AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ತ ಪುತ್ರನೊಂದಿಗೆ ಸಿದ್ದರಾಮಯ್ಯ ರಹಸ್ಯ ಸಭೆ, ಇತ್ತ ಆಪ್ತರೊಂದಿಗೆ ಡಿಕೆಶಿ ಗುಪ್ತ್​ ಗುಪ್ತ್​ ಚರ್ಚೆ: ಅಸಲಿ ಆಟ ಈಗ ಶುರುವಾಯ್ತಾ?

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಬ್ರೇಕ್ ಫಾಸ್ಟ್​ ಮೀಟಿಂಗ್ ನಡೆದರೂ ಸಹ ಕಾಂಗ್ರೆಸ್ ಮನೆಯಲ್ಲಿ ಕುರ್ಚಿ ಕ್ರಾಂತಿಯ ಕಿಚ್ಚು ಮಾತ್ರ ಆರಿಲ್ಲ. ಎಲ್ಲವೂ ಕೂಲ್ ಆಯ್ತು ಎನ್ನುವಾಗಲೇ ಮತ್ತೆ ಸಿಎಂ ಪುತ್ರ ಯತೀಂದ್ರ ಪವರ್ ಶೇರಿಂಗ್ ವಿಚಾರವಾಗಿ ಮಾತನಾಡಿ ಕುರ್ಚಿ ಕಿಡಿಗೆ ತುಪ್ಪ ಸುರಿದಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್​​ನಲ್ಲಿ ಮತ್ತೆ ಮಹತ್ವದ ರಾಜಕೀಯ ವಿದ್ಯಮಾನಗಳು ನಡೆದಿವೆ.

ಅತ್ತ ಪುತ್ರನೊಂದಿಗೆ ಸಿದ್ದರಾಮಯ್ಯ ರಹಸ್ಯ ಸಭೆ, ಇತ್ತ ಆಪ್ತರೊಂದಿಗೆ ಡಿಕೆಶಿ ಗುಪ್ತ್​ ಗುಪ್ತ್​ ಚರ್ಚೆ: ಅಸಲಿ ಆಟ ಈಗ ಶುರುವಾಯ್ತಾ?
Dk Shivakumar And Siddaramaiah
ರಮೇಶ್ ಬಿ. ಜವಳಗೇರಾ
|

Updated on: Dec 11, 2025 | 4:43 PM

Share

ಬೆಳಗಾವಿ, (ಡಿಸೆಂಬರ್ 11): ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕುರ್ಚಿ ಸಂಘರ್ಷಕ್ಕೆ ತೆರೆಬೀಳುವ ಲಕ್ಷಣಗಳು ಕಾಣುತ್ತಿಲ್ಲ. ಸಿಎಂ ಕುರ್ಚಿಗಾಗಿ ಬಣ ಬಡಿದಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಹೈಕಮಾಂಡ್ ಕುಳಿತು ಬಗೆಹರಿಸಿಕೊಳ್ಳುವಂತೆ ಸಿದ್ದರಾಮಯ್ಯ (Siddaramaiah),  ಡಿಕೆ ಶಿವಕುಮಾರ್​​ಗೆ (DK Shivakumar) ಖಡಕ್ ಸೂಚನೆ ನೀಡಿತ್ತು. ಅದರಂತೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್​​ ಮಾಡುವ ಮೂಲಕ ಯಾವುದೇ ಗೊಂದಲ ಇಲ್ಲ. ನಾವಿಬ್ಬರೂ ಒಂದಾಗಿದ್ದೇವೆ ಎನ್ನುವ ಸಂದೇಶ ರವಾನಿಸಿದ್ದರು. ಆದ್ರೆ, ಸದ್ಯಕ್ಕೇನು ಸುಮ್ನೆ ಆಗಿರಬಹುದು. ಆದ್ರೆ,​ ಬೆಳಗಾವಿ ಅಧಿವೇಶನದ ಬಳಿಕ ಪಿಚ್ಚರ್ ಬಾಕಿ ಹೈ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಪುಷ್ಠಿ ನೀಡುವಂತೆ ಬೆಳಗಾವಿ ಅಧಿವೇಶನದ ವೇಳೆಯಲ್ಲೇ ಮತ್ತೆ ಸಿಎಂ ಕುರ್ಚಿ ಕಾಳಗ ಶುರುವಾಗಿದ್ದು, ಇದಕ್ಕೆ ಸ್ವತಃ ಸಿಎಂ ಸಿದ್ದರಾಮಯ್ಯನವರ ಪುತ್ರ, ಎಂಎಲ್​​ಸಿ ಯತೀಂರ್ರ ಸಿದ್ದರಾಮಯ್ಯ ಕಹಳೆ ಮೊಳಗಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಅಧಿವೇಶನದ ನಡುವೆಯೇ ಕಾಂಗ್ರೆಸ್​​ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದಿವೆ.

ಪುತ್ರನನ್ನು ಕರೆದೊಯ್ದು ಸಿಎಂ ರಹಸ್ಯ ಮಾತುಕತೆ

ಹೌದು…ಚಳಿಗಾಲ ಅಧಿವೇಶದ ನಡೆಯುತ್ತಿರುವಾಗಲೇ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕಾಂಗ್ರೆಸ್​​ ಮನೆಯಲ್ಲಿ ಕಿಡಿ ಹೊತ್ತಿಸಿದೆ. ಎಲ್ಲವೂ ಕೂಲ್ ಆಯ್ತು ಎನ್ನುವಾಗಲೇ ಮತ್ತೆ ಸಿಎಂ ಪುತ್ರ ಯತೀಂದ್ರ ಪವರ್ ಶೇರಿಂಗ್ ವಿಚಾರವಾಗಿ ಮಾತನಾಡಿದ್ದಾರೆ. ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತಾ ಹೈಕಮಾಂಡ್ ಕೂಡ ಸ್ಪಷ್ಟವಾಗಿ ಹೇಳಿದೆ ಎಂದು ಯತೀಂದ್ರ ಪುನರುಚ್ಛರಿಸಿದ್ದಾರೆ.ಸಿದ್ದರಾಮಯ್ಯನವರೇ ಪುತ್ರನ ಮೂಲಕ ಈ ರೀತಿ ಹೇಳಿಕೆ ಕೊಡಿಸುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಬಣ ಕೆಂಡಾಮಂಡಲವಾಗಿದೆ. ಇದು ತೀವ್ರ ಸ್ವರೂಪಕ್ಕೆ ಹೋಗುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಪುತ್ರನಿಗೆ ಕರೆದ ರಹಸ್ಯ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಕುರ್ಚಿ ಕಿಚ್ಚಿಗೆ ಮತ್ತೆ ತುಪ್ಪ ಸುರಿದ ಸಿಎಂ ಪುತ್ರ ಯತೀಂದ್ರ! ಡಿಕೆ ಶಿವಕುಮಾರ್ ಅಚ್ಚರಿಯ ಪ್ರತಿಕ್ರಿಯೆ

ವಿಧಾನಸಭೆ ಒಳಭಾಗದ ಸಭಾಂಗಣದಲ್ಲಿ ಪ್ರತ್ಯೇಕ ಮಾತುಕತೆ ನಡೆಸಿದ ಸಿದ್ದರಾಮಯ್ಯ ಹಾಗೂ ಯತೀಂದ್ರ, ಬಳಿಕ ಒಂದೇ ಕಾರಿನಲ್ಲಿ ಸರ್ಕ್ಯೂಟ್ ಹೌಸ್ ಗೆ ತೆರಳಿ ಮಹತ್ವದ ಮಾತುಕತೆ ಮಾಡಿದ್ದು, ಬಳಿಕ ಒಂದೇ ಕಾರಿನಲ್ಲಿ ಅಧಿವೇಶನಕ್ಕೆ ಆಗಮಿಸಿದರು. ಸಿಎಂ ಕುರ್ಚಿ ಬಗ್ಗೆ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿರುವ ಬಗ್ಗೆ ಸಿದ್ದರಾಮಯ್ಯ ಪುತ್ರನೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಸೂಕ್ಷ್ಮ ವಿಚಾರಗಳನ್ನು ಮಾಧ್ಯಮಗಳ ಮುಂದೆ ಮಾತನಾಡಬೇಡ ಎಂದು ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ.

ಇತ್ತ ಆಪ್ತರೊಂದಿಗೆ ಡಿಕೆಶಿ ಮೀಟಿಂಗ್

ಯತೀಂದ್ರ ಹೇಳಿಕೆ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಬಣದ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ಅತ್ತ ಸಿಎಂ ಪುತ್ರನೊಂದಿಗೆ ಗುಪ್ತ್​ ಗುಪ್ತ್ ಮಾತುಕತೆ ನಡೆಸಿದ್ದರೆ, ಇತ್ತ ಡಿಕೆ ಶಿವಕುಮಾರ್ ಸಹ ತಮ್ಮ ಬಣದ ನಾಯಕರ ಜೊತೆ ರಹಸ್ಯ ಸಭೆ ನಡೆಸಿದ್ದಾರೆ. ಹೌದು… ವಿಧಾನಸಭೆ ಕಲಾಪ ಮುಂದೂಡಿಕೆಯಾದರೂ ಸಹ ಡಿಕೆ ಶಿವಕುಮಾರ್ ಸದನದಲ್ಲೇ ತಮ್ಮ ಆಪ್ತ ಶಾಸಕರ ಜೊತೆ ಸಮಾಲೋಚನೆ ಮಾಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ , ಶಾಸಕರಾದ ರವಿ ಗಣಿಗ, ಶಿವಣ್ಣ, ಶ್ರೀನಿವಾಸ್, ಎನ್.ಎ‌.ಹ್ಯಾರಿಸ್, ರೂಪಾ ಶಶಿಧರ್ ಜೊತೆಗೆ ಡಿಕೆ ಶಿವಕುಮಾರ್ ಮಹತ್ವದ​ ಚರ್ಚೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಪಿಚ್ಚರ್ ಅಭಿ ಬಾಕಿ ಹೈ ಕ್ಯಾ?

ಸರ್ಕಾರಕ್ಕೆ ಎರಡುವರೆ ವರ್ಷ ತುಂಬಿದ ಬೆನ್ನಲ್ಲೇ ಸಿಎಂ ಕುರ್ಚಿಗಾಗಿ ಡಿಕೆ ಶಿವಕುಮಾರ್ ಹಾಗೂ ಅವರ ಬಣದ ನಾಯಕರು ಎದ್ದು ನಿಂತಿದ್ದು, ಸಿಎಂ ಸ್ಥಾನ ಬೇಕೇ ಬೇಕು ಎಂದು ಡಿಕೆಶಿ ಪಟ್ಟು ಹಿಡಿದಿದ್ದರು. ಮತ್ತೊಂದೆಡೆ ಸಿಎಂ ಬಣ ಸಹ ಅಲರ್ಟ್​ ಆಗಿದ್ದು, ರಹಸ್ಯ ಸಭೆಗಳ ಮೇಲೆ ಸಭೆ ನಡೆಸಿತ್ತು. ಈ ನಡುವೆ ಒಕ್ಕಲಿಗ, ಕುರುಬ ಸಮುದಾಯಗಳು ಸಹ ಪ್ರವೇಶ ಮಾಡಿದ್ದು, ತಮ್ಮ ತಮ್ಮ ನಾಯಕರ ಪರ ಬ್ಯಾಟಿಂಗ್ ಮಾಡಿದ್ದವು. ಅಲ್ಲದೇ ಪ್ರಮುಖವಾಗಿ ಸಿದ್ದರಾಮಯ್ಯನವರ ಶಕ್ತಿಯಾಗಿರುವ ಅಹಿಂದ ಸಂಘಟನೆ ಸಹ ಆ್ಯಕ್ಟೀಟ್ ಆಗಿದ್ದು, ಒಂದು ವೇಳೆ ಸಿಎಂ ಬದಲಾವಣೆ ಮಾಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎನ್ನುವ ಸಂದೇಶ ರವಾನಿಸಿತ್ತು. ಹೀಗೆ ಕಾಂಗ್ರೆಸ್​​ನಲ್ಲಿನ ಬೆಳವಣಿಗೆಗಳು ಬೇರೆ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಹೈಕಮಾಂಡ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್​​​ಗೆ ಕರೆ ಮಾಡಿ ಇಬ್ಬರು ಕುಳಿತುಕೊಂಡು ಗೊಂದಲ ಬಗೆಹರಿಸಿಕೊಳ್ಳಿ ಎಂದು ಖಡಕ್ ಸೂಚನೆ ನೀಡಿತ್ತು. ಹೀಗಾಗಿ ಇಬ್ಬರು ಪರಸ್ಪರ ಬ್ರೇಕ್ ಫಾಸ್ಟ್​​ ಮೀಟಿಂಗ್ ಮಾಡುವುದರೊಂದಿಗೆ ಒಟ್ಟಾಗಿದ್ದೇವೆ ಎನ್ನುವ ಸಂದೇಶ ರವಾನಿಸಿದರು. ಆದ್ರೆ, ಮೇಲ್ನೋಟಕ್ಕೆ ಕುರ್ಚಿ ಕದನ ಇಲ್ಲಿಗೆ ಶಾಂತವಾಯ್ತು ಎನ್ನಲಾಗಿತ್ತು. ಅಸಲಿ ಆಟ ಬೆಳಗಾವಿ ಅಧಿವೇಶನದ ಮುಗಿದ ಬಳಕ ಶುರುವಾಗಲಿದೆ ಎನ್ನುವ ಮಾತುಗಳು ರಾಜ್ಯ ರಾಜಕಾರಣದಲ್ಲಿ ಕೇಳಿಬಂದಿದ್ದವು. ಅದರಂತೆ ಇನ್ನೂ ಅಧಿವೇಶನ ಮುಗಿದಿಲ್ಲ ಆಗಲೇ ರಾಜಕೀಯ ಬೆಳವಣಿಗೆಗಳು ಗರಿಗೆದರಿದ್ದು, ಅಸಲಿ ಆಟ ಈಗ ಶುರುವಾಗಿದ್ಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಸದ್ಯ ಕಾಂಗ್ರೆಸ್​​ನ್ಲಲಿ ರಾಜಕೀಯ ವಿದ್ಯಮಾನಗಳು ರಾಜ್ಯ ರಾಜಕಾರಣದಲ್ಲಿ ಸಂಚಲನ ಮುಡಿಸಿದ್ದು, ಮುಂದೆ ಇದು ಯಾವ ಹಂತಕ್ಕೆ ಹೋಗಲಿದೆ ಎನ್ನುವುದು ಕಾದುನೋಡಬೇಕಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ