AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಭೂಸ್ವಾದೀನ ಕೈಬಿಟ್ಟ ಬೆನ್ನಲ್ಲೇ ಏರೋಸ್ಪೇಸ್ ಉದ್ಯಮಿಗಳಿಗೆ ಆಂಧ್ರಪ್ರದೇಶ ಗಾಳ

ಕರ್ನಾಟಕ ಸರ್ಕಾರ ದೇವನಹಳ್ಳಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟ ಬೆನ್ನಲ್ಲೇ, ಆಂಧ್ರಪ್ರದೇಶದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ ಏರೋಸ್ಪೇಸ್ ಉದ್ಯಮಿಗಳನ್ನು ತಮ್ಮ ರಾಜ್ಯಕ್ಕೆ ಆಹ್ವಾನಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಏರೋಸ್ಪೇಸ್ ಉದ್ಯಮಕ್ಕೆ ಅನುಕೂಲಕರ ನೀತಿ ಮತ್ತು ಭೂಮಿ ಲಭ್ಯವಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ಭೂಸ್ವಾದೀನ ಕೈಬಿಟ್ಟ ಬೆನ್ನಲ್ಲೇ ಏರೋಸ್ಪೇಸ್ ಉದ್ಯಮಿಗಳಿಗೆ ಆಂಧ್ರಪ್ರದೇಶ ಗಾಳ
ಆಂಧ್ರ ಪ್ರದೇಶ ಸಚಿವ ನಾರಾ ಲೋಕೇಶ್​
ವಿವೇಕ ಬಿರಾದಾರ
|

Updated on:Jul 15, 2025 | 10:15 PM

Share

ಬೆಂಗಳೂರು, ಜುಲೈ 15: ಉದ್ದೇಶಿತ ಹೈಟೆಕ್​ ಡಿಫೆನ್ಸ್​ ಮತ್ತು ಏರೋಸ್ಪೇಸ್​ ಪಾರ್ಕ್ (Aerospace Park)​ ನಿರ್ಮಾಣಕ್ಕಾಗಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿನ ರೈತರ 1777 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಕರ್ನಾಟಕ ಸರ್ಕಾರ (Karnataka Government) ಕೈಬಿಟ್ಟ ತಾಸಿನೊಳಗೆ ಆಂಧ್ರಪ್ರದೇಶ (Andhra Pradesh) ಏರೋಸ್ಪೇಸ್ ಉದ್ಯಮಿಗಳಿಗೆ ಗಾಳ ಹಾಕಿದೆ. ಹೌದು, ಆಂಧ್ರಪ್ರದೇಶ ರಾಜ್ಯದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಟ್ವೀಟ್​ ಮಾಡಿ, “ಡಿಯರ್ ಏರೋಸ್ಪೇಸ್ ಇಂಡಸ್ಟ್ರಿ, ಸುದ್ದಿ ತಿಳಿದು ಬೇಸರವಾಯ್ತು. ನನ್ನ ಬಳಿ ಉತ್ತಮ ಐಡಿಯಾ ಇದೆ. ನೀವು ಯಾಕೆ ಆಂಧ್ರಪ್ರದೇಶದತ್ತ ನೋಡಬಾರದು?” ಎಂದು ಪೋಸ್ಟ್​ ಮಾಡಿದ್ದಾರೆ.

ಮುಂದುವರೆದು, “ನಮ್ಮ ಬಳಿ ಆಕರ್ಷಣೀಯವಾದ ಏರೋಸ್ಪೇಸ್ ಪಾಲಿಸಿ ಇದೆ. ಏರೋಸ್ಪೇಸ್ ಇಂಡಸ್ಟ್ರಿ ತೆರೆಯಲು ಬೆಂಗಳೂರಿನ ಹೊರವಲಯದಲ್ಲೇ 8 ಸಾವಿರ ಎಕರೆ ಭೂಮಿ ಇದೆ. ನಿಮ್ಮ ಜೊತೆ ಶೀಘ್ರದಲ್ಲೇ ಮಾತುಕತೆ ನಡೆಸಲು ನಿರೀಕ್ಷೆಯಲ್ಲಿದ್ದೇನೆ” ಎಂದು ಟ್ವೀಟ್​ ಮಾಡಿದ್ದಾರೆ.

ಆಂಧ್ರ ಸಚಿವ ಟ್ವೀಟ್​

ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ

ಸಚಿವ ನಾರಾ ಲೋಕೇಶ್​ ಏರೋಸ್ಪೇಸ್ ಉದ್ಯಮಿಗಳಿಗೆ ಆಹ್ವಾನ ನೀಡುತ್ತಿದ್ದಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. “ವ್ಯವಹಾರವನ್ನು ಆಕರ್ಷಿಸುವುದು, ಉದ್ಯಮವನ್ನು ಸ್ವಾಗತಿಸುವುದು ಮತ್ತು ಉದ್ಯೋಗಗಳನ್ನು ಸೃಷ್ಟಿಸುವುದು ಹೀಗೆಯೇ. ಕರ್ನಾಟಕ ಸರ್ಕಾರ ನಾರಾ ಲೋಕೇಶ್ ಅವರಿಂದ ಕಲಿಯಲಿ ಮತ್ತು ತನ್ನ ಹಾದಿಯನ್ನು ಸರಿಪಡಿಸಿಕೊಳ್ಳಲಿ ಎಂದು ಆಶಿಸುತ್ತೇನೆ” ಎಂದು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ದೇವನಹಳ್ಳಿ ಭೂಸ್ವಾಧೀನ ಅಧಿಸೂಚನೆ ರದ್ದು, 1,777 ಎಕ್ರೆ ಜಮೀನಿಗಾಗಿ 1198 ದಿನ ನಡೆದ ರೈತರ ಹೋರಾಟಕ್ಕೆ ಜಯ

ತೇಜಸ್ವಿ ಸೂರ್ಯ ಟ್ವೀಟ್​

“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಈ ಏರೋಸ್ಪೇಸ್ ಪಾರ್ಕ್ ಅನ್ನು ಸ್ಥಾಪಿಸಲು ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಬೇಕು. ಬೆಂಗಳೂರು ಭಾರತದ ಏರೋಸ್ಪೇಸ್ ರಾಜಧಾನಿ. ನಾವು HAL, NAL, DRDO, ISRO, ಮತ್ತು ಏರ್‌ಬಸ್, ಬೋಯಿಂಗ್ ಮತ್ತು ಇತರ ಸ್ಟಾರ್ಟ್‌ಅಪ್‌ಗಳು ಸೇರಿದಂತೆ ಅನೇಕ ಖಾಸಗಿ ಕಂಪನಿಗಳನ್ನು ಹೊಂದಿದ್ದೇವೆ. ನಮ್ಮ ಪರಂಪರೆಯನ್ನು ದ್ವಿಗುಣಗೊಳಿಸೋಣ” ಎಂದು ಟ್ವೀಟ್​ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:13 pm, Tue, 15 July 25