Viral Video: ಆ್ಯಂಬುಲೆನ್ಸ್​ಗೆ ದಾರಿ ಬಿಡದೇ ಸತಾಯಿಸಿದ ಕಾರು ಚಾಲಕನನ್ನು ಬಂಧಿಸಿದ ಮಂಗಳೂರು ಪೊಲೀಸರು

Mangaluru News: ಅಡ್ಡಾದಿಡ್ಡಿ ಕಾರು ಚಲಾಯಿಸಿದ ಆರೋಪಿ ಚಾಲಕನನ್ನು ಚರಣ್ (31 ವರ್ಷ) ಎಂದು ಗುರುತಿಸಲಾಗಿದ್ದು, ಆತ ಆ್ಯನಿಮೇಶನ್​ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸೋಮವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಓಡಿಸುತ್ತಿದ್ದ ಚರಣ್​, ಹಿಂದಿನಿಂದ ಸೈರನ್ ಹಾಕಿಕೊಂಡು ಬಂದ ಆ್ಯಂಬುಲೆನ್ಸ್​ಗೆ ಜಾಗ ಬಿಡದೇ ಸತಾಯಿಸಿದ್ದ

Viral Video: ಆ್ಯಂಬುಲೆನ್ಸ್​ಗೆ ದಾರಿ ಬಿಡದೇ ಸತಾಯಿಸಿದ ಕಾರು ಚಾಲಕನನ್ನು ಬಂಧಿಸಿದ ಮಂಗಳೂರು ಪೊಲೀಸರು
ಘಟನೆಯ ಸ್ಕ್ರೀನ್‌ಗ್ರಾಬ್.

ಮಂಗಳೂರು: ಸೈರನ್​ ಸದ್ದು ಮಾಡುತ್ತಾ ಸಾಗುತ್ತಿದ್ದ ಆ್ಯಂಬುಲೆನ್ಸ್​ಗೆ ಬೇಕು ಬೇಕಂತಲೇ ಅಡ್ಡಿಪಡಿಸಿ, ದಾರಿ ಬಿಡದೇ ಸತಾಯಿಸಿದ ತಲೆಹರಟೆ ಕಾರು ಚಾಲಕನನ್ನು ಮಂಗಳೂರು ಪೊಲೀಸರು ಇಂದು (ಜುಲೈ 21) ಬಂಧಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೊಕ್ಕಟ್ಟು ಪಂಪ್​ವೆಲ್​ ನಡುವೆ ಸುಮಾರು ದೂರದ ತನಕ ಆ್ಯಂನ್ಸ್​ಗೆ ಅನುವು ಮಾಡಿ ಕೊಡದೇ ಕಾರು ಓಡಿಸಿದ್ದ ವಿಡಿಯೋ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಇಂದು ಆ ಕಾರು ಚಾಲಕನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಅಡ್ಡಾದಿಡ್ಡಿ ಕಾರು ಚಲಾಯಿಸಿದ ಆರೋಪಿ ಚಾಲಕನನ್ನು ಚರಣ್ (31 ವರ್ಷ) ಎಂದು ಗುರುತಿಸಲಾಗಿದ್ದು, ಆತ ಆ್ಯನಿಮೇಶನ್​ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸೋಮವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಓಡಿಸುತ್ತಿದ್ದ ಚರಣ್​, ಹಿಂದಿನಿಂದ ಸೈರನ್ ಹಾಕಿಕೊಂಡು ಬಂದ ಆ್ಯಂಬುಲೆನ್ಸ್​ಗೆ ಜಾಗ ಬಿಡದೇ ಸತಾಯಿಸಿದ್ದ. ಆ್ಯಂಬುಲೆನ್ಸ್​ನಲ್ಲಿದ್ದವರು ಕಾರು ಚಾಲಕನ ಪುಂಡಾಟವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದರು. ಬಳಿಕ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಸೋಮವಾರ ಸಂಜೆ 5.30ರ ಸುಮಾರಿಗೆ ಘಟನೆ ನಡೆದಿದೆ. ಕಣಚೂರು ಆಸ್ಪತ್ರೆಯಿಂದ ಮಂಗಳೂರಿಗೆ ತುರ್ತಾಗಿ ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್​ಗೆ ಚಾಲಕ ಅಡ್ಡಿಪಡಿಸಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಮೊಬೈಲ್​ನಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ ಎಂದು ಹೇಳಿದ್ದಾರೆ.

ಮಂಗಳೂರು ದಕ್ಷಿಣ ವಲಯದ ಟ್ರಾಫಿಕ್ ಪೊಲೀಸರು ಈ ಬಗ್ಗೆ ವಿಡಿಯೋ ಆಧಾರದ ಮೇಲೆ ಸ್ವಯಂಪ್ರೇರಿತರಾಗಿ ದೂರು ತೆಗೆದುಕೊಂಡು ಐಪಿಸಿ ಸೆಕ್ಷನ್ 279 (ಸಾರ್ವಜನಿಕ ಸ್ಥಳಗಳಲ್ಲಿ ಅಜಾಗರೂಕತೆಯಿಂದ ವೇಗವಾಗಿ ಚಲಿಸಿವುದು) ಹಾಗೂ 1988ರ ಮೊಟಾರು ವಾಹನ ಕಾಯ್ದೆಯ 194 (ಇ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್​ ಶಶಿಕುಮಾರ್ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ವಿಡಿಯೋದಲ್ಲಿ ಕಾಣಿಸಿದ ವಾಹನದ ನೋಂದಣಿ ಸಂಖ್ಯೆ ಆಧಾರದ ಮೇಲೆ ಆರೋಪಿ ಚರಣ್​ನನ್ನು ಪತ್ತೆ ಹಚ್ಚಿದ್ದೇವೆ. ಆತ ವೇಗವಾಗಿ ಅಷ್ಟೇ ಅಲ್ಲ, ಅಜಾಗರೂಕತೆಯಿಂದ ಅಪಾಯಕಾರಿ ರೀತಿಯಲ್ಲಿ ಚಲಿಸುತ್ತಿದ್ದ. ಆ್ಯಂಬುಲೆನ್ಸ್​ಗೂ ಅಡ್ಡಿಪಡಿಸಿದ್ದ. ಈ ಬಗ್ಗೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಆದರೆ, ಹಾಗೆ ವಾಹನ ಚಲಾಯಿಸಲು ಮದ್ಯಪಾನ ಅಥವಾ ಯಾವುದಾದರೂ ಮಾದಕ ದ್ರವ್ಯ ಕಾರಣವೇ ಎಂದು ತನಿಖೆ ಮಾಡುತ್ತಿದ್ದೇವೆ. ವಾಹನ ಸವಾರರು ಈ ವಿಚಾರದಲ್ಲಿ ಜಾಗರೂಕತೆಯಿಂದ ಹಾಗೂ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ವಿಸ್ಟಾಡೋಮ್ ಕೋಚ್ ಹೊಂದಿರುವ ರೈಲಿಗೆ ಚಾಲನೆ ನೀಡಿದ ದಕ್ಷಿಣ ಕನ್ನಡ ಸಂಸದ ನಳಿನ್​ ಕುಮಾರ್​

ಇದನ್ನೂ ಓದಿ: ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ, ₹100 ಕೋಟಿ ಖರ್ಚು ಮಾಡಿದ್ರೂ ಇಲ್ಲ ಉಪಯೋಗ