ಕರ್ನಾಟಕದಲ್ಲಿ ಸೇವೆ ವಿಸ್ತರಿಸಿದ ಗ್ಯಾಲಕ್ಸಿ ಹೆಲ್ತ್ ಇನ್ಶುರೆನ್ಸ್: ಬೆಂಗಳೂರಿನಲ್ಲಿ ಮೊದಲ ಪ್ರಾದೇಶಿಕ ಕಚೇರಿ ಆರಂಭ
ಗ್ಯಾಲಕ್ಸಿ ಹೆಲ್ತ್ ಇನ್ಶುರೆನ್ಸ್ ಕರ್ನಾಟಕದಲ್ಲಿ ತನ್ನ ಸೇವೆಗಳನ್ನು ವಿಸ್ತರಿಸುತ್ತಿದೆ. ಬೆಂಗಳೂರಿನಲ್ಲಿ ತನ್ನ ಮೊದಲ ಪ್ರಾದೇಶಿಕ ಕಚೇರಿಯನ್ನು ತೆರೆದಿದೆ. ಕಂಪನಿಯು 2025 ರೊಳಗೆ ರಾಜ್ಯಾದ್ಯಂತ 27 ಕಚೇರಿಗಳನ್ನು ತೆರೆಯಲು ಮತ್ತು 5000 ಏಜೆಂಟ್‌ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಇದು ಕೈಗೆಟುಕುವ ಮತ್ತು ಗ್ರಾಹಕ ಕೇಂದ್ರಿತ ಆರೋಗ್ಯ ವಿಮಾ ಉತ್ಪನ್ನಗಳನ್ನು ಒದಗಿಸುವ ಗುರಿ ಹೊಂದಿದೆ.
ಬೆಂಗಳೂರು, ಜನವರಿ 25: ಗ್ಯಾಲಕ್ಸಿ ಹೆಲ್ತ್ ಇನ್ಶುರೆನ್ಸ್ (Galaxy Health Insurance) ಕಂಪನಿಯು ಬೆಂಗಳೂರಿನಲ್ಲಿ ತನ್ನ ಮೊದಲ ಪ್ರಾದೇಶಿಕ ಕಚೇರಿ ಆರಂಭಿಸುವ ಮೂಲಕ ಕರ್ನಾಟಕದಲ್ಲಿ ತನ್ನ ಸೇವೆಗೆ ಚಾಲನೆ ನೀಡಿದೆ. ಈ ಕಚೇರಿಯು ಪ್ರಾದೇಶಿಕ ಕಾರ್ಯಾಚರಣೆಗಳ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಕಂಪನಿಯು ಮುಂದಿನ ವರ್ಷ ಕರ್ನಾಟಕದಾದ್ಯಂತ 27 ಕಚೇರಿಗಳನ್ನು ತೆರೆಯಲು ಉದ್ದೇಶಿಸಿದ್ದು, ಸೇವೆ ವಿಸ್ತರಣೆ ನಿಟ್ಟಿನಲ್ಲಿನ ಬೆಂಗಳೂರು ಕಚೇರಿಯು ಮೊದಲನೆಯದಾಗಿದೆ.
ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆಯಾಗಿರುವ ಟಿವಿಎಸ್ ಮೋಟರ್ ಕಂಪನಿಯ ವಿಶ್ರಾಂತ ಅಧ್ಯಕ್ಷ ವೇಣು ಶ್ರೀನಿವಾಸನ್ ಮತ್ತು ಸುಂದರಂ ಕ್ಲೇಟನ್ ಲಿಮಿಟೆಡ್‌ನ ವಿ. ಜಗನ್ನಾಥನ್ ಅವರು ಗ್ಯಾಲಕ್ಸಿ ಹೆಲ್ತ್ ಇನ್ಶುರೆನ್ಸ್ ಕಂಪನಿಯ ಜಂಟಿ ಪ್ರವರ್ತಕರಾಗಿದ್ದಾರೆ. ಜಗನ್ನಾಥನ್ ಅವರು ಇದಕ್ಕೂ ಮೊದಲು ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ದೇಶದ ಮೊದಲ ಸ್ವತಂತ್ರ ಆರೋಗ್ಯ ವಿಮೆ ಕಂಪನಿಯ ಸಂಸ್ಥಾಪಕರೂ ಆಗಿದ್ದರು.
ಇದನ್ನೂ ಓದಿ: ಬಾಲ್ಡ್ ಬೆಂಗಳೂರು: ಇದು ಬೆಂಗಳೂರಿಗರ ‘ಒಂದು ಮೊಟ್ಟೆ’ಯ ಕಥೆ!
ಗ್ಯಾಲಕ್ಸಿ ಹೆಲ್ತ್ ಇನ್ಶುರೆನ್ಸ್ ಕಂಪನಿಯು 2024ರ ಮಾರ್ಚ್ನಲ್ಲಿ ಭಾರತದ ವಿಮೆ ನಿಯಂತ್ರಣ ಪ್ರಾಧಿಕಾರದಿಂದ (ಐಆರ್‌ಡಿಎಐ) ಪರವಾನಗಿ ಪಡೆದುಕೊಂಡಿದೆ. ಗ್ಯಾಲಕ್ಸಿ ಹೆಲ್ತ್ ಇನ್ಶುರೆನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಜಿ. ಶ್ರೀನಿವಾಸನ್ ಮಾತನಾಡಿ, ಆರೋಗ್ಯ ವಿಮೆ ಉತ್ಪನ್ನಗಳನ್ನು ಕೈಗೆಟುಕುವ, ಸುಲಭವಾಗಿ ದೊರೆಯುವ ಮತ್ತು ಗ್ರಾಹಕ-ಕೇಂದ್ರಿತವಾಗಿರುವ ಬದ್ಧತೆಯೊಂದಿಗೆ ನಾವು ಕಳೆದ ವರ್ಷ ಗ್ಯಾಲಕ್ಸಿ ಪ್ರಾರಂಭಿಸಿದ್ದೇವೆ. ಆ ಭರವಸೆ ಈಡೇರಿಸುವ ನಿಟ್ಟಿನಲ್ಲಿ ನಮ್ಮ ಪ್ರಾದೇಶಿಕ ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಭಿಸಿರುವುದು ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ.
ದೇಶದ ತಂತ್ರಜ್ಞಾನದ ರಾಜಧಾನಿಯಾಗಿ, ಬೆಂಗಳೂರು ಚೈತನ್ಯದಾಯಕ ಜನಸಮುದಾಯ ಹೊಂದಿರುವ ವಿಶಿಷ್ಟ ನಗರವಾಗಿದೆ. ಬೆಂಗಳೂರಿನಲ್ಲಿ ಪ್ರಾದೇಶಿಕ ಕಚೇರಿ ಆರಂಭಿಸುವುದು ಕರ್ನಾಟಕದಲ್ಲಿ ನಮ್ಮ ಸೇವೆ ವಿಸ್ತರಣೆಗೆ ಸೂಕ್ತವಾದ ವಿಧಾನವಾಗಿದೆ. 2025ರಲ್ಲಿ ಕರ್ನಾಟಕದಾದ್ಯಂತ 27 ಕಚೇರಿಗಳನ್ನು ಸ್ಥಾಪಿಸುವ ಮತ್ತು 5,000 ವಿಮೆ ಏಜೆಂಟ್‌ರನ್ನು ನೇಮಿಸಿಕೊಳ್ಳುವ ಯೋಜನೆಗಳೊಂದಿಗೆ ನಾವು ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲು ಉದ್ದೇಶಿಸಿದ್ದೇವೆ. ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸುವ ಉದ್ದೇಶ ನಮ್ಮದಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral: ಇದು ವಿದ್ಯಾದೇಗುಲವೋ ಅಥವಾ ವ್ಯಾಪಾರ ಕೇಂದ್ರವೋ, ಬೆಂಗಳೂರಿನಲ್ಲಿ 3ನೇ ತರಗತಿಗೆ 2.1 ಲಕ್ಷ ಶುಲ್ಕವಂತೆ
ಗ್ಯಾಲಕ್ಸಿಯೂ ಇತ್ತೀಚೆಗೆ ತನ್ನ ಮೊದಲ ಪ್ರಮುಖ ಉತ್ಪನ್ನವಾದ ಗ್ಯಾಲಕ್ಸಿ ಪ್ರಾಮೀಸ್ ಅನ್ನು ಪರಿಚಯಿಸಿದೆ. ಇದು ವ್ಯಕ್ತಿಗಳು ಮತ್ತು ಕುಟುಂಬಗಳಿಗಾಗಿ ವಿನ್ಯಾಸಗೊಳಿಸಲಾದ ಕೈಗೆಟುಕುವ, ಸಮಗ್ರ ಸ್ವರೂಪದ ಆರೋಗ್ಯ ವಿಮೆ ಯೋಜನೆಯಾಗಿದೆ. ಗ್ಯಾಲಕ್ಸಿ ಹೆಲ್ತ್ ಇನ್ಶುರೆನ್ಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಜಿ. ಶ್ರೀನಿವಾಸನ್ ಅವರು ಪ್ರಾದೇಶಿಕ ಕಚೇರಿಯನ್ನು ಉದ್ಘಾಟಿಸಿದರು. ಮಾರ್ಗಬಂಧು (ಸಿಯುಒ) ಗುರು ಪ್ರಕಾಶ್ (ಸಿಎಂಒ), ವಿ. ತ್ಯಾಗರಾಜನ್ (ಆರ್ಥಿಕ ಸಲಹೆಗಾರ), ಜಾನ್ ನೊರೊನ್ಹಾ (ಮಾರ್ಗದರ್ಶಿ), ವಿನೋದ್ ಕುಮಾರ್ ಆರ್ (ರಾಜ್ಯ ಘಟಕದ ಮುಖ್ಯಸ್ಥ) ಮತ್ತು ಓಲೇಟಿ ಅನಿಲ್ ಕುಮಾರ್ (ವಲಯ ಮುಖ್ಯಸ್ಥರು) ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.