ತಮಿಳು ಭಾಷೆಯಿಂದ ಕನ್ನಡದ (Kannada Language Origin ) ಉಗಮವಾಗಿದೆ ಎಂಬ ನಟ ಕಮಲ ಹಾಸನ್ (Kamal Haasan) ಹೇಳಿಕೆ ಈಗ ಭಾರಿ ಸದ್ದು ಮಾಡುತ್ತಿದೆ. ಈ ಹೇಳಿಕೆಗೆ ಕರ್ನಾಟಕದಲ್ಲಿ (Karnataka) ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳೂ ನಡೆಯುತ್ತಿವೆ. ಹಾಗಾದರೆ, ಕನ್ನಡ ಭಾಷೆಯ ಉಗಮ ತಮಿಳಿನಿಂದ ಆಗಿದೆ ಎಂಬ ವಾದ ನಿಜವೇ? ಇತಿಹಾಸದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, ಪಂಚ ದ್ರಾವಿಡ ಭಾಷೆಗಳಲ್ಲಿ ಕನ್ನಡವೂ ಒಂದು. ತಮಿಳೂ ಕೂಡ ಒಂದು. ಪ್ರಚಲಿತದಲ್ಲಿ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಅನ್ನು ಪ್ರಮುಖ ನಾಲ್ಕು ದ್ರಾವಿಡ ಭಾಷೆಗಳು ಎಂದು ಪರಿಗಣಿಸಲಾಗಿದೆ. ದಕ್ಷಿಣ ಕನ್ನಡ, ಕರಾವಳಿ ಭಾಗದಲ್ಲಿ ಹೆಚ್ಚಾಗಿ ಮಾತನಾಡುವ ತುಳು ಸಹ ದ್ರಾವಿಡ ಭಾಷೆ ಎಂದೇ ಹೇಳಲಾಗಿದೆ. ಆದರೆ, ಅದರ ಲಿಪಿಯ ಬಗ್ಗೆ ಇತ್ತೀಚೆಗಷ್ಟೇ ಅಧ್ಯಯನ ನಡೆಯುತ್ತಿದೆ.
ದ್ರಾವಿಡ ಭಾಷೆ ಎಂದು ಪರಿಗಣಿಸಲಾಗಿರುವ ಕನ್ನಡ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಇದು ಕ್ರಿಸ್ತಪೂರ್ವ 3 ನೇ ಶತಮಾನದ ಸುಮಾರಿಗೆ ಹುಟ್ಟಿಕೊಂಡಿದೆ ಎಂದು ಭಾವಿಸಲಾಗಿದೆ. ಆದರೆ, ಕನ್ನಡದ ಮೊದಲ ಲಿಖಿತ ದಾಖಲೆಯಾಗಿ ಸಿಕ್ಕಿರುವುದು ‘ಹಲ್ಮಿಡಿ ಶಾಸನ’. ಇದು ಕ್ರಿಸ್ತ ಶಕ 450 ರಷ್ಟು ಹಳೆಯದು. ಇದರ ಕರ್ತೃ ಕಾಕುಸ್ಥವರ್ಮ ಎಂದು ಹೇಳಲಾಗಿದೆ. ಆ ನಂತರದ ಕಾಲಘಟ್ಟಗಳಲ್ಲಿ ಕನ್ನಡಕ್ಕೆ ಸಂಬಂಧಿಸಿದ ಹಲವು ಶಾಸನಗಳು ಲಭ್ಯವಾಗಿವೆ. ಹೀಗಾಗಿ ಅಧಿಕೃತವಾಗಿ ಮತ್ತು ಲಿಖಿತ ದಾಖಲೆಗಳ ಆಧಾರದ ಪ್ರಕಾರ ಹೇಳುವುದಾರೆ, ಕನ್ನಡ ಇತಿಹಾಸ ಕ್ರಿ.ಶ. 450 ರ ಆಸುಪಾಸಿನಿಂದ ಆರಂಭವಾಗಿದೆ.
ಕನ್ನಡ ಲಿಪಿ ತೆಲುಗು ಲಿಪಿ ಬಹಳ ನಿಕಟವಾದ ಹೋಲಿಕೆ ಹೊಂದಿದೆ. ಕನ್ನಡದ ಲಿಪಿಯ ಉಗಮವು ‘ಹಲ್ಮಿಡಿ ಶಾಸನ’ ದೊರೆತದ ಕ್ರಿ.ಶ. 450 ಕ್ಕಿಂತ ಮೊದಲು ಉಗಮವಾಗಿರಬಹುದು ಎಂದು ಅಂದಾಜಿಸಲಾಗಿದೆ. ಕನ್ನಡ ಭಾಷೆಯನ್ನು ಮೂರು ಹಂತಗಳಾಗಿ ಗುರುತಿಸಲಾಗಿದೆ: ಹಳೆ ಕನ್ನಡ ಅಥವಾ ಹಳೆಗನ್ನಡ (ಕ್ರಿ.ಶ. 450–1200), ಮಧ್ಯ ಕನ್ನಡ (ಕ್ರಿ.ಶ. 1200–1700) ಮತ್ತು ಆಧುನಿಕ ಕನ್ನಡ (ಕ್ರಿ.ಶ. 1700 –ಪ್ರಸ್ತುತ). ಸದ್ಯ ಆಧುನಿಕ ಕನ್ನಡ ಲಿಪಿ ಅಸ್ತಿತ್ವದಲ್ಲಿದೆ.
ಕನ್ನಡ ಸಾಹಿತ್ಯವು ನೃಪತುಂಗನ ‘ಕವಿರಾಜಮಾರ್ಗ’ದಿಂದ (9th century ce) ಆರಂಭವಾಗಿದೆ ಎಂದು ಭಾವಿಸಲಾಗಿದೆ. ನಂತರ ಕನ್ನಡದ ಆದಿಕವಿ ಎಂದು ಪರಿಗಣಿಸಲ್ಪಟ್ಟಿರುವ ಪಂಪನ ವಿಕ್ರಮಾರ್ಜುನವಿಜಯ (ಪಂಪ ಭಾರತ ಎಂದೇ ಪ್ರಸಿದ್ಧ) ಪ್ರಸಿದ್ಧವಾದುದು.
ಕನ್ನಡ ಹಾಗೂ ತಮಿಳು ಎರಡೂ ದ್ರಾವಿಡ ಭಾಷೆಗಳಾಗಿದ್ದರೂ ಕನ್ನಡವು ತಮಿಳಿನಿಂದ ಉಗಮವಾಗಿದೆ ಎಂಬುದಕ್ಕೆ ದಾಖಲೆಗಳಿಲ್ಲ. ಕನ್ನಡ ಭಾಷೆ ಸ್ವತಂತ್ರವಾಗಿ ವಿಕಸನಗೊಂಡಿದೆ ಎಂದೇ ಭಾವಿಸಲಾಗಿದೆ.
2011ರ ಜನಗಣತಿ ಪ್ರಕಾರ, ಕನ್ನಡ ಮಾತನಾಡುವವರ ಸಂಖ್ಯೆ ಸುಮಾರು 5 ಕೋಟಿ. ಸುಮಾರು 1 ಕೋಟಿಯಷ್ಟು ಮಂದಿ ದ್ವಿತೀಯ ಭಾಷೆಯಾಗಿ ಕನ್ನಡ ಮಾತನಾಡುವವರು ಎಂದು ಆಗ ಹೇಳಲಾಗಿತ್ತು. ಈ ಗಣತಿ ನಡೆದು ಇದೀಗ ಸುಮಾರು 14 ವರ್ಷಗಳೇ ಕಳೆದಿರುವುದರಿಂದ ಈ ಅಂಕೆ-ಸಂಖ್ಯೆಗಳು ಈಗ ಬದಲಾಗಿರಬಹುದು.
ಇದನ್ನೂ ಓದಿ: ನಟ ಕಮಲ್ ಹಾಸನ್ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿದ್ದರಾಮಯ್ಯ
ಕರ್ನಾಟಕ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿ, ವಿದೇಶಗಳಲ್ಲಿಯೂ ಕನ್ನಡ ಮಾತನಾಡುವವರು, ಕನ್ನಡ ಮಾತೃಭಾಷೆಯಾಗಿ ಬಳಸುವವರು ಅನೇಕರಿದ್ದಾರೆ. ಇತಿಹಾಸದ ದೃಷ್ಟಿಯಲ್ಲಿ ನೋಡುವುದಾದರೆ ಕನ್ನಡ ಭಾಷೆಯ ಮೇಲೆ ಸಂಸ್ಕೃತ, ಪ್ರಾಕೃತ ಮತ್ತು ಪಾಲಿ ಭಾಷೆಗಳ ಪ್ರಭಾವ ಇದೆ. ಅದೇ ರೀತಿ ಇತರ ದ್ರಾವಿಡ ಭಾಷೆಗಳಾದ ತಮಿಳು, ಮಲಯಾಳಂ, ತೆಲುಗು ಪ್ರಭಾವವೂ ಇದೆ. ಇತ್ತೀಚಿನ ದಶಕಗಳಲ್ಲಿ ಇಂಗ್ಲಿಷ್, ಹಿಂದಿ, ಉರ್ದು ಪ್ರಭಾವಗಳನ್ನೂ ಗಮನಿಸಬಹುದು. ಆಯಾ ಪ್ರದೇಶಗಳಿಗೆ ಅನುಗುಣವಾಗಿ ಭಾಷೆಯ ಬಳಕೆಯಲ್ಲಿ ವ್ಯತ್ಯಾಸ ಸಹಜವಷ್ಟೇ.
ಮಾಹಿತಿ: ವಿವಿಧ ಮೂಲಗಳಿಂದ
Published On - 7:37 am, Thu, 29 May 25