ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 23 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,079ಕ್ಕೆ ಏರಿಕೆಯಾಗಿದೆ. ಬೆಂಗಳೂರು 14, ಹಾಸನ 3, ಧಾರವಾಡ 1, ಉಡುಪಿ 1, ಮಂಡ್ಯ 1, ದಾವಣಗೆರೆ 1, ಬಳ್ಳಾರಿ 1, ಬಾಗಲಕೋಟೆ ಜಿಲ್ಲೆಯಲ್ಲಿ 1 ಕೇಸ್ ಪತ್ತೆಯಾಗಿದೆ.
653ನೇ ಸೋಂಕಿತನಿಂದ ಒಟ್ಟು 30 ಜನರಿಗೆ ಸೋಂಕು: ರಾಜಧಾನಿ ಬೆಂಗಳೂರಿನಲ್ಲಿ 14 ಜನರಿಗೆ ಕೊರೊನಾ ಸೋಂಕು ಅಟ್ಯಾಕ್ ಆಗಿದ್ದು, ಹೌಸ್‌ಕೀಪರ್ ಜತೆ ದ್ವಿತೀಯ ಸಂಪರ್ಕದಲ್ಲಿದ್ದವರಿಗೆ ಸೋಂಕು ದೃಢಪಟ್ಟಿದೆ. 653ನೇ ಸೋಂಕಿತನ ಸಂಪರ್ಕದಿಂದ ಶಿವಾಜಿನಗರದಲ್ಲಿದ್ದ 14 ಜನರಿಗೆ ವೈರಸ್ ವಕ್ಕರಿಸಿದೆ. 653ನೇ ಸೋಂಕಿತನಿಂದ ಈವರೆಗೆ ಒಟ್ಟು 30 ಜನರಿಗೆ ಸೋಂಕು ತಗುಲಿದೆ.
1,079 ಕೊರೊನಾ ಸೋಂಕಿತರ ಪೈಕಿ 494 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ 36 ಜನರು ಬಲಿಯಾಗಿದ್ದು, 548 ಜನರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.