ಕಲಬುರಗಿ, ಮಂಗಳೂರು ಸೇರಿದಂತೆ ದೇಶದ 10 ವಂದೇ ಭಾರತ ರೈಲಿಗೆ ಪ್ರಧಾನಿ ಮೋದಿ ಚಾಲನೆ, ಇಲ್ಲಿದೆ ವೇಳಾಪಟ್ಟಿ
ರಾಜ್ಯದಲ್ಲಿ ಮತ್ತೇರಡು ವಂದೇ ಭಾರತ್ ರೈಲುಗಳು ಸಂಚಾರ ಆರಂಭಿಸಿವೆ. ಹೌದು ಬೆಂಗಳೂರು-ಕಲಬುರಗಿ ಮಧ್ಯೆ ಸಂಚರಿಸುವ ಮತ್ತು ಮಂಗಳೂರು ಸೆಂಟ್ರಲ್ ತನಕ ವಿಸ್ತರಿಸಲಾಗಿರುವ ಕಾಸರಗೋಡು-ತಿರುವನಂತಪುರಂ ನಡುವಿನ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ಕಲಬುರಗಿ/ಮಂಗಳೂರು ಮಾರ್ಚ್ 12: ರಾಜ್ಯದ ಮತ್ತೇರಡು ವಂದೇ ಭಾರತ್ ರೈಲುಗಳಿಗೆ (Vande Bharat Train) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಾ.12) ಗುಜರಾತ್ನ ಅಹಮದಾಬಾದ್ನಿಂದಲೇ ವರ್ಚುವಲ್ ಮೂಲಕ ಕರ್ನಾಟಕದ (Karnataka) ಸೇರಿದಂತೆ ದೇಶದ 10 ವಂದೇ ಭಾರತ್ ರೈಲುಗಳಿಗೆ ಮತ್ತು ರೈಲ್ವೆ ಇಲಾಖೆ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು. ಈ 10 ರೈಲುಗಳಲ್ಲಿ ಬೆಂಗಳೂರು-ಕಲಬುರಗಿ (Bengaluru-Kalaburagi) ಮಧ್ಯೆ ಸಂಚರಿಸುವ ಮತ್ತು ಮಂಗಳೂರು ಸೆಂಟ್ರಲ್ ತನಕ ವಿಸ್ತರಿಸಲಾಗಿರುವ ಕಾಸರಗೋಡು-ತಿರುವನಂತಪುರಂ (Kasaragod-Thiruvananthapuram) ನಡುವಿನ ವಂದೇ ಭಾರತ್ ರೈಲುಗಳು ಸೇರಿವೆ.
ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು
ಬೆಂಗಳೂರು-ಕಲಬುರಗಿ ನಡುವಿನ ನೂತನ ವಂದೇ ಭಾರತ್ ರೈಲು ಸಂಚಾರ ಇಂದಿನಿಂದ ಆರಂಭವಾಗುವ ಮೂಲಕ ಆ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಈ ರೈಲು ಕಲಬುರಗಿ ಮತ್ತು ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಸಂಚರಿಸುತ್ತದೆ. ಕಲಬುರಗಿ-ಎಸ್‌ಎಂವಿ ಬೆಂಗಳೂರು ನಡುವೆ ರೈಲು ಸಂಖ್ಯೆ 22231 ಮತ್ತು ಎಸ್‌ಎಂವಿ ಬೆಂಗಳೂರು-ಕಲಬುರಗಿ ನಡುವೆ ರೈಲು ಸಂಖ್ಯೆ 22232 ಗುರುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳ ಕಾಲ ಸಂಚಾರ ನಡೆಸಲಿದೆ.
ರೈಲು ವೇಳಾಪಟ್ಟಿ
ಪ್ರತಿನಿತ್ಯ ಬೆಳಿಗ್ಗೆ 5.15 ಕ್ಕೆ ಕಲಬುರಗಿಯಿಂದ ಹೊರಟು ಮಧ್ಯಾಹ್ನ 12.45 ಕ್ಕೆ ಬೆಂಗಳೂರು ತಲುಪಲಿದೆ. ಮಧ್ಯಾಹ್ನ 3.15ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 11.30 ಕ್ಕೆ ಕಲಬುರಗಿಗೆ ತಲುಪಲಿದೆ.
ಇದನ್ನೂ ಓದಿ: Vande Bharat Express: ಮೈಸೂರು ಚೆನ್ನೈ ಮಧ್ಯೆ ಮತ್ತೊಂದು ವಂದೇ ಭಾರತ್ ಎಕ್ಸ್ಪ್ರೆಸ್, ವೇಳಾಪಟ್ಟಿ ಇಲ್ಲಿದೆ
ಯಾದಗಿರಿಯಲ್ಲಿ ನಿಲುಗಡೆ ಇಲ್ಲ
ಬೆಂಗಳೂರು-ಕಲಬುರಗಿ ನಡುವಿನ ನೂತನ ವಂದೇ ಭಾರತ್ ರೈಲು ಯಾದಗಿರಿಯಲ್ಲಿ ನಿಲ್ಲುವುದಿಲ್ಲ ಎಂಬುದು ಜಿಲ್ಲೆಯ ಜನರ ಬೇಸರಕ್ಕೆ ಕಾರಣವಾಗಿದೆ. ಯಾದಗಿರಿ ಜಿಲ್ಲೆಯಾಗಿ 14 ವರ್ಷ ಕಳೆದಿದೆ. ಆದರೆ ಇಂದಿಗೂ ಸಹ 8 ರಿಂದ 10 ಪ್ರಮುಖ ರೈಲುಗಳು ನಿಲುಗಡೆಗೊಳ್ಳುತ್ತಿಲ್ಲ. ಈಗ ವಂದೇ ಭಾರತ್ ಸಹ ನಿಲುಗಡೆ ಇಲ್ಲ.
ಮಂಗಳೂರಿಗೆ ಮತ್ತೊಂದು ವಂದೇ ಭಾರತ್
ಕಳೆದ ವರ್ಷ ಡಿಸೆಂಬರ್ನಲ್ಲಿ ಪ್ರಧಾನಿ ಮೋದಿಯವರು ಮಂಗಳೂರು-ಗೋವಾ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದರು. ಇದೀಗ ಕಾಸರಗೋಡು-ತಿರುವನಂತಪರ ವಂದೇ ಭಾರತ್ ರೈಲು ಮಂಗಳೂರು ಸೆಂಟ್ರಲ್ವರೆಗು ವಿಸ್ತರಣೆಯಾಗಿದ್ದು, ಈ ರೈಲಿಗೂ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮನವಿ ಮೇರೆಗೆ ವಿಸ್ತರಣೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಆರಂಭಿಸಿರುವ ಒನ್ ಸ್ಟೇಷನ್-ಒನ್ ಪ್ರಾಡಕ್ಟ್ ಮಳಿಗೆಗೂ ಚಾಲನೆ ನೀಡಿದರು
ರೈಲಿನ ವೇಳಾಪಟ್ಟಿ
ಮಂಗಳೂರು-ತಿರುವನಂತಪುರಂ ನಡುವಿನ ವಂದೇ ಭಾರತ್ ರೈಲು ಬುಧವಾರ ಹೊರತು ಪಡಿಸಿ ವಾರ ಆರು ದಿನ ಸಂಚರಿಸಲಿದೆ. ಮಂಗಳೂರಿನಿಂದ ಬೆಳಗ್ಗೆ 6.15ಕ್ಕೆ ಹೊರಟು ಮಧ್ಯಾಹ್ನ 3.05ಕ್ಕೆ ತಿರುವನಂತಪುರ ತಲುಪಲಿದೆ. ಹಾಗೆಯೇ ತಿರುವನಂತಪುರದಿಂದ ಸಂಜೆ 4.05ಕ್ಕೆ ಹೊರಟು ರಾತ್ರಿ 12.40ಕ್ಕೆ ಮಂಗಳೂರು ತಲುಪಲಿದೆ.
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ
ಇನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪ್ರಾರಂಭಿಸಲಾಗಿರುವ ಜನೌಷಧಿ ಕೇಂದ್ರ, ಒನ್ ಸ್ಟೇಷನ್-ಒನ್ ಪ್ರಾಡಕ್ಟ್ ಮಳಿಗೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಹಾಗೇ ಡೆಮೋ-ಮೆಮೊ ಲೋಕೋ ಶೆಡ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ ಚಂದ್ ಗೆಹಲೊಟ್, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಶಾಸಕ ಮಹೇಶ್ ಟೆಂಗಿನಕಾಯಿ, ಮೇಯರ್ ವೀಣಾ ಭರದ್ವಾಡ ಉಪಸ್ಥಿತರಿದ್ದರು.
ಬಾಗಲಕೋಟೆ-ಗದಗ ಜೋಡಿ ಮಾರ್ಗ
ಬಾಗಲಕೋಟೆ-ಗದಗ ಜೋಡಿ ಮಾರ್ಗ ಹಾಗೂ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಪ್ರಾರಂಭಿಸಲಾಗಿರುವ ಒನ್ ಸ್ಟೇಷನ್-ಒನ್ ಪ್ರಾಡಕ್ಟ್ ಮಳಿಗೆಯನ್ನೂ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಬಾಗಲಕೋಟೆ ಸಂಸದ ಪಿ ಸಿ ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ಜಿಲ್ಲಾಧಿಕಾರಿ ಕೆ ಎಮ್ ಜಾನಕಿ ಸೇರಿದಂತೆ ರೇಲ್ವೆ ಅಧಿಕಾರಿಗಳು ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ