ವಿಜಯಪುರ: ಪಂಚಮಸಾಲಿ ಸಮುದಾಯದ ಮಠಾಧೀಶರಲ್ಲಿ ಬಿರುಕು ಮೂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂದು (ಜುಲೈ 5) ಪಂಚಮಸಾಲಿ ಮಠಾಧೀಶರ ಪರ್ಯಾಯ ಒಕ್ಕೂಟದ ಸಭೆ ನಡೆದಿತ್ತು. ಹರಿಹರ, ಕೂಡಲಸಂಗಮ ಪೀಠ ಹೊರತುಪಡಿಸಿ ಅಖಿಲ ಭಾರತ ಪಂಚಮಸಾಲಿ ಮಠಾಧೀಶರ ಒಕ್ಕೂಟದ 3ನೇ ಸಭೆ ಮನಗೂಳಿಯ ಹಿರೇಮಠದಲ್ಲಿ ನಡೆದಿತ್ತು. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಗ್ರಾಮದಲ್ಲಿ ನಡೆದ ಈ ಸಭೆಯಲ್ಲಿ 25ಕ್ಕೂ ಹೆಚ್ಚು ವಿವಿಧ ಮಠಾಧೀಶರು ಭಾಗಿಯಾಗಿದ್ದರು. ಈ ವೇಳೆ, ಎರಡೂ ಪೀಠಗಳಿಂದ ಸಮಾಜಕ್ಕೆ ನ್ಯಾಯ ಸಿಗದ ಆರೋಪ ಕೇಳಿಬಂದಿದೆ. ತಮ್ಮದೇ ರಾಜಕೀಯ ಉದ್ದೇಶಕ್ಕೆ ಎರಡೂ ಪೀಠ ಬಡಿದಾಟ ಮಾಡಿಕೊಂಡಿದೆ ಎಂದು ಸಭೆಯಲ್ಲಿ ವಿವಿಧ ಮಠಾಧೀಶರಿಂದ ಬಲವಾದ ಆರೋಪ ಕೇಳಿಬಂದಿದೆ.
ಸಮಾಜದ ಜನರಿಗಾಗಿ ಮೂರನೇ ರಂಗ ಅಸ್ತಿತ್ವಕ್ಕೆ ಬಂದಿದೆ ಎಂದು ಪರ್ಯಾಯ ಒಕ್ಕೂಟದ ಸಭೆಯಲ್ಲಿ ಮಠಾಧೀಶರ ಘೋಷಣೆ ಕೇಳಿದೆ. ಅಖಿಲ ಭಾರತ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಸಭೆಯಲ್ಲಿ ಮನಗೂಳಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಶ್ರೀ ಅಭಿನವ ಸಂಗನ ಬಸವ ಶಿವಾಚಾರ್ಯ ಸ್ವಾಮೀಜಿ, ಪೀಠಾಧಿಪತಿ ಹಿರೇಮಠ ಮನಗೂಳಿ ಇವರು ಕೂಡಲಸಂಗಮ ಪಂಚಮಸಾಲಿ ಪೀಠದ ಪೀಠಾಧಿಪತಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಇತರೆ ಸ್ವಾಮೀಜಿಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಪಂಚಲಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ನಡೆದ ಹೋರಾಟದ ವೇಳೆ ನಮ್ಮನ್ನು ನಿರ್ಲಕ್ಷಿಸಿದ್ದರು. ಪಂಚಮ ಪೀಠಗಳಿಗೆ ನಿಂದನೆ ಮಾಡುತ್ತೀರಿ. ಎತ್ತರ ಕುರ್ಚಿಗಳಲ್ಲಿ ಕುಳಿತುಕೊಳ್ಳುತ್ತೀರಿ ಎಂದು ಆರೋಪ ಮಾಡುತ್ತೀರಿ. ಆದರೆ ನೀವೆ ಎತ್ತರ ಕುರ್ಚಿ ಹಾಕಿಕೊಂಡಿದ್ದೀರಿ . ನೀವು ಸಮನಾದ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಬಬಲೇಶ್ವರದ ಗುರುಪಾದೇಶ್ವರ ಮಠಧ ಪೀಠಾಧಿಪತಿ ಶ್ರೀ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಈ ಹಿಂದೆ ನಡೆದ ಪಂಚಸಾಲಿ ಸಮಾಜಕ್ಕೆ 2ಎ ಮಾನ್ಯತೆಗಾಗಿ ನಡೆದ ಹೋರಾಟದಲ್ಲಿ ನಮಗೆ ಅವಮಾನವಾಗಿತ್ತು. ನಮಗೆ ಯಾವುದೇ ಮಾನ್ಯತೇ ನೀಡದೇ ಕೂಡಲಸಂಗಮ ಪೀಠದ ಸ್ವಾಮೀಜಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದರು. ಹೋರಾಟದ ವೇದಿಕೆಯಲ್ಲಿ ನಮಗೆ ಅವಮಾನ ಮಾಡಿದ್ದರು. ಎರಡೂ ಪೀಠಗಳು ಸಚಿವರನ್ನು ಕರೆಸೋದು ನಡೆದಿದೆ. ಕೂಡಲಸಂಗಮ ಪೀಠವಂತೂ ಪಕ್ಕಾ ರಾಜಕೀಯವಾಗಿದೆ ಎಂದು ಆರೋಪ ಮಾಡಿದ್ದಾರೆ.
ಈ ಒಕ್ಕೂಟದಲ್ಲಿ ಎಲ್ಲರೂ ಸಮಾನರು. ಯಾವುದೇ ಸ್ವಾಮೀಜಿಗಳಿಗೆ ಇಲ್ಲಿ ಎತ್ತರದ ಸ್ಥಾನವಿಲ್ಲ. ಎಲ್ಲರೂ ಸರಿ ಸಮನಾಗಿ ಕುಳಿತುಕೊಳ್ಳುವ ಮೂಲಕ ಏಕತೆ ಸಾಧಿಸುತ್ತಿದ್ದೇವೆ ಎಂದು ಮಹಾದೇವ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ನಮ್ಮ ಒಕ್ಕೂಟದಲ್ಲಿ ಜಗದ್ಗುರುಗಳೆಂಬ ಪದಗಳನ್ನು ಬಿಟ್ಟು ಬಂದವರಿಗೆ ಮಾತ್ರ ಸ್ವಾಗತ ಎಂದು ಕಲಬುರಗಿ ಜಿಲ್ಲೆಯ ನೆಲೋಗಿಯ ವಿರಕ್ತಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ. ಆ ಮೂಲಕ, ಪರೋಕ್ಷವಾಗಿ ಜಗದ್ಗುರುಗಳಿಗೆ ಪ್ರವೇಶವಿಲ್ಲ ಎಂದು ತಿಳಿಸಿದ್ದಾರೆ.
ನಾನು ಮೇಲಿರಬೇಕು, ಇತರರು ಕೆಳಗಿರಬೇಕು ಎನ್ನುವ ಬೇಧ ಭಾವ ಇದ್ದವರಿಗೆ ಇಲ್ಲಿ ಒಂದಿಂಚೂ ಜಾಗವಿಲ್ಲ. ಆ ಮನೋಭಾವ ಇದ್ದರೆ ಅವರು ಇಲ್ಲಿಗೆ ಬರೋದು ಬೇಡ. ಇಲ್ಲಿನ ಒಕ್ಕೂಟಕ್ಕೆ ಎಲ್ಲರಂತೆ ಸಮನಾಗಿ ಸದಸ್ಯರಾಗಿರುತ್ತೇವೆ ಎಂದು ಬಂದರೆ ಆತ್ಮೀಯ ಸ್ವಾಗತ ಮಾಡುತ್ತೇವೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ಮನಗೂಳಿಯ ಹಿರೇಮಠದಲ್ಲಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 20 ಲಕ್ಷ ಜನರನ್ನು ಸೇರಿಸಿ ಪಂಚಮಸಾಲಿ ಮೀಸಲಾತಿಗೆ ಹಕ್ಕೊತ್ತಾಯ: ಜಯಮೃತ್ಯುಂಜಯ ಸ್ವಾಮೀಜಿ
ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗೆ ಆಗ್ರಹ; ಬೇಡಿಕೆ ಈಡೇರಿಸದಿದ್ದರೆ ಅಕ್ಟೋಬರ್ 15ರಿಂದ ಮತ್ತೆ ಹೋರಾಟ