ಬೆಂಗಳೂರು: ಇಂದು ದೇಶದ ಜನರಿಗೆ ಹಣದ ಅವಶ್ಯಕತೆಯಿದೆ. ಪ್ರಧಾನಿ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಅನ್ನು ಮರುಪರಿಗಣಿಸಬೇಕು. ಮನ್ರೇಗಾದ ಕೂಲಿ ಅವಧಿ 200 ದಿನಗಳಿಗೆ ಏರಿಸಬೇಕು. ರೈತರಿಗೆ ನೇರವಾಗಿ ನಗದು ವರ್ಗಾವಣೆ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ದೇಶದಲ್ಲಿ ಎದುರಾಗಿರುವ ಕೊರೊನಾ ಬಿಕ್ಕಟ್ಟಿನ ಕುರಿತು ಪ್ರಾದೇಶಿಕ ಸುದ್ದಿವಾಹಿನಿಗಳ ಹಿರಿಯ ಪತ್ರಕರ್ತರ ಜತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಡಿಯೋ ಸಂವಾದ ನಡೆಸಿದರು. ಸಂವಾದದಲ್ಲಿ ಟಿವಿ9 ಕನ್ನಡ ಸುದ್ದಿವಾಹಿನಿಯ ಚೀಫ್ ಪ್ರೊಡ್ಯೂಸರ್ ರಂಗನಾಥ್ ಭಾರದ್ವಾಜ್ ಸಹ ಭಾಗಿಯಾಗಿದ್ದರು. ಈ ವೇಳೆ ರಾಹುಲ್ ಗಾಂಧಿ ಮತ್ತು ರಂಗನಾಥ್ ಭಾರದ್ವಾಜ್ ನಡುವಣ ವಿಡಿಯೋ ಸಂವಾದ ಹೀಗಿತ್ತು:
ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಒತ್ತಾಯ:
ಇಂದು ದೇಶದ ಜನರಿಗೆ ಹಣ ಬೇಕಾಗಿದೆ. ರೈತರಿಗೆ ಮತ್ತು ವಲಸಿಗರಿಗೆ ಸಾಲ ಕೊಡಬಾರದು, ಅವರಿಗೆ ನೇರ ನಗದು ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಈ ಪ್ಯಾಕೇಜ್ ಅನ್ನು ಮರುಪರಿಗಣಿಸಬೇಕು. ಜನರಿಗೆ ನೇರ ನಗದು ವರ್ಗಾವಣೆ ಮಾಡಬೇಕು. ನರೇಗಾದ ಕೂಲಿ ಅವಧಿಯನ್ನು 200 ದಿನಗಳಿಗೆ ಏರಿಕೆ ಮಾಡಬೇಕು.
ಜನರಿಗೆ ನೇರವಾಗಿ ಹಣ ನೀಡದಿರಲು ರೇಟಿಂಗ್ ಕಾರಣ ಎಂದು ಕೇಳಲ್ಪಟ್ಟಿದ್ದೇನೆ. ಏಜೆನ್ಸಿಗಳು ನೀಡುವ ರೇಟಿಂಗ್ ಬಗ್ಗೆ ಕೇಂದ್ರ ಸರ್ಕಾರ ಚಿಂತೆ ಮಾಡಬಾರದು. ಸಾಹುಕಾರರ ರೀತಿ ಕೇಂದ್ರ ಕೆಲಸ ಮಾಡಬಾರದು. ಜನರಿಗೆ ಸಾಲ ನೀಡಬಾರದು. ನೇರವಾಗಿ ಜನರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬೇಕು ಎಂದು ಪ್ರಾದೇಶಿಕ ಸುದ್ದಿವಾಹಿನಿ ಮುಖ್ಯಸ್ಥರ ಜೊತೆಗಿನ ಸಂವಾದದಲ್ಲಿ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
Published On - 7:19 pm, Sat, 16 May 20