ಕೊಪ್ಪಳ: ತೊಗಲುಗೊಂಬೆಯಾಟದ ಹಿರಿಯ ಕಲಾವಿದೆ 96 ವರ್ಷದ ಭೀಮವ್ವ ಶಿಳ್ಳೇಕ್ಯಾತಗೆ ಒಲಿದ ಪದ್ಮಶ್ರೀ

ಭೀಮವ್ವ ದೊಡ್ಡಬಳ್ಳಪ್ಪ ಶಿಳ್ಳೇಕ್ಯಾತ ಅವರು ಪದ್ಮಶ್ರೀ ಪ್ರಶಸ್ತಿ ಪಡೆದಿರುವುದು ಕನ್ನಡದ ತೊಗಲುಗೊಂಬೆಯಾಟ ಕಲೆಗೆ ದೊರೆತ ಅಪಾರ ಗೌರವವಾಗಿದೆ. ಬಾಲ್ಯದಿಂದಲೇ ಈ ಕಲೆಯಲ್ಲಿ ತೊಡಗಿಸಿಕೊಂಡಿರುವ ಭೀಮವ್ವ ಅವರು ದೇಶ-ವಿದೇಶಗಳಲ್ಲಿ ಈ ಕಲೆಯನ್ನು ಪ್ರದರ್ಶಿಸಿ ಪ್ರಶಂಸೆ ಪಡೆದಿದ್ದಾರೆ. ತಮ್ಮ ಕುಟುಂಬದ ಮೂಲಕ ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಅವರು ಸಾಧನೆ ಮಾಡಿದ್ದಾರೆ.

ಕೊಪ್ಪಳ: ತೊಗಲುಗೊಂಬೆಯಾಟದ ಹಿರಿಯ ಕಲಾವಿದೆ 96 ವರ್ಷದ ಭೀಮವ್ವ ಶಿಳ್ಳೇಕ್ಯಾತಗೆ ಒಲಿದ ಪದ್ಮಶ್ರೀ
ಭೀಮವ್ವ ಶಿಳ್ಳೇಕ್ಯಾತ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಗಂಗಾಧರ​ ಬ. ಸಾಬೋಜಿ

Updated on:Jan 25, 2025 | 8:37 PM

ಕೊಪ್ಪಳ, ಜನವರಿ 25: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ (Padma Shri) ತೊಗಲುಗೊಂಬೆ ಆಟದ ಹಿರಿಯ ಕಲಾವಿದೆಯಾಗಿರುವ ಜಿಲ್ಲೆಯ ಮೋರನಾಳ ಗ್ರಾಮದ ಭೀಮವ್ವ ದೊಡ್ಡಬಳ್ಳಪ್ಪ ಶಿಳ್ಳೇಕ್ಯಾತ ಅವರಿಗೆ ಒಲಿದು ಬಂದಿದೆ. ಭೀಮವ್ವ ಅನಕ್ಷರಸ್ಥೆಯಾಗಿದ್ದರು ಬಾಲ್ಯದಿಂದಲೇ  ತೊಗಲುಗೊಂಬೆಯಾಟ‌ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ.

ಇಂದಿನ‌ ಆಧುನಿಕ ಯುಗದಲ್ಲಿ ಅನೇಕ‌ ಗ್ರಾಮೀಣ ಕ್ರೀಡೆಗಳು‌ ಮಾಯವಾಗುತ್ತಿವೆ. ಆಧುನಿಕ ಗಾಜೆಟ್​ಗಳಲ್ಲಿ ಬ್ಯೂಸಿಯಾಗಿರುವ ಇಂದಿನ‌ ಯುಗದ ಯುವಜನತೆಗೆ ಗ್ರಾಮೀಣ ಕ್ರೀಡೆಗಳ ಮಹತ್ವದ ಅರಿವು ಕಡಿಮೆ. ಆದರೆ ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ಶಿಳ್ಳೇಕ್ಯಾತ ಎಂಬ ಕುಟುಂಬಕ್ಕೆ ಕುಟುಂಬವೇ ಗ್ರಾಮೀಣ ಕಲೆಯಲ್ಲಿ ತೊಡಗಿಸಿಕೊಂಡಿದೆ. ಗ್ರಾಮೀಣ ಕಲೆ ತೊಗಲು ಗೊಂಬೆಯಾಟದ ಮೂಲಕ ಆ ಕುಟುಂಬ ಜನಮಾನಸದಲ್ಲಿ‌ ಉಳಿದುಕೊಂಡಿದೆ.

ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತ ಹಿನ್ನಲೆ

ಕೊಪ್ಪಳದ ಇರಕಲ್ಲಗಡಾದ ಹನುಮಟ್ಟಿಯ ಸಂಜೀವಪ್ಪ ಹೊಳೆಯಮ್ಮರ ಮಗಳಾದ ಭೀಮವ್ವ, ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದಲ್ಲಿ 1929 ರಲ್ಲಿ ಜನಿಸಿದ್ದರು. ತಮ್ಮ 14ನೇ ವಯಸ್ಸಿನಿಂದ ಇಲ್ಲಿಯವರೆಗೂ ತೊಗಲುಗೊಂಬೆಯಾಟವನ್ನ ಕುಲ ಕಸುಬಾಗಿ ಮಾಡುತ್ತಾ ಬಂದಿದ್ದಾರೆ. ಸದ್ಯ ಇದೇ ಕಲೆಯಲ್ಲಿ ಮಹತ್ತರ ಸಾಧನೆ ಕೂಡ ಮಾಡಿದ್ದಾರೆ. ಅಮೇರಿಕ, ಪ್ಯಾರಿಸ್, ಇಟಲಿ, ಇರಾನ್, ಇರಾಕ್, ಸ್ವಿಟ್ಜರ್ಲೆಂಡ್‌‌ ಮತ್ತು ಹಾಲೆಂಡ್ ಮುಂತಾದ ದೇಶಗಳಲ್ಲಿ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯ ಹಾಗೂ ಪ್ರಸ್ತುತ ವಿದ್ಯಮಾನಗಳನ್ನು ತೊಗಲುಗೊಂಬೆಯಾಟದ ಮೂಲಕ ಪ್ರದರ್ಶನ ನೀಡಿ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನ ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಶಸ್ತಿ ಗೌರವಗಳು

ಇವರ ಸಾಧನೆಯನ್ನ ಕಂಡು ಸರ್ಕಾರವು ಅನೇಕ ಪ್ರಶಸ್ತಿ ನೀಡಿ ಗೌರವಿಸಿದೆ. 1993ರಲ್ಲಿ ತೆಹರಾನ್ ದೇಶದ ಬೊಂಬೆ ಉತ್ಸವ ಪ್ರಶಸ್ತಿ, 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಪ್ರಶಸ್ತಿ. 2005-06 ನೇ ಸಾಲಿನಲ್ಲಿ ಜಾನಪದ ಮತ್ತು ಬಯಲಾಟ ಅಕಾಡೆಮಿ ಪ್ರಶಸ್ತಿ, 2010 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2014ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2020-21ನೇ ಸಾಲಿನ ಜಾನಪದ ಶ್ರೀ ಪ್ರಶಸ್ತಿ, 2022ರಲ್ಲಿ ಹಿರಿಯ ನಾಗರೀಕ ಪ್ರಶಸ್ತಿ ಹೀಗೆ ಸಂಘ ಸಂಸ್ಥೆಗಳಿಂದ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ವಿದೇಶದಲ್ಲಿ ತೊಗಲುಗೊಂಬೆಯಾಟ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ ಭೀಮವ್ವ

ಭೀಮವ್ವ ಅವರು ವಿದೇಶದಲ್ಲಿ ತೊಗಲುಗೊಂಬೆಯಾಟ ಪ್ರದರ್ಶಿಸುವ ಮೂಲಕ ಮೆಚ್ಚುಗೆ ಗಳಿಸಿದರು. ಭೀಮವ್ವ ಈಗಲೂ ಇನ್ನೂರು ವರ್ಷದ ಹಳೆಯ ತೊಗಲುಗೊಂಬೆಗಳನ್ನು ಸಂರಕ್ಷಿಸಿದ್ದಾರೆ. ರಾಮಾಯಣ, ಮಹಾಭಾರತ ಕುರಿತ ಪ್ರಸಂಗಗಳನ್ನು ಭೀಮವ್ವ ನೆನಪಿನಿಂದ ಈಗಲೂ ಹಾಡುತ್ತಾರೆ. ಗೊಂಬೆಗಳ ಲಯಕ್ಕೆ ತಕ್ಕ ಹಾಗೆ ಹಾಡಿಕೆಯನ್ನು ಹೊಂದಿಸಬೇಕು. ಇದೊಂದು ಸೂಕ್ಷ್ಮವಾದ ಕಲೆ. ಇಂತಹ ಕಲೆಯ ಎಲ್ಲಾ ವಿಭಾಗಗಳಲ್ಲೂ ಭೀಮವ್ವನಿಗೆ ಪ್ರಾವಿಣ್ಯತೆಯಿದೆ.

ಇದನ್ನೂ ಓದಿ: Padma Awards 2025: ಪದ್ಮ ಪ್ರಶಸ್ತಿ ಪಡೆದ ಕರ್ನಾಟಕ ಸಾಧಕರ ಸಂಪೂರ್ಣ ಪಟ್ಟಿ ಇಲ್ಲಿದೆ

‘ದೇಶ ವಿದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶಿಸಿದ ಮಹಾನ್ ಕಲಾವಿದೆ’ ಎನ್ನುವ ಶೀರ್ಷಿಕೆಯಲ್ಲಿ 103 ವರ್ಷದ ಹಿರಿಯಜ್ಜಿ ಭೀಮವ್ವನ ಬಗ್ಗೆ ಪರಿಚಯಿಸಿದ್ದರು. ಈಚೆಗೆ ಜಾನಪದ ಅಕಾಡೆಮಿ ಅಧ್ಯಕ್ಷೆಯಾದ ಮಂಜಮ್ಮ ಜೋಗತಿಯವರು 2020 ರ ‘ಜಾನಪದ ಶ್ರೀ’ ಪ್ರಶಸ್ತಿಗೆ ಭೀಮವ್ವನನ್ನು ಆಯ್ಕೆ ಮಾಡಿದ್ದು ಖುಷಿಕೊಟ್ಟಿತು. ಗಂಡುಪಾರಮ್ಯದ ಕಲೆಗಳಲ್ಲಿ ಹೆಣ್ಣುಮಕ್ಕಳು ತಮ್ಮದೇ ಛಾಪು ಮೂಡಿಸುವುದು ಜನಪದ ಕಲೆಗಳಲ್ಲಿ ವಿರಳ. ತೆರೆ ಮರೆಯಲ್ಲಿರುವುದೇ ಹೆಚ್ಚು. ಕಿಳ್ಳೇಕ್ಯಾತ ಸಮುದಾಯದ ತೊಗಲುಗೊಂಬೆ ಕಲೆ ಏಕವ್ಯಕ್ತಿ ಪ್ರದರ್ಶಿಸುವ ಕಲೆಯಲ್ಲ. ಈ ಕಲೆಗೆ ಇಡೀ ಕುಟುಂಬವೇ ಪಾಲ್ಗೊಳ್ಳಬೇಕು. ಹಾಗಾಗಿ ಮಹಿಳೆಯರು, ಚಿಕ್ಕ, ಮಕ್ಕಳು ಕೂಡ ತೊಗಲುಗೊಂಬೆಯಾಟದಲ್ಲಿ ಪಾಲ್ಗೊಳ್ಳುತ್ತಾರೆ. ಈ ಕಾರಣದಿಂದಾಗಿ ವಿಶೇಷವಾಗಿ ಈ ಕಲೆಯಲ್ಲಿ ಮಹಿಳೆಯರು ಕಾಣಸಿಗುತ್ತಾರೆ.

ದೊಡ್ಡಬಾಳಪ್ಪರೊಂದಿಗೆ ಭೀಮವ್ವ ಮದುವೆ

ಭೀಮವ್ವ ಅವರು ಕೊಪ್ಪಳದಿಂದ 22 ಕಿ.ಮೀ ದೂರದ ಮೊರನಾಳದ ತೊಗಲುಗೊಂಬೆಯಾಟದಲ್ಲಿ ಆಗಲೆ ಪ್ರಸಿದ್ಧಿ ಪಡೆದಿದ್ದ ದೊಡ್ಡಬಾಳಪ್ಪ ಅವರನ್ನು ಮದುವೆಯಾಗುತ್ತಾರೆ. ತವರು ಮನೆಯಲ್ಲಿಯೂ ಭೀಮವ್ವ ತೊಗಲುಗೊಂಬೆ ಕಲೆಯನ್ನು ಬಾಲ್ಯದಿಂದಲೇ ಕಲಿತಿದ್ದರಿಂದ ಬಾಳಪ್ಪನ ಜತೆಗಿನ ಬಾಳುವೆಯಲ್ಲಿ ತೊಗಲುಗೊಂಬೆ ಕಲೆಯನ್ನು ಭೀಮವ್ವ ಮತ್ತಷ್ಟು ತನ್ಮಯತೆಯಿಂದ ಕಲಿಯುತ್ತಾರೆ. ಇದರಿಂದ ಬಾಳಪ್ಪನ ತೊಗಲುಗೊಂಬೆಯಾಟದಲ್ಲಿ ಭೀಮವ್ವ ತನ್ನದೇ ಪಾತ್ರ ವಹಿಸುತ್ತಾರೆ.

ಹೀಗೆ ನಡೆದ ಜೀವನದಲ್ಲಿ ವಿರೂಪಾಕ್ಷಪ್ಪ, ಯಂಕಪ್ಪ ಹಾಗೂ ಕೇಶಪ್ಪ ಮೂವರು ಮಕ್ಕಳಾಗುತ್ತಾರೆ. ಈ ಮೂವರು ತೊಗಲುಗೊಂಬೆಯಾಟ ಕಲಿಯುತ್ತಾರೆ. ಸೊಸೆಯಂದಿರೂ ತೊಗಲುಗೊಂಬೆಯಾಟದಲ್ಲಿ ತೊಡಗಿಕೊಳ್ಳುತ್ತಾರೆ. ಇದೀಗ ಅಜ್ಜಿಯ ಮೊಮ್ಮಕ್ಕಳಾದ ಶಿವಪ್ಪ, ಶಿವರಾಜ, ವಸಂತಕುಮಾರ್, ಪಾಂಡುರಂಗ, ರಮೇಶ್ ಹಾಗೂ ಪರುಶುರಾಮ ಎಲ್ಲರೂ ಗೊಂಬೆಯಾಟದಲ್ಲಿ ಪ್ರಾವಿಣ್ಯತೆ ಪಡೆದಿದ್ದಾರೆ. ಇದೀಗ ಮರಿ ಮೊಮ್ಮಕ್ಕಳನ್ನು ಪಡೆದ ಭೀಮಜ್ಜಿಯ ಮನೆಯಲ್ಲಿ ನಾಲ್ಕು ತಲೆಮಾರಿನ ಕಲಾವಿದರಿದ್ದಾರೆ.

ಭೀಮವ್ವ ಶಿಳ್ಳೇಕ್ಯಾತ

ಈ ಅಜ್ಜಿಗೆ ಈಗ 103 ವರ್ಷ. ಆದರೆ ಜನ್ಮದಿನಾಂಕವನ್ನೇ ಬರೆದಿಡದ ಸಮಯದಲ್ಲಿ ಹುಟ್ಟಿರುವ ಭೀಮವ್ವಗೆ ಆಧಾರಕಾರ್ಡ್ ಪ್ರಕಾರ ‌96 ವರ್ಷ. ಶತಕ ಪೂರೈಸಿದ ಅಜ್ಜಿ ಈಗಲೂ ಖಡಕ್ ಆಗಿ ಮಾತನಾಡುತ್ತಾರೆ. ತಾನು ಬಾಳಪ್ಪನ ತಂಡದ ಭಾಗವಾಗಿ ವಿದೇಶದಲ್ಲಿ ತೊಗಲುಗೊಂಬೆಯಾಟ ಆಡಿಸಿದ್ದನ್ನು ಬೆರಗಿನಿಂದ ಕಣ್ಮುಂದೆ ಕಟ್ಟುವಂತೆ ವಿವರಿಸುತ್ತಾರೆ.

ದೇಶಗಳಲ್ಲಿ ಬಾಳಪ್ಪನ ತಂಡ ಪ್ರದರ್ಶನ

1992ರಲ್ಲಿ ದೆಹಲಿಯಲ್ಲಿ ಸಂಗೀತ ಮತ್ತು ನಾಟಕ ಅಕಾಡೆಮಿಯವರಿಂದ ಅಂತರಾಷ್ಟ್ರೀಯ ಪಿಪೆಟ್ರಿ ಫೆಸ್ಟಿವಲ್ ನಡೆಯುತ್ತದೆ. ಈ ಸಂದರ್ಭದಲ್ಲಿ ಅತ್ಯುತ್ತಮ ಮತ್ತು ಪ್ರಾಚೀನ ಬೊಂಬೆಗಳಿರುವ ತಂಡಗಳನ್ನು ಕಳಿಸಲು ಜಾನಪದ ಮತ್ತು ಯಕ್ಷಗಾನ ಅಕಾಡೆಮಿಗೆ ಪತ್ರ ಬರುತ್ತದೆ. ಆಗ ರಿಜಿಸ್ಟ್ರಾರ್ ಆಗಿದ್ದ ಹಿ.ಚಿ.ಬೋರಲಿಂಗಯ್ಯ ಅವರು ಮೊರನಾಳದ ದೊಡ್ಡ ಬಾಳಪ್ಪ ಅವರ ತಂಡವನ್ನು ಆಯ್ಕೆ ಮಾಡಿ, ದೆಹಲಿಗೆ ಕರೆದುಕೊಂಡು ಹೋಗುತ್ತಾರೆ. ಈ ಫೆಸ್ಟಿವೆಲ್‍ಗೆ ಬಂದ ಯುರೋಪಿನ ಫ್ರಾನ್ಸ್ ದೇಶದ ಕಲ್ಚರ್ ಡುಮ್ಯಾಂಡೆ ಎನ್ನುವ ಸಂಸ್ಥೆಯವರು ದೊಡ್ಡ ಬಾಳಪ್ಪ ಅವರ ತಂಡವನ್ನು ಆಯ್ಕೆ ಮಾಡುತ್ತಾರೆ. ಆಗ ಪ್ರೊ.ಹಿ.ಚಿ.ಬೋರಲಿಂಗಯ್ಯ ಮತ್ತು ಮಂಗಳೂರಿನ ಉಪಧ್ಯಾಯ ಅವರು ದೊಡ್ಡಬಾಳಪ್ಪ ಅವರ ತಂಡವನ್ನು ಕರೆದುಕೊಂಡು ಹೋಗುತ್ತಾರೆ. ಯುರೋಪಿನ ಇಟಲಿ, ಫ್ರಾನ್ಸ್, ನೆದರ್ ಲ್ಯಾಂಡ್ಸ್ ಮೂರು ದೇಶಗಳಲ್ಲಿ ಬಾಳಪ್ಪನ ತಂಡ ಪ್ರದರ್ಶನ ಕೊಡುತ್ತದೆ.

ಈ ಯುರೋಪ್‍ನ ಪ್ರವಾಸದ ನಂತರ ಕೇಂದ್ರ ಸಂಸ್ಕೃತಿ ಇಲಾಖೆಯವರು ಇರಾನಿನ ತೆಹ್ರಾನ್​ನಲ್ಲಿ ನಡೆಯುವ ಅಂತರಾಷ್ಟ್ರೀಯ ಪೊಪೆಟ್ ಥಿಯೇಟರ್ ಫೆಸ್ಟಿವೆಲ್‍ಗೆ ದೊಡ್ಡ ಬಾಳಪ್ಪನವರ ತಂಡವನ್ನೇ ಆಯ್ಕೆ ಮಾಡುತ್ತಾರೆ. ಈ ಎಲ್ಲಾ ಪ್ರವಾಸದಲ್ಲಿ ಭೀಮವ್ವ ಹಾಡುಗಾರ್ತಿಯಾಗಿ ದೊಡ್ಡಬಾಳಪ್ಪನ ಜೊತೆ ಇರುತ್ತಾರೆ. ಪ್ರೊ.ಹಿ.ಚಿ. ಬೋರಲಿಂಗಯ್ಯ ಅವರು ದೊಡ್ಡಬಾಳಪ್ಪ ಬಹಳ ಪ್ರತಿಭಾವಂತ ಕಲಾವಿದ. ತುಂಬಾ ಪ್ರಾಚೀನವಾದ ತೊಗಲು ಗೊಂಬೆಗಳನ್ನು ಸಂರಕ್ಷಿಸಿದ್ದರು. ಬಾಳಪ್ಪನ ಹೆಂಡತಿ ಭೀಮವ್ವನಿಗೆ ಒಳ್ಳೆಯ ಕಂಠವಿತ್ತು, ಅದ್ಭುತವಾಗಿ ಹಾಡುತ್ತಿದ್ದರು. ಇವರ ತಂಡವನ್ನು ಯೂರೋಪ್ ಮತ್ತು ಇರಾನ್‍ಗೆ ಕರೆದುಕೊಂಡು ಹೋಗಿ ಬಂದದ್ದಕ್ಕೆ ಖುಷಿ ಇದೆ ಎನ್ನುತ್ತಾರೆ. ಹೀಗೆ ಕೊಪ್ಪಳ ಸಮೀಪದ ಹಳ್ಳಿಯೊಂದರ ಭೀಮವ್ವ ವಿದೇಶಗಳಲ್ಲಿ ತೊಗಲುಗೊಂಬೆ ಕಲೆಯನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.

ಭೀಮವ್ವ ಈಗಲೂ ಇನ್ನೂರು ವರ್ಷದ ಹಳೆಯ ತೊಗಲುಗೊಂಬೆಗಳನ್ನು ಸಂರಕ್ಷಿಸಿದ್ದಾರೆ. ತೊಗಲುಗೊಂಬೆ ತಯಾರಿಕೆ, ಅದಕ್ಕೆ ಬೇಕಾದ ಸ್ಥಳೀಯ ಪರಿಕರಗಳನ್ನು ಬಳಸಿ ಬಣ್ಣಗಾರಿಕೆ ಮಾಡುವುದು, ತೊಗಲುಗೊಂಬೆ ಮಾಡಲು ಜಿಂಕೆ ಚರ್ಮವನ್ನು ಹದ ಮಾಡುವುದು ಹೀಗೆ ತೊಗಲುಗೊಂಬೆ ತಯಾರಿಕೆಗೆ ಬೇಕಾದ ದೇಸಿ ತಿಳಿವು ಅಜ್ಜಿಗಿದೆ. ಅದನ್ನು ಮಕ್ಕಳು, ಮೊಮ್ಮಕ್ಕಳಿಗೂ ಕಲಿಸಿಕೊಟ್ಟಿದ್ದಾರೆ. ಇದೀಗ ಜಿಂಕೆಯ ಚರ್ಮದ ಕೊರತೆಯಿಂದಲೋ, ಅತಿಯಾದ ಶ್ರಮ ಮತ್ತು ಕೌಶಲ್ಯ ಬೇಡುವುದರಿಂದಲೋ ಅಜ್ಜಿಯ ಮೊಮ್ಮಕ್ಕಳು ಹೊಸ ತೊಗಲುಗೊಂಬೆಗಳನ್ನು ಮಾಡುವಲ್ಲಿ ಹಿಂದೆ ಸರಿದಿದ್ದಾರೆ. ತಮಗೆ ಹೊಸ ಗೊಂಬೆಗಳು ಬೇಕಾದರೆ ಆಂದ್ರದ ಅನಂತಪುರ, ಧರ್ಮಾವರಂ, ಹಿಂದೂಪುರ ಮೊದಲಾದ ಕಡೆಗಳಿಗೆ ಹೋಗಿ ದುಬಾರಿ ಬೆಲೆಕೊಟ್ಟು ತರುತ್ತಾರೆ. ಹೀಗಾಗಿ ಈ ಕುಟುಂಬ ತೊಗಲುಗೊಂಬೆಯ ತಯಾರಿಕೆಯ ಸ್ವಾಯತ್ತತೆಯಿಂದ ಇದೀಗ ಪರಾವಲಂಬಿಯಾಗಿದೆ.

ದೇಶದ ಹಲವೆಡೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭೀಮವ್ವ ತೊಗಲುಗೊಂಬೆ ಕಲೆಯನ್ನು ಪ್ರದರ್ಶಿಸಿದ್ದಾರೆ. ಇದೀಗ ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳು ಕಲಾತಂಡಗಳಾಗಿ ದೇಶ, ರಾಜ್ಯದ ವಿವಿಧ ಭಾಗಗಳಲ್ಲಿ ತೊಗಲುಗೊಂಬೆ ಕಲೆಯನ್ನು ಪ್ರದರ್ಶಿಸುವ ಮೂಲಕ ಕಲೆಯನ್ನು ಜೀವಂತಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:33 pm, Sat, 25 January 25