AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಗಿಗಳ ನೆರವಿಗೆ ನಿಂತ ವೈದ್ಯರ ತಂಡ; ಕೊರೊನಾ ಸೋಂಕು ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ಮನೆಯಲ್ಲೇ ಸೂಕ್ತ ಚಿಕಿತ್ಸೆ

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಬಡ ಜನರಿಗೆ ಉಚಿತ ಸೇವೆ ನೀಡಿದ್ದು, ಈ ತಂಡ ಆಸ್ಪತ್ರೆಗಳಿಗೆ ತೆರಳಲು ಆಗದ ವಯೋವೃದ್ಧರ ಮನೆಗಳಿಗೆ ತೆರಳಿ ಅಗತ್ಯ ಚಿಕಿತ್ಸೆ ನೀಡಿ ಗಮನ ಸೆಳೆದಿತ್ತು. ಇದೀಗ ಮತ್ತೆ ತುರ್ತು ಅನಿವಾರ್ಯತೆ ಬಂದಿದೆ. ಒಂದು ಕಡೆ ಕೊರೊನಾ ಹೆಚ್ಚುತ್ತಿರುವ ಆತಂಕ ಕಂಡು ಬರುತ್ತಿದ್ದರೆ, ಇನ್ನೊಂದು ಕಡೆಗೆ ಮಧುಮೇಹ, ರಕ್ತದೊತ್ತಡ ಸೇರಿ ಇತರ ಕಾಯಿಲೆಗಳಿಂದ ಬಳಲುತ್ತಿರುವ ಜನರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ರೋಗಿಗಳ ನೆರವಿಗೆ ನಿಂತ ವೈದ್ಯರ ತಂಡ; ಕೊರೊನಾ ಸೋಂಕು ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ಮನೆಯಲ್ಲೇ ಸೂಕ್ತ ಚಿಕಿತ್ಸೆ
ಮನೆಗೆ ತೆರಳಿ ಚಿಕಿತ್ಸೆ ನಿಡುತ್ತಿರುವ ವೈದ್ಯರು
Follow us
preethi shettigar
|

Updated on: May 16, 2021 | 11:12 AM

ಧಾರವಾಡ: ದಿನದಿಂದ ದಿನಕ್ಕೆ ಕೊರೊನಾ ಹಾವಳಿ ಹೆಚ್ಚುತ್ತಲೇ ಇದೆ. ಒಂದು ಕಡೆ ಕೊರೊನಾ ಸೋಂಕಿತರಿಗೆ ಬೆಡ್​ಗಳ ಸಮಸ್ಯೆ ಹೆಚ್ಚುತ್ತಿದ್ದರೆ, ಮತ್ತೊಂದು ಕಡೆ ಆಮ್ಲಜನಕದ ಸಮಸ್ಯೆಯೂ ಹೆಚ್ಚುತ್ತಿದೆ. ಇದೆಲ್ಲದರ ಮಧ್ಯೆ ಕಾಡುತ್ತಿರುವ ಮತ್ತೊಂದು ಸಮಸ್ಯೆ ಎಂದರೆ ಅನ್ಯ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದಾಗ ಅಂತಹ ರೋಗಿಗಳು ಪರದಾಡುವಂತಾಗಿದೆ. ಈ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಲು ವಿದ್ಯಾಕಾಶಿ ಧಾರವಾಡದ ವೈದ್ಯರ ತಂಡ ಪ್ರಯತ್ನಿಸುತ್ತಿದ್ದು, ಇವರ ಕಾರ್ಯಕ್ಕೆ ಜನ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಲಾಕ್‍ಡೌನ್ ಘೋಷಣೆಯಾದಾಗ ಎಲ್ಲ ಕಡೆಯಂತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿಯೂ ಜನರಿಗೆ ಆರೋಗ್ಯ ಸಮಸ್ಯೆ ಉಲ್ಬಣವಾಗಿತ್ತು. ಏಕೆಂದರೆ ಲಾಕ್​ಡೌನ್​ನಿಂದಾಗಿ ಜನರು ಮನೆಯಿಂದ ಹೊರಗೆ ಬರುವಂತೆ ಇರಲಿಲ್ಲ. ಈ ವೇಳೆ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವ ಜನರು ತೀವ್ರ ಸಮಸ್ಯೆಗೆ ಸಿಲುಕಿದ್ದರು. ಇದನ್ನು ಗಮನಿಸಿದ ಚಿರಾಯು ಹೆಲ್ತ್ ಹಾಗೂ ಯಶಸ್ವಿನಿ ಕ್ಲಿನಿಕ್ ಸಹಯೋಗದಲ್ಲಿ ವೈದ್ಯ ಡಾ. ಅನಿರುದ್ಧ ಕುಲಕರ್ಣಿ, ಲ್ಯಾಬ್ ಟೆಕ್ನಿಷಿಯನ್ ಹರೀಶ ಸಾಳುಂಕೆ ಸೇರಿ ಒಟ್ಟು 8 ಜನರ ತಂಡ ಉಚಿತ ಸೇವೆಗೆ ಮುಂದಾಯಿತು.

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಬಡ ಜನರಿಗೆ ಉಚಿತ ಸೇವೆ ನೀಡಿದ್ದು, ಈ ತಂಡ ಆಸ್ಪತ್ರೆಗಳಿಗೆ ತೆರಳಲು ಆಗದ ವಯೋವೃದ್ಧರ ಮನೆಗಳಿಗೆ ತೆರಳಿ ಅಗತ್ಯ ಚಿಕಿತ್ಸೆ ನೀಡಿ ಗಮನ ಸೆಳೆದಿತ್ತು. ಇದೀಗ ಮತ್ತೆ ತುರ್ತು ಅನಿವಾರ್ಯತೆ ಬಂದಿದೆ. ಒಂದು ಕಡೆ ಕೊರೊನಾ ಹೆಚ್ಚುತ್ತಿರುವ ಆತಂಕ ಕಂಡು ಬರುತ್ತಿದ್ದರೆ, ಇನ್ನೊಂದು ಕಡೆಗೆ ಮಧುಮೇಹ, ರಕ್ತದೊತ್ತಡ ಸೇರಿ ಇತರ ಕಾಯಿಲೆಗಳಿಂದ ಬಳಲುತ್ತಿರುವ ಜನರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಬಹುತೇಕ ಆಸ್ಪತ್ರೆಗಳಲ್ಲಿ ಕೊವಿಡ್ ರೋಗಿಗಳಿಗೆ ಆದ್ಯತೆ ನೀಡುವುದರಿಂದ ಇತರ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುವಲ್ಲಿ ವಿಳಂಬವಾಗುತ್ತಿದೆ. ಇದನ್ನು ಮನಗಂಡು ಮನೆ ಮನೆಗೆ ತೆರಳಿ ಚಿಕಿತ್ಸೆ ನೀಡಲು ನಿರ್ಧರಿಸಿದ್ದೇವೆ. ಇದರ ಜತೆ ಜತೆಗೆ ಕೊವಿಡ್‍ನಿಂದ ಬಳುತ್ತಿರುವವರಿಗೆ ಬೇಕಾದ ಪ್ಲಾಸ್ಮಾ ಒದಗಿಸುವ ಕೆಲಸ, ರೋಗದ ಲಕ್ಷಣ ಇಲ್ಲದೆ ಹೋಂ ಐಸೋಲೇಷನ್‍ನಲ್ಲಿ ಇರುವ ಜನರ ಆರೋಗ್ಯ ತಪಾಸಣೆ ನಡೆಸಿ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ವೈದ್ಯ ಡಾ. ಅನಿರುದ್ಧ ಕುಲಕರ್ಣಿ ಹೇಳಿದ್ದಾರೆ.

ಆರಂಭದ ದಿನಗಳಲ್ಲಿ ಚಿಕಿತ್ಸೆ ಅಗತ್ಯ ಇರುವವರು ಸಂಪರ್ಕಿಸಬಹುದು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಮನವಿ ಮಾಡಿದ್ದರು. ಇದರಿಂದ ನಿತ್ಯ ಹತ್ತಾರು ಕರೆಗಳು ಬರಲಾರಂಭಿಸಿದವು. ಅಲ್ಲದೇ ಜನರ ಮನೆ ಮನೆಗೆ ಹೋಗಿ ಅವರಿಗೆ ಉಪಚಾರ ನೀಡಿದ್ದರಿಂದ ಜನರು ಕೂಡ ಖುಷಿಯಾಗಿದ್ದರು. ಎಷ್ಟೋ ಜನರು ವೈಯಕ್ತಿಕವಾಗಿ ಈ ತಂಡದ ಸದಸ್ಯರಿಗೆ ಫೋನ್ ಮಾಡಿ, ಸೇವೆಗೆ ಧನ್ಯವಾದ ಸಲ್ಲಿಸಿದ್ದರು. ಇದರಿಂದಾಗಿ ಮತ್ತಷ್ಟು ಸೇವೆಯನ್ನು ಮಾಡಲು ಉತ್ಸಾಹ ಪಡೆದ ತಂಡ, ನಿರಂತರವಾಗಿ ಸೇವೆಯನ್ನು ಮುಂದುವರೆಸಿತು.

ಕಳೆದ ವರ್ಷ ಹೀಗೆ ಸಮಾಜ ಸೇವೆ ಎಂದು ಆರಂಭವಾದ ಕಾರ್ಯ ಕೊರೊನಾದ ಎರಡನೇ ಅಲೆಯಲ್ಲೂ ಕೂಡ ಮುಂದುವರೆದಿದೆ. ಮನೆಗಳಿಗೆ ಆಗಮಿಸಿ ರೋಗಿಯ ಆರೈಕೆ ಮಾಡಿದರೆ ಆಸ್ಪತ್ರೆಗಿಂತ ಹೆಚ್ಚಿನ ಹಣ ಪಡೆಯುವುದು ಸಾಮಾನ್ಯ. ಆದರೆ ಈ ತಂಡ ಔಷಧೀಯ ವೆಚ್ಚ ಮಾತ್ರ ಪಡೆದು ಸೇವೆ ನೀಡುವ ಮೂಲಕ ಜನ ಸಾಮಾನ್ಯರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇತ್ತೀಚಿಗೆ ಧಾರವಾಡದ ಕೆಲಗೇರಿ ಬಡಾವಣೆಯ 45 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಈ ಸೋಂಕಿತನಿಗೆ ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಹೋದರೆ ಅಲ್ಲಿ ಬೆಡ್​ಗಳೇ ಲಭ್ಯ ಇರಲಿಲ್ಲ. ಕೂಡಲೇ ಈ ತಂಡಕ್ಕೆ ಮಾಹಿತಿ ನೀಡಿದಾಗ, ಸೋಂಕಿತರ ಮನೆಗೆ ತೆರಳಿದ ತಂಡ ಎಲ್ಲ ಪರೀಕ್ಷೆ ನಡೆಸಿತು. ವೈದ್ಯರೊಬ್ಬರ ಮನೆಯಲ್ಲಿದ್ದ ಆಕ್ಸಿಜನ್ ಸಿಲೆಂಡರ್​ನ್ನು ಕೂಡಲೇ ತಂದು, ಚಿಕಿತ್ಸೆ ಆರಂಭಿಸಲಾಯಿತು.

ಬಳಿಕ ವಿವಿಧ ರಕ್ತ ಪರೀಕ್ಷೆ ಮಾಡಿಸಿ, ಸೂಕ್ತ ಚಿಕಿತ್ಸೆ ನೀಡಲಾಯಿತು. ನಾಲ್ಕು ದಿನಗಳ ಚಿಕಿತ್ಸೆ ನಂತರ ಮೂರು ದಿನಗಳ ಕ್ವಾರಂಟೈನ್ ಮಾಡಲಾಗಿ, ಇದೀಗ ಆ ಸೋಂಕಿತ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. ಒಂದು ವೇಳೆ ಆರಂಭದ ಹಂತದಲ್ಲಿ ಈ ತಂಡದ ಚಿಕಿತ್ಸೆ ಸಿಗದೇ ಇದ್ದರೆ ಆ ವ್ಯಕ್ತಿ ತುಂಬಾನೇ ಸಮಸ್ಯೆಗೆ ಸಿಲುಕುವುದು ಖಚಿತವಾಗುತ್ತಿತ್ತು. ಇಂಥ ಅನೇಕ ಘಟನೆಗಳಿಗೆ ಈ ತಂಡ ಸಾಕ್ಷಿಯಾಗಿದೆ. ಒಟ್ಟಿನಲ್ಲಿ ಒಂದು ಕಡೆ ಖಾಸಗಿ ಆಸ್ಪತ್ರೆಗಳು ಕೊರೊನಾ ಹೆಸರಲ್ಲಿ ಲೂಟಿಗೆ ನಿಂತಿದ್ದರೆ, ಮತ್ತೊಂದು ಕಡೆ ಇಂಥ ನಿಸ್ವಾರ್ಥಿಗಳು ತಮ್ಮದೇ ಆದ ರೀತಿಯಲ್ಲಿ ಸೇವೆ ನೀಡುತ್ತಿರೋದು ಸಮಾಧಾನದ ಸಂಗತಿಯೇ ಸರಿ.

ಇದನ್ನೂ ಓದಿ: 

ಕೊರೊನಾ ಸೋಂಕಿತರಿಗಾಗಿ ಸ್ವತಃ ಇಡ್ಲಿ ತಯಾರಿಸಿದ ಎಂ.ಪಿ ರೇಣುಕಾಚಾರ್ಯ