AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವೇರಿ ವಿವಾದ: ಕರ್ನಾಟಕ ಬಂದ್​ಗೆ 100ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ, ಹಲವೆಡೆ ರಸ್ತೆ ತಡೆ ಸಾಧ್ಯತೆ

Karnataka bandh over Cauvery row: ಮುಷ್ಕರ ನಡೆಸದಂತೆ ಸರ್ಕಾರ ಮನವಿ ಮಾಡಿದ್ದರೂ ಬಂದ್‌ ಮಾಡುವುದಾಗಿ ಸಂಘಟನೆಗಳು ಖಚಿತಪಡಿಸಿವೆ. ವರದಿಗಳ ಪ್ರಕಾರ, ಕರ್ನಾಟಕ ಬಂದ್‌ಗೆ 100 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಕನ್ನಡ ಪರ ಸಂಘಟನೆಗಳು ಶುಕ್ರವಾರ ಬಹು ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಲು ಯೋಜಿಸಿವೆ.

ಕಾವೇರಿ ವಿವಾದ: ಕರ್ನಾಟಕ ಬಂದ್​ಗೆ 100ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ, ಹಲವೆಡೆ ರಸ್ತೆ ತಡೆ ಸಾಧ್ಯತೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 27, 2023 | 4:37 PM

Share

ಬೆಂಗಳೂರು, ಸೆಪ್ಟೆಂಬರ್ 26: ತಮಿಳುನಾಡಿಗೆ ಕಾವೇರಿ ನೀರು (Cauvery Dispute) ಬಿಡುವುದನ್ನು ವಿರೋಧಿಸಿ ರೈತ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳು ಸೆಪ್ಟೆಂಬರ್ 29 ಶುಕ್ರವಾರ ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿವೆ. ಕನ್ನಡಪರ ಸಂಘಟನೆಗಳು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದಲ್ಲಿ ಬಂದ್‌ಗೆ ಮುಂದಾಗಿವೆ. ಮುಷ್ಕರ ನಡೆಸದಂತೆ ಸರ್ಕಾರ ಮನವಿ ಮಾಡಿದ್ದರೂ ಬಂದ್‌ ಮಾಡುವುದಾಗಿ ಸಂಘಟನೆಗಳು ಖಚಿತಪಡಿಸಿವೆ. ವರದಿಗಳ ಪ್ರಕಾರ, ಕರ್ನಾಟಕ ಬಂದ್‌ಗೆ 100 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಬಂದ್‌ನಿಂದ ರಾಜ್ಯ ಸರ್ಕಾರಕ್ಕೆ ನಷ್ಟವಾಗಲಿದ್ದು, ಬಂದ್‌ಗೆ ಮುಂದಾಗದಂತೆ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಆದಾಗ್ಯೂ ಕೆಲವು ಸಂಘಟನೆಗಳು ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಬಂದ್‌ ಮಾಡದಂತೆ ವಿನಂತಿಸುತ್ತೇನೆ. ಏಕೆಂದರೆ ವ್ಯಾಪಾರವು ಸ್ಥಗಿತಗೊಳ್ಳುವುದರಿಂದ ನಷ್ಟಕ್ಕೆ ಕಾರಣವಾಗುತ್ತದೆ. ಬೆಂಗಳೂರು, ಮಂಡ್ಯ ಮತ್ತು ಮೈಸೂರಿಗೆ ಕುಡಿಯುವ ನೀರು ಪೂರೈಕೆಗೆ ಸಾಕಷ್ಟು ನೀರು ಸಂಗ್ರಹವಾಗುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಕರ್ನಾಟಕದ ರೈತರನ್ನು ಉಳಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಕರ್ನಾಟಕ ಬಂದ್‌: ಕಾನೂನು ಸುವ್ಯವಸ್ಥೆ ಕಾಪಾಡಲು ಸಿದ್ಧತೆ ಆರಂಭಿಸಿದ ಪೊಲೀಸರು

ಪ್ರತಿಭಟನೆಗಳು ಶಾಂತಿಯುತವಾಗಿರುವಂತೆ ನೋಡಿಕೊಳ್ಳಲು ಪೊಲೀಸರು ಸನ್ನದ್ಧರಾಗಿದ್ದಾರೆ ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ. ಮಂಗಳವಾರದ ಬೆಂಗಳೂರು ಬಂದ್ ವೇಳೆ ಪೊಲೀಸರು ದಕ್ಷತೆಯಿಂದ ಕೆಲಸ ಮಾಡಿದರು. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಶುಕ್ರವಾರ ಬಂದ್ ಇರುತ್ತೋ ಇಲ್ಲವೋ ಗೊತ್ತಿಲ್ಲ. ಡಿಜಿ-ಐಜಿಪಿ ಅವರು ಎಲ್ಲಾ ಜಿಲ್ಲೆಗಳ ಹಿರಿಯ ಪೊಲೀಸರೊಂದಿಗೆ ಮಾತನಾಡಿದ್ದಾರೆ ಮತ್ತು ಶಾಂತಿಯುತ ಪ್ರತಿಭಟನೆಗಳನ್ನು ಖಚಿತಪಡಿಸಿಕೊಳ್ಳಲು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಜಿ ಪರಮೇಶ್ವರ ಮಾಧ್ಯಮಗಳಿಗೆ ತಿಳಿಸಿದರು.

ಶುಕ್ರವಾರ ರಸ್ತೆ ತಡೆ ನಡೆಸಲಿದ್ದಾರೆ ಪ್ರತಿಭಟನಾಕಾರರು

ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಕನ್ನಡ ಪರ ಸಂಘಟನೆಗಳು ಶುಕ್ರವಾರ ಬಹು ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಲು ಯೋಜಿಸಿವೆ. ಕರ್ನಾಟಕ ಬಂದ್‌ನ ಸಂದರ್ಭದಲ್ಲಿ ಶುಕ್ರವಾರದಂದು ಬೆಂಗಳೂರು-ಹೊಸೂರು ಮುಖ್ಯರಸ್ತೆ, ಬೆಂಗಳೂರು-ಹೈದರಾಬಾದ್ ಹೆದ್ದಾರಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರು-ತುಮಕೂರು ಹೆದ್ದಾರಿ, ಬೆಂಗಳೂರು-ಕನಕಪುರ ರಸ್ತೆ ಮತ್ತು ಮಂಡ್ಯ, ರಾಮನಗರ, ಮೈಸೂರಿನ ಪ್ರಮುಖ ರಸ್ತೆಗಳ ತಡೆಗೆ ಸಂಘಟನೆಗಳು ಯೋಜನೆ ರೂಪಿಸಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕಾವೇರಿ ನದಿ ವಿವಾದದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ; ಹೆಚ್​ಡಿ ಕುಮಾರಸ್ವಾಮಿ

ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರವರೆಗೆ ತಮಿಳುನಾಡಿಗೆ ಪ್ರತಿ ದಿನ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಮಂಗಳವಾರ ಆದೇಶ ನೀಡಿತ್ತು. ಸಿಡಬ್ಲ್ಯುಆರ್‌ಸಿ ಆದೇಶವನ್ನು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ