳ ಮೇಲೆ ನಿರ್ಬಂಧವನ್ನು ಸಹ ಹೇರಲಾಗಿತ್ತು. ಆದರೆ ಇದೀಗ ಸಂಪೂರ್ಣ ಬ್ಯಾನ್ ಮಾಡೋಕೆ ಸಾಧ್ಯವಿಲ್ಲ. ಹೊಸದಾಗಿ ಓಮ್ನಿ ಆಂಬ್ಯುಲೆನ್ಸ್ ರಿಜಿಸ್ಟ್ರೇಷನ್ ಮಾಡಿಸೋದನ್ನು ಮಾತ್ರ ನಿಲ್ಲಿಸಲಾಗಿದೆ. ಹೊರತಾಗಿ ಈಗಾಗಲೇ ಹದಗೆಟ್ಟಿರುವ ಆಂಬ್ಯುಲೆನ್ಸ್ ಗಳನ್ನು ಪರಿಸಿಲಿಸುವ ಕೆಲಸಕ್ಕೂ ಆರ್ ಟಿ ಓ ಮುಂದಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಾಮಾಜಿಕ ಹೋರಾಟಗಾರರಾದ ಸಾಯಿದತ್ತ ಅವರು ಈ ಆರೋಪ ಮಾಡಿದ್ದಾರೆ.
ಈ ಎಲ್ಲದರ ನಡುವೆ ಹೈಕೋರ್ಟ್ ಸೂಚನೆಯಂತೆ 2018. ಏಪ್ರಿಲ್ ನಿಂದ ಓಮ್ನಿ ಆಂಬುಲೆನ್ಸ್ ಗಳಾಗಿ ನೋಂದಣಿ ಮಾಡುವ ಹಾಗಿಲ್ಲ. ಜತೆಗೆ ಈಗಾಗಲೇ ನೋಂದಣಿಯಾಗಿರುವ ಓಮ್ನಿ ವಾಹನಗಳ ಅನುಮತಿಯನ್ನೂ ಕೂಡ ಹಿಂಪಡೆಯಬೇಕಾಗುತ್ತದೆ. ಸಾರಿಗೆ ಇಲಾಖೆ ಪ್ರಕಾರ ರಾಜ್ಯದಲ್ಲಿ 70 ಸಾವಿರ ಓಮ್ನಿ ಆಂಬುಲೆನ್ಸ್ ಗಳಿದ್ದು, ಈ ಪೈಕಿ ಬೆಂಗಳೂರು ನಗರದಲ್ಲಿ 11 ಸಾವಿರ ಓಮ್ನಿ ಆಂಬುಲೆನ್ಸ್ ಗಳಿವೆ. ಆದರೆ ಆರ್ ಟಿ ಓ ಹೊಸ ಓಮ್ಮಿ ಆಂಬುಲೆನ್ಸ್ ಗಳ ರಿಜಿಸ್ಟ್ರೇಷನ್ ನಿಲ್ಲಿಸಿ ಹಳೆಯ ವಾಹನಗಳು ರಸ್ತೆಗಿಳಿಯಲು ಅವಕಾಶ ನೀಡಿದೆ. ಒಟ್ಟಿನಲ್ಲಿ ಅಂದು ಓಮ್ನಿ ಆಂಬ್ಯುಲೆನ್ಸ್ ಸೇಫಲ್ಲ ಅಂತ ತರಾತುರಿಯಲ್ಲಿ ನಿರ್ಧಾರ ಕೈಗೊಂಡಿದ್ದ ಆರ್ ಟಿಓ ಕೇವಲ ಆರಂಭಿಕ ಶೂರತ್ವ ತೋರಿಸಿದಂತಾಗಿದೆ.
ವಿಶೇಷ ವರದಿ: ಕಿರಣ್ ಸೂರ್ಯ, ಟಿವಿ9
ಇದನ್ನೂ ಓದಿ:
Viral Video: ಆ್ಯಂಬುಲೆನ್ಸ್ಗೆ ದಾರಿ ಬಿಡದೇ ಸತಾಯಿಸಿದ ಕಾರು ಚಾಲಕನನ್ನು ಬಂಧಿಸಿದ ಮಂಗಳೂರು ಪೊಲೀಸರು
(Omni ambulance use is not safe for patients Transportation Department violated its own rule)