AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಶಕ್ತಿ‌ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ ಹಾಸನ: ಸಿದ್ದು ಸಮಾವೇಶಕ್ಕೆ ಕಾಂಗ್ರೆಸ್​ನಲ್ಲೇ ಅಪಸ್ವರ, ವರಿಷ್ಠರಿಗೆ ಪತ್ರ

ಉಪಚುನಾವಣೆ ಫಲಿತಾಂಶದ ಬಳಿಕ ಎಲ್ಲವೂ ಸರಿಯಾಗಿದೆ ಅಂದುಕೊಂಡಿದ್ದ ಕಾಂಗ್ರೆಸ್ ಪಾಳಯದಲ್ಲಿ ಭಿನ್ನರಾಗ ಕೇಳಿಬಂದಿದೆ. ಹಾಸನದಲ್ಲಿ ನಡೆಯಲಿರುವ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳ ಸಮಾವೇಶ ತಂಡವೊಂದು ಪಕ್ಷದ ವರಿಷ್ಠರಿಗೆ ಪತ್ರ ಬರೆದಿದೆ ಎನ್ನಲಾಗಿದೆ. ಪತ್ರದಲ್ಲೇನಿತ್ತು ಎಂಬುದೂ ಸೇರಿದಂತೆ ವಿವರ ಇಲ್ಲಿದೆ.

ಸಿದ್ದರಾಮಯ್ಯ ಶಕ್ತಿ‌ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ ಹಾಸನ: ಸಿದ್ದು ಸಮಾವೇಶಕ್ಕೆ ಕಾಂಗ್ರೆಸ್​ನಲ್ಲೇ ಅಪಸ್ವರ, ವರಿಷ್ಠರಿಗೆ ಪತ್ರ
ಸಿದ್ದರಾಮಯ್ಯ ಅಭಿಮಾನಿ ಸಮಾವೇಶಕ್ಕೆ ಭರದಿಂದ ಸಿದ್ಧತೆ
ಪ್ರಸನ್ನ ಗಾಂವ್ಕರ್​
| Updated By: Ganapathi Sharma|

Updated on: Nov 29, 2024 | 12:49 PM

Share

ಬೆಂಗಳೂರು, ನವೆಂಬರ್ 29: ಉಪಚುನಾವಣೆ ಫಲಿತಾಂಶದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ಹಾಸನದಲ್ಲಿ ಭರ್ಜರಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಸಿದ್ದು ಅಭಿಮಾನಿಗಳ ಸಮಾವೇಶಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಜೆಡಿಎಸ್ ಭದ್ರಕೋಟೆಯಲ್ಲಿ ಒಂದು ಲಕ್ಷ ಜನರ ಸಮ್ಮುಖದಲ್ಲಿ ಅಬ್ಬರಿಸಲು ಸಿಎಂ ಸಿದ್ದರಾಮಯ್ಯ ಸನ್ನದ್ಧರಾಗಿದ್ದಾರೆ. ಆದರೆ, ಇದೇ ಹೊತ್ತಿನಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಭಿನ್ನರಾಗ ಸ್ಫೋಟಗೊಂಡಿದೆ. ಸಿದ್ದರಾಮಯ್ಯ ಎದುರಾಳಿ ತಂಡವೊಂದು ಸದ್ದಿಲ್ಲದೇ ಹೈಕಮಾಂಡ್​ಗೆ ಪತ್ರ ಬರೆದಿದೆ. ಹೆಸರು ಉಲ್ಲೇಖಿಸದೇ ಪತ್ರ ಬರೆಯಲಾಗಿದ್ದು, ಸಮಾವೇಶಕ್ಕೆ ಅಡ್ಡಗಾಲು ಹಾಕಿದೆ.

ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರು, ಶಾಸಕರು ಅಭಿಮಾನಿಗಳು ಸೇರಿ ಸ್ವಾಭಿಮಾನಿ ಸಮಾವೇಶ ಆಯೋಜಿಸುತ್ತಿದ್ದಾರೆ. ಡಿಸೆಂಬರ್ 5ನೇ ತಾರೀಕು ಸಿಎಂ ಸಿದ್ದರಾಮಯ್ಯ ಶಕ್ತಿ ಪ್ರದರ್ಶನವಾಗಲಿದೆ. ಅರಸೀಕೆರೆ ರಸ್ತೆಯ ಕೆಎಸ್​​ಸಿಎಗೆ ಮೀಸಲಾದ ವಿಶಾಲ ‌ಮೈದಾನದಲ್ಲಿ‌ ಸಮಾವೇಶ ನಡೆಯಲಿದೆ. ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು ಸೇರಿ ಆರು ಜಿಲ್ಲೆಯಿಂದ ಲಕ್ಷ ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಸಮಾವೇಶಕ್ಕಾಗಿ ಬೃಹತ್ ವೇದಿಕೆ ಹಾಗೂ ಸಭಾಂಗಣ ನಿರ್ಮಾಣವಾಗುತ್ತಿದ್ದು, ಹಾಸನ‌ ಎಸ್ಪಿ ಮೊಹಮದ್ ಸುಜಿತ್ ಹಾಗೂ ದಕ್ಷಿಣ ವಲಯ ಐಜಿಪಿ ಡಾ ಬೋರಲಿಂಗಯ್ಯ ಖುದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಕಾಂಗ್ರೆಸ್​ನಲ್ಲೇ ಅಪಸ್ವರ

ಏತನ್ಮಧ್ಯೆ, ಸಿದ್ದರಾಮಯ್ಯ ಸಮಾವೇಶಕ್ಕೆ ಕಾಂಗ್ರೆಸ್​​ನಲ್ಲೇ ಅಪಸ್ವರ ಕೇಳಿಬಂದಿದೆ. ವರಿಷ್ಠರಿಗೆ ಪತ್ರವನ್ನು ಬರೆಯಲಾಗಿದ್ದು, ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಕಾಂಗ್ರೆಸ್ ಹೈಕಮಾಂಡ್​ಗೆ ಬರೆಯಲಾದ ಪತ್ರದಲ್ಲೇನಿದೆ?

‘‘ಸಿಎಂ ಸಿದ್ದರಾಮಯ್ಯ ಪರ ಸ್ವಾಭಿಮಾನಿ ಸಮಾವೇಶ ಮಾಡಲಾಗುತ್ತಿದೆ. ಪಕ್ಷದ ವೇದಿಕೆಯಿಂದ ಹೊರತಾದ ಕಾರ್ಯಕ್ರಮ ಎಂದು ಬಣ್ಣನೆ ಮಾಡಲಾಗುತ್ತಿದೆ. ಆಯೋಜಕರೆಲ್ಲ ಸಚಿವರು, ಶಾಸಕರು, ಮುಖಂಡರೇ ಆಗಿದ್ದಾರೆ. ಹೀಗಿದ್ದರೂ ಯಾಕೆ ಪಕ್ಷದ ಚಿಹ್ನೆ ಮೇಲೆ ಸಮಾವೇಶ ಮಾಡುತ್ತಿಲ್ಲ? ವೈಯಕ್ತಿಕ ಬಲ ಪ್ರದರ್ಶನಕ್ಕೆ ಹೀಗೆ ಪಕ್ಷದ ನಾಯಕರ ಬಳಕೆ ಮಾಡಲಾಗುತ್ತಿದೆ. ಪಕ್ಷವನ್ನ ದೂರವಿಟ್ಟು ಸಮಾವೇಶ ಮಾಡುವ ಉದ್ದೇಶ ಏನು? ಸ್ವಾಭಿಮಾನ ಸಮಾವೇಶವನ್ನು ಪಕ್ಷದ ವೇದಿಕೆಯಲ್ಲಿಯೇ ಮಾಡಬೇಕು. ಪಕ್ಷದ ವೇದಿಕೆ ಬಿಟ್ಟು ಸಮಾವೇಶ ಮಾಡುವ ಉದ್ದೇಶ ಒಳ್ಳೆಯದಲ್ಲ. ಪಕ್ಷದ ಚಿಹ್ನೆ ಬಳಸಿಕೊಂಡೇ ಸಮಾವೇಶ ಆಯೋಜನೆ ಮಾಡಿ. ಸಿಎಂ ಹಾಗೂ ಉಳಿದ ಸಚಿವರಿಗೆ ತಿಳಿ ಹೇಳಬೇಕು’’ ಎಂದು ಎಐಸಿಸಿ ನಾಯಕರಿಗೆ ರವಾನೆಯಾಗಿರುವ ದೂರಿನ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಪಕ್ಷವನ್ನು ದೂರವಿಟ್ಟು ಸಿದ್ದರಾಮಯ್ಯ ಕಾರ್ಯಕ್ರಮ ಮಾಡಿದ್ದರು. ಪಕ್ಷದ ಚಿಹ್ನೆ ಜತೆ ಕಾರ್ಯಕ್ರಮ ಮಾಡಿದ್ರೆ ಪಕ್ಷಕ್ಕೆ ಮತ್ತಷ್ಟು ಬಲ ಬರುತ್ತಿತ್ತು. ಡಿ.5 ರಂದು ಹಾಸನದಲ್ಲಿ ಸ್ವಾಭಿಮಾನಿಗಳ ಹೆಸರಲ್ಲಿ ಕಾರ್ಯಕ್ರಮ ಮಾಡಲಾಗ್ತಿದೆ. ತಮಗೆ ಅಧಿಕಾರ ಕೊಟ್ಟ ಪಕ್ಷವನ್ನ ದೂರವಿಟ್ಟು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಕಾಂಗ್ರೆಸ್ ಚಿಹ್ನೆಯಲ್ಲಿ ಆಯ್ಕೆಯಾಗಿರುವ ರಾಜ್ಯ ಸರ್ಕಾರದ ಕೆಲ ಮಂತ್ರಿಗಳು, ಶಾಸಕರುಗಳು ಸ್ವಾಭಿಮಾನಿ ಸಮಾವೇಶದ ಉಸ್ತುವಾರಿ ತೆಗೆದುಕೊಂಡಿದ್ದಾರೆ. ನಾಯಕರು ವೈಯಕ್ತಿಕ ಲಾಭಕ್ಕೆ ಪಕ್ಷವನ್ನು ದುರುಪಯೋಗಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯ ಏನಾಗಬಹುದು? ಕಾರ್ಯಕ್ರಮದ ಎಲ್ಲಾ ರೂಪರೇಷೆಯನ್ನು ನಾಯಕರು ಪಕ್ಷದ ಕಚೇರಿಯಲ್ಲಿ ಮಾಡುತ್ತಾರೆ. ಆದರೆ, ಈ ಕಾರ್ಯಕ್ರಮಕ್ಕೆ ಮಾತ್ರ ಕಾಂಗ್ರೆಸ್ ಪಕ್ಷದ ಚಿಹ್ನೆ ಬಳಸುತ್ತಿಲ್ಲ. ಕಾಂಗ್ರೆಸ್ ಚಿಹ್ನೆ ಮಾತ್ರ ಯಾಕೆ ಬೇಡ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ. ಈ ಬಗ್ಗೆ ಸೂಕ್ಷ್ಮವಾಗಿ ಮತ್ತು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು. ಸ್ವಾರ್ಥವಿಲ್ಲದೇ ದುಡಿಯುವ ಕಾರ್ಯಕರ್ತರಿಗೆ ಧೈರ್ಯ ತುಂಬಬೇಕು ಎಂದೂ ಆಗ್ರಹಿಸಲಾಗಿದೆ.

ಇದನ್ನೂ ಓದಿ: ದೇಶಕ್ಕೆ ಮಾರಕವಾಗುವ ತೀರ್ಪುಗಳು ಬರುತ್ತಿವೆ: ನ್ಯಾಯಾಲಯಗಳ ಬಗ್ಗೆ ಯತೀಂದ್ರ ವಿವಾದಾತ್ಮಕ ಹೇಳಿಕೆ

ಡಿಸಿಎಂ ಡಿಕೆ ಶಿವಕುಮಾರ್ ಏನಂದರು?

ಇನ್ನು ಹಾಸನ ಸಮಾವೇಶ ಸಂಬಂಧ ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಸಿಎಂ ಕಾರ್ಯಕ್ರಮದ ಬಗ್ಗೆ ನನಗೆ ಮಾಹಿತಿ ಇದೆ. ಹಾಸನ ಕಾರ್ಯಕ್ರಮದ ಬಗ್ಗೆ ಸಿಎಂ ನನಗೆ ಹೇಳಿದ್ದಾರೆ. ಆದರೆ, ಯಾವ ಪತ್ರದ ಬಗ್ಗೆಯೂ ನನಗೆ ಮಾಹಿತಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ