ಪೇಜಾವರ ಶ್ರೀ, ಬಿಕೆ ಹರಿಪ್ರಸಾದ್ ನಡುವೆ ಜಾತಿ ಗಣತಿ ಸಂಘರ್ಷ

ಪೇಜಾವರ ಶ್ರೀಗಳು ಮತ್ತು ಬಿ.ಕೆ. ಹರಿಪ್ರಸಾದ್ ಅವರ ನಡುವೆ ಜಾತಿ ಗಣತಿಯ ಕುರಿತು ತೀವ್ರವಾದ ವಾಗ್ವಾದ ನಡೆದಿದೆ. ಶ್ರೀಗಳು ಜಾತಿ ಗಣತಿಯ ಅಗತ್ಯವನ್ನು ಪ್ರಶ್ನಿಸಿದರೆ, ಹರಿಪ್ರಸಾದ್ ಅವರು ಶ್ರೀಗಳ ಹೇಳಿಕೆಯನ್ನು ಖಂಡಿಸಿ ಪುಡಿ ರಾಜಕಾರಣಿ ಎಂದು ಕರೆದಿದ್ದಾರೆ. ಈ ವಿವಾದವು ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ ಮತ್ತು ಬಿಜೆಪಿ ನಾಯಕರು ಹರಿಪ್ರಸಾದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೇಜಾವರ ಶ್ರೀ, ಬಿಕೆ ಹರಿಪ್ರಸಾದ್ ನಡುವೆ ಜಾತಿ ಗಣತಿ ಸಂಘರ್ಷ
ಬಿಕೆ ಹರಿಪ್ರಸಾದ್​, ಪೇಜಾವರ ಶ್ರೀ

Updated on: Oct 28, 2024 | 12:30 PM

ಬೆಂಗಳೂರು, ಅಕ್ಟೋಬರ್​ 28: ಜಾತಿ ಗಣತಿ ವಿಚಾರವಾಗಿ ಹೇಳಿಕೆ ನೀಡಿದ್ದ ಪೇಜಾವರ ಶ್ರೀಗಳ (Pejawar Swamiji) ವಿರುದ್ಧ ವಿಧಾನ ಪರಿಷತ್​ ಸದಸ್ಯ, ಕಾಂಗ್ರೆಸ್​ ಮುಖಂಡ ಬಿಕೆ ಹರಿಪ್ರಸಾದ್ (BK Hariprasad)​ ಕೇವಲವಾಗಿ ಮಾತನಾಡಿದ್ದರು. ಬಿಕೆ ಹರಿಪ್ರಸಾದ್​ ಅವರ ಹೇಳಿಕೆಗೆ ಖಂಡನೆ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ನಡೆದಿದ್ದಾದರೂ ಏನು? ಪ್ರೇಜಾವರ ಶ್ರೀಗಳು ಮತ್ತು ಬಿಕೆ ಹರಿಪ್ರಸಾದ್ ನೀಡಿರುವ ಹೇಳಿಕೆ ಏನು? ಇಲ್ಲಿದೆ ಮಾಹಿತಿ.

ಜಾತಿ ಗಣತಿ ಯಾಕೆ ಬೇಕು?: ಪೇಜಾವರ ಶ್ರೀ

“ಸರ್ಕಾರ ಹಣ ಖರ್ಚು ಮಾಡಿ ಜಾತಿ ಜನಗಣತಿ ಮಾಡಿ ಮುಚ್ಚಿಟ್ಟಿದೆ. ಜ್ಯಾತ್ಯಾತೀತವಾಗಿರುವ ರಾಷ್ಟ್ರದಲ್ಲಿ ಜಾತಿ ಗಣತಿ ಯಾಕೆ ಬೇಕು?. ಒಂದು ಕಡೆ ಜಾತಿ ಆಧಾರದಲ್ಲಿ ರಾಜಕೀಯ ಬೇಡ ಎನ್ನುತ್ತೀರಿ. ಇನ್ನೊಂದು ಕಡೆ ಜಾತಿ ಗಣತಿ ಎನ್ನುತ್ತೀರಿ ಈ ಜಾತಿ ಗಣತಿ ಯಾಕೆ ಎನ್ನುವುದು ತಿಳಿಯುತ್ತಿಲ್ಲ ಎಂದು ಪೇಜಾವರ ಮಠದ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದರು.

ಪೇಜಾವರ ಶ್ರೀ ಪುಡಿ ರಾಜಕಾರಣಿ: ಹರಿಪ್ರಸಾದ್​​

ಜಾತಿ ಗಣತಿ ಕುರಿತು ಹೇಳಿಕೆ ನೀಡಿರುವ ಪೇಜಾವರ ಶ್ರೀಗಳ ವಿರುದ್ಧ ಕಾಂಗ್ರೆಸ್​ ಮುಖಂಡ ಬಿಕೆ ಹರಿಪ್ರಸಾದ್​ “ಸ್ವಾಮೀಜಿ ಅವರು ಪುಡಿ ರಾಜಕಾರಣಿಗಳಂತೆ ಹೇಳಿಕೆ ನೀಡುತ್ತಿದ್ದಾರೆ. ಈಗಿನ ಸ್ವಾಮೀಜಿ ಅವರು ಅಯೋಧ್ಯೆಯಿಂದ ಹಿಡಿದು ಎಲ್ಲ ವಿಷಯಗಳ ಬಗ್ಗೆ ಹೇಳಿಕೆ ನೀಡುತ್ತಿರುತ್ತಾರೆ. ಜಾತಿ ಗಣತಿ ಬಗ್ಗೆ ಮಾತನಾಡುವ ಸ್ವಾಮೀಜಿ ಅವರು ತಮ್ಮ ಮಠದಲ್ಲಿ ಪಂಕ್ತಿಭೋಜನ ಹಾಗೂ ಮಡೆಸ್ನಾನ ಉತ್ತೇಜನ ನೀಡುತ್ತಾರೆ. ಪೇಜಾವರ ಸ್ವಾಮೀಜಿ ಅವರು ಕಾವಿ ಬಟ್ಟೆ ತ್ಯಜಿಸಿ ಬಂದರೆ ಅವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದರು.

ಇದನ್ನೂ ಓದಿ: ಇಸ್ರೋ ಸಾಧನೆ: ನಾವು ಬಿತ್ತಿರುವ ಬೀಜದ ಮರದ ಹಣ್ಣನ್ನು ಬಿಜೆಪಿಯವರು ತಿನ್ನುತ್ತಿದ್ದಾರೆ; ಬಿಕೆ ಹರಿಪ್ರಸಾದ್​

ಪ್ರಜಾಪ್ರಭುತ್ವ ರಾಷ್ಟ್ರ ಹೌದೋ ಅಲ್ವೋ?: ಪೇಜಾವರ ಶ್ರೀ

ಕಾಂಗ್ರೆಸ್​ ಮುಖಂಡ ಬಿಕೆ ಹರಿಪ್ರಸಾದ್​ ಹೇಳಿಕೆಗೆ ಪೇಜಾವರ ಶ್ರೀಗಳು ತಿರುಗೇಟು ನೀಡಿದ್ದಾರೆ. ನಾವು ಪುಡಿ ರಾಜಕಾರಣ ಮಾಡುತ್ತಿದ್ದೇವೆ ಎನ್ನುತ್ತಾರೆ. ಹಾಗಾದರೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಹೌದೋ ಅಲ್ವೋ ಹೇಳಿ. ಹೌದು ಅಂತಾದ್ರೆ ಮಾತನಾಡುವ ಹಕ್ಕಿದೆ. ಹೀಗಿರುವಾಗ ಕಾವಿ ತೆಗೆದಿಟ್ಟು ಬಂದರೆ ಉತ್ತರ ಕೊಡುತ್ತೇವೆ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅಲ್ಲದೇ, ನಾವು ಜ್ಯಾತ್ಯಾತೀತರು ಎನ್ನುವವರೇ ಎಲ್ಲ ವಲಯದಲ್ಲೂ ಜಾತಿ ವ್ಯವಸ್ಥೆಯನ್ನು ಪೋಷಿಸಿಸುತ್ತಿದ್ದಾರೆ. ಜಾತಿ ವ್ಯವಸ್ಥೆ ಅನಿಷ್ಟಗಳಿಗೆ ಮೂಲಕ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾತಿ ಗಣತಿ ವಿಚಾರವಾಗಿ ಕಾಂಗ್ರೆಸ್​ ಮುಖಂಡ ಬಿಕೆ ಹರಿಪ್ರಸಾದ್​ ಮತ್ತು ಪೇಜಾವರ ಶ್ರೀಗಳ ನಡುವೆ ವಾಗ್ಯುದ್ದ ನಡೆಯುತ್ತಿದೆ. ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಬಿಕೆ ಹರಿಪ್ರಸಾದ್​ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ನಾಯಕರು ಬಿಕೆ ಹರಿಪ್ರಸಾದ್​ ವಿರುದ್ಧ ಹರಿಹಾಯ್ದಿದ್ದಾರೆ.

ಪೇಜಾವರ ಶ್ರೀಗಳ ವಿರುದ್ಧ ಬಿಕೆ ಹರಿಪ್ರಸಾದ್ ನೀಡಿರುವ ಹೇಳಿಕೆ ಖಂಡಿಸಿ ಬಾಗಲಕೋಟೆಯಲ್ಲಿ ಬ್ರಾಹ್ಮಣ ಸಮಾಜದವರು ಪ್ರತಿಭಟನೆ ನಡೆಸಿದರು. ಬಿಕೆ ಹರಿಪ್ರಸಾದ್​ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:29 pm, Mon, 28 October 24