ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ ಸಿಗಬೇಕಿತ್ತು, ಸೆಪ್ಟೆಂಬರ್ 15 ಮೀಸಲಾತಿ ನೀಡದಿದ್ದರೆ ಮತ್ತೆ ಹೋರಾಟ: ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ
ಅಗಸ್ಟ್ 15 ರಿಂದ ಸೆಪ್ಟೆಂಬರ್ 30 ರವರೆಗೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಿಂದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಎಂಬ ಧ್ಯೇಯ ವಾಕ್ಯದೊಂದಿಗೆ ರಾಜ್ಯಾದ್ಯಂತ ಅಭಿಯಾನ ನಡೆಸಲಿದ್ದೇವೆ ಎಂದು ಅವರು ತಿಳಿಸಿದರು.
ಬೆಂಗಳೂರು: ಈಗಾಗಲೇ ಕೊಟ್ಟ ಮಾತಿನಂತೆ ಸೆಪ್ಟೆಂಬರ್ 15 ರೊಳಗೆ ಪಂಚಮಸಾಲಿ ಸಮುದಾಯಕ್ಕೆ (Panchamasali Community) 2ಎ ಮೀಸಲಾತಿ ಕೊಡಬೇಕು. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಹೆಚ್ಚಾಗಿದ್ದು ಈ ಬಗ್ಗೆ ನೂತನ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೆಚ್ಚಿನ ಗಮನ ಹರಿಸಬೇಕು. ಕಳೆದ ಬಾರಿ ಪ್ರವಾಹದ ಪರಿಹಾರ ಹಣ ಬಿಡುಗಡೆಯಾಗಿಲ್ಲ, ಅದನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ನೂತನ ಸಿಎಂ ಆಗಿರುವ ಬಸವರಾಜ ಬೊಮ್ಮಾಯಿಗೆ ಅಭಿನಂದನೆ ಹಾಗು ಆಶೀರ್ವಾದ ಮಾಡುತ್ತೇನೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಮ್ಮ ಮೀಸಲಾತಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನ ನಡೆದರೂ ಹಿಂದೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ನಮಗೆ ರಕ್ಷಣೆ ನೀಡಿದ್ದರು. ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಕಾಣದ ಕೈಗಳಿಂದ ಕೈತಪ್ಪಿದೆ. ಮೀಸಲಾತಿ ನೀಡುವ ಸಲುವಾಗಿ ಮತ್ತೆ ಹೋರಾಟ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಅಗಸ್ಟ್ 15 ರಿಂದ ಸೆಪ್ಟೆಂಬರ್ 30 ರವರೆಗೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಿಂದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಎಂಬ ಧ್ಯೇಯ ವಾಕ್ಯದೊಂದಿಗೆ ರಾಜ್ಯಾದ್ಯಂತ ಅಭಿಯಾನ ನಡೆಸಲಿದ್ದೇವೆ. ರಾಜ್ಯದ ಪ್ರತಿ ತಾಲೂಕಿನಲ್ಲಿ ಜಾಗೃತಿ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ. ನೀಡಿದ ಭರವಸೆಯಂತೆ ಮೀಸಲಾತಿ ಕೊಡದಿದ್ದರೆ ಅಕ್ಟೋಬರ್ 1ರಂದು ಜೆ.ಎಚ್. ಪಟೇಲ್ ಜಯಂತಿಯಂದು ಧರಣಿ ಸತ್ಯಾಗ್ರಹ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ನಾವು ಸಚಿವಸ್ಥಾನ, ಸಿಎಂ ಹುದ್ದೆ ಬೇಕೆಂದು ಒತ್ತಾಯಿಸುತ್ತಿಲ್ಲ. ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಕೇಳುತ್ತಿದ್ದೇವೆ. ಅಂದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ನೀಡಿದ ಭರವಸೆಯಂತೆ ಮೀಸಲಾತಿ ನೀಡಬೇಕು. ರಾಜ್ಯ ಸರ್ಕಾರ ಕೂಡಲೇ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ಇಲ್ಲದಿದ್ದರೆ ನಾವು ಮತ್ತೊಮ್ಮೆ ಹೋರಾಟ ನಡೆಸಬೇಕಾಗುತ್ತದೆ. ತಾತ್ಕಾಲಿಕವಾಗಿ ಹಿಂಪಡೆದಿದ್ದ ಹೋರಾಟ ಪುನಾರಂಭಿಸುತ್ತೇವೆ ಎಂದು ಬಸವ ಜಯಮೃತ್ಯುಂಜಯಶ್ರೀ ಎಚ್ಚರಿಕೆ ನೀಡಿದರು.
ಸೂಕ್ತ ಸ್ಥಾನಮಾನ ನೀಡಲು ವಿಜಯಾನಂದ ಕಾಶಪ್ಪನವರ್ ಒತ್ತಾಯ ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ ನಿರೀಕ್ಷೆಯಿತ್ತು. ಸಮುದಾಯದವರಿಗೆ ಸಿಎಂ ಸ್ಥಾನ ನೀಡದಿದ್ದಕ್ಕೆ ನೋವಾಗಿದೆ. ಆದರೆ ಬಸವರಾಜ ಬೊಮ್ಮಾಯಿಗೆ ಸಿಎಂ ಸ್ಥಾನ ನೀಡಿದ್ದಕ್ಕೆ ಖುಷಿ ಇದೆ. ಪಂಚಮಸಾಲಿ ಸಮುದಾಯದ 16 ಶಾಸಕರು ಇದ್ದಾರೆ. ಸಮುದಾಯದ ಶಾಸಕರಿಗೆ ಸೂಕ್ತ ಅವಕಾಶ ಕೊಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದರು.
ಇದನ್ನೂ ಓದಿ:
ಪಂಚಮಸಾಲಿ ಸಮುದಾಯದ 17 ಶಾಸಕರು ಇದ್ದಾರೆ; ಪಂಚಮಸಾಲಿಯವರಿಗೇ ಸಿಎಂ ಸ್ಥಾನ ಕೊಡಬೇಕು: ಬಸವಜಯ ಮೃತ್ಯುಂಜಯಶ್ರೀ
(Panchamasali Community must get 2A Reservation by September 15 says Jaya Mruthyunjaya Swamiji
Published On - 4:16 pm, Thu, 29 July 21