ಬೆಂಗಳೂರು, ಜನವರಿ 25: ಗಣರಾಜ್ಯೋತ್ಸವದ ಮುನ್ನಾ ದಿನ (ಶನಿವಾರ) ಕೇಂದ್ರ ಸರ್ಕಾರ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು (Padma Awards) ಘೋಷಿಣೆ ಮಾಡಿದೆ. ಇದರಲ್ಲಿ ಕರ್ನಾಟಕದ ವಿವಿಧ ಕ್ಷೇತ್ರಗಳ ಒಟ್ಟು 9 ಸಾಧಕರು ಪ್ರಶಸ್ತಿ ಗರಿ ಮುಡಿಗೇರಿಸಿಕೊಂಡಿದ್ದಾರೆ. ಒಬ್ಬರಿಗೆ ಪದ್ಮ ವಿಭೂಷಣ, ಇಬ್ಬರು ಪದ್ಮ ಭೂಷಣ ಪಡೆದುಕೊಂಡಿದ್ದರೆ, ಆರು ಸಾಧಕರು ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ ಸಾಧನೆಗಾಗಿ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂಗೆ ಪದ್ಮವಿಭೂಷಣ, ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆಗಾಗಿ ಅರಕಲಗೂಡು ಸೂರ್ಯಪ್ರಕಾಶ್ ಮತ್ತು ಕಲಾ ವಿಭಾಗದಲ್ಲಿ ಸಾಧನೆಗಾಗಿ ಅನಂತನಾಗ್‌ಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.
ತೊಗಲುಗೊಂಬೆಯಾಟದ ಹಿರಿಯ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತ, ಜಾನಪದ ಗಾಯಕ ವೆಂಕಪ್ಪ ಅಂಬಾಜಿ ಸುಗಟೇಕರ್, ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆ ವೈದ್ಯೆ ಡಾ.ವಿಜಯಲಕ್ಷ್ಮೀ ದೇಶಮಾನೆ, ಚಲನಚಿತ್ರ ನಿರ್ಮಾಪಕ ಹಾಸನ ರಘು, ಉದ್ಯಮಿ ಪ್ರಶಾಂತ್ ಪ್ರಕಾಶ್ ಮತ್ತು ಸಂಗೀತ ನಿರ್ದೇಶಕ ರಿಕಿ ಕೇಜ್ ಅವರಿಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ತೊಗಲುಗೊಂಬೆಯಾಟದ ಭೀಮವ್ವ ಶಿಳ್ಳೇಕ್ಯಾತ ಮೂಲತಃ ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ನಿವಾಸಿ. 96 ವರ್ಷ ವಯಸ್ಸಿನ ಭೀಮವ್ವ ಅವರು, ದೇಶ, ವಿದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶಿಸಿರುವ ಮಹಾನ್ ಕಲಾವಿದೆ.
ಇದನ್ನೂ ಓದಿ: ಕೊಪ್ಪಳ: ತೊಗಲುಗೊಂಬೆಯಾಟದ ಹಿರಿಯ ಕಲಾವಿದೆ 96 ವರ್ಷದ ಭೀಮವ್ವ ಶಿಳ್ಳೇಕ್ಯಾತಗೆ ಒಲಿದ ಪದ್ಮಶ್ರೀ
ಭೀಮವ್ವರ ಇಡೀ ಕುಟುಂಬವೇ ತೊಗಲುಗೊಂಬೆಯಾಟ ಕಲೆಯಲ್ಲಿ ತೊಡಗಿಸಿಕೊಂಡಿದೆ. ರಾಮಯಣ, ಮಹಾಭಾರತದ ಪ್ರಸಂಗಗಳನ್ನು ಈಗಲು ಹಾಡುವ ಭೀಮವ್ವ, 2004 ರಲ್ಲಿ ರಾಜೋತ್ಸವ, ಜಾನಪದ ಶ್ರೀ ಸೇರಿದಂತೆ ಅನೇಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ತೊಗಲುಗೊಂಬೆ ಆಟದಲ್ಲಿ ಅಂತರಾಷ್ಟ್ರೀಯ ಖ್ಯಾತಿಗಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಾನಪದ ಗಾಯಕ ವೆಂಕಪ್ಪ ಅಂಬಾಜಿ ಸುಗಟೇಕರ್, 71 ವರ್ಷಗಳ ಕಾಲ ಗೊಂದಳಿ ಹಾಡಿನ ಮೂಲಕ ಕಲಾಸೇವೆ ಮಾಡಿಕೊಂಡು ಬಂದಿದ್ದಾರೆ. ಗೊಂದಳಿ ಕಲಾಸೇವೆ ಮೂಲಕ ಈಗಾಗಲೇ ವೆಂಕಪ್ಪ ಅಂಬಾಜಿ ಸುಗಟೇಕರ್ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 2014 ರಂದು ಮನ್ ಕಿ ಬಾತ್ನಲ್ಲೂ ವೆಂಕಪ್ಪ ಗುಣಗಾನ ಮಾಡಿದ್ದರು. ವಂಶ ಪರಂಪರೆಯ ಗೊಂದಳಿ ಹಾಡುಗಾರನ ಬಗ್ಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕಲಬುರಗಿ ಮೂಲದವರಾಗಿರುವ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರು, ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆ, ರೋಗಿಗಳ ಪಾಲಿನ ಸಾಕ್ಷಾತ್ ಧನ್ವಂತರಿ ಎಂದೇ ಹೆಸರುವಾಸಿಯಾಗಿದ್ದಾರೆ. ಸತತ ನಾಲ್ಕು ದಶಗಳ ಕಾಲ ಕ್ಯಾನ್ಸರ್ ಪಿಡಿತರ ಸೇವೆ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:50 pm, Sat, 25 January 25