Aero India 2023 ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ; ಐದು ದಿನಗಳ ಕಾಲ ಬೆಂಗಳೂರಿನ ಆಗಸದಲ್ಲಿ ಮಿಂಚು

Yelahanka Air Base Hosts Aero India Show: 14ನೇ ಆವೃತ್ತಿಯ ಏರೋ ಇಂಡಿಯಾ ಶೋಗೆ ಪ್ರಧಾನಿ ಮೋದಿ ಇಂದು ಸೋಮವಾರ ಚಾಲನೆ ನೀಡಿದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Aero India 2023 ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ; ಐದು ದಿನಗಳ ಕಾಲ ಬೆಂಗಳೂರಿನ ಆಗಸದಲ್ಲಿ ಮಿಂಚು
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Feb 13, 2023 | 9:41 AM

ಬೆಂಗಳೂರು: 14ನೇ ಆವೃತ್ತಿಯ ಏರೋ ಇಂಡಿಯಾ ಶೋಗೆ ಪ್ರಧಾನಿ ಮೋದಿ ಇಂದು ಸೋಮವಾರ ಚಾಲನೆ ನೀಡಿದರು. ಯಲಹಂಕದ ವಾಯುನೆಲೆಯಲ್ಲಿ ಐದು ದಿನಗಳ ಕಾಲ ನಡೆಯುವ ಏರೋ ಇಂಡಿಯಾ ಶೋ ಅನ್ನು ಪ್ರಧಾನಿಗಳು ಉದ್ಘಾಟನೆ ಮಾಡಿದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಧಾನಿಗಳು ಭಾರತದ ರಕ್ಷಣಾ ಪಡೆಗಳ ವಿಶೇಷ ಟೊಪ್ಪಿಯನ್ನು ಧರಿಸಿ ಬಂದಿದ್ದು ವಿಶೇಷ.

ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ಚಾಲನೆ ಕೊಡುತ್ತಲೇ ಸಾರಂಗ್ ಹೆಲಿಕಾಪ್ಟರ್ ಇತ್ಯಾದಿ ಯುದ್ಧವಿಮಾನಗಳು ವಿವಿಧ ರಚನೆಗಳಲ್ಲಿ ಆಗಸದಲ್ಲಿ ಪ್ರದರ್ಶನ ನೀಡಿದವು.

ಭಾರತದ ಈ ಹೆಮ್ಮೆಯ ರಕ್ಷಣಾ ಮತ್ತು ವೈಮಾನಿಕ ಪ್ರದರ್ಶನದಲ್ಲಿ ಬರೋಬ್ಬರಿ 98 ದೇಶಗಳು ಪಾಲ್ಗೊಳ್ಳುತ್ತಿವೆ. ನಿನ್ನೆ ಭಾನುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದರು. ಏರೋ ಇಂಡಿಯಾ ಶೋನಲ್ಲಿ ಕೇವಲ ವೈಮಾನಿಕ ಶಕ್ತಿ ಪ್ರದರ್ಶನ ಮಾತ್ರವಲ್ಲ ವಿಶ್ವಾದ್ಯಂತ ರಕ್ಷಣಾ ಕ್ಷೇತ್ರಗಳ 809 ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಡುತ್ತಿವೆ. ಅದಕ್ಕಾಗಿ ಯಲಹಂಕದ ಐಎಎಫ್ ನಿಲ್ದಾಣದಲ್ಲಿ 35 ಸಾವಿರ ಚದರ ಮೀಟರ್ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ.

ನಾಳೆ ಮಂಗಳವಾರ 32 ದೇಶಗಳ ರಕ್ಷಣಾ ಸಚಿವರುಗಳು ಸಭೆಯೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. 29 ದೇಶಗಳ ವಾಯುಪಡೆ ಮುಖ್ಯಸ್ಥರು ಕಾರ್ಯಕ್ರಮಕ್ಕೆ ಬರಲಿದ್ದಾರೆ. ರಕ್ಷಣಾ ಕ್ಷೇತ್ರಗಳ ಜಾಗತಿಕ ಕಂಪನಿಗಳ ಸಿಇಒಗಳ ದುಂಡುಮೇಜಿನ ಸಭೆ ನಡೆಯಲಿದೆ. ಒಟ್ಟು 73 ಸಿಇಒಗಳು ಈ ಸಭೆಯಲ್ಲಿ ಪಾಲ್ಗೊಳ್ಳಬಹುದು. ಬೋಯಿಂಗ್, ಲಾಕ್​ಹೀಡ್ ಮಾರ್ಟೀನ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್, ಜನರಲ್ ಅಟಾಮಿಕ್ಸ್, ಲೀಬೆರ್ ಗ್ರೂಪ್, ರೇಥಿಯಾನ್ ಟೆಕ್ನಾಲಜೀಸ್, ಸಫ್ರಾನ್, ಜನರಲ್ ಅಥಾರಿಟಿ ಆಫ್ ಮಿಲಿಟರಿ ಇಂಡಸ್ಟ್ರೀಸ್ (ಗಾಮಿ) ಮೊದಲಾದ ಜಾಗತಿಕ ಕಂಪನಿಗಳು ಪಾಲ್ಗೊಳ್ಳುತ್ತಿವೆ. ಭಾರತದ ರಕ್ಷಣಾ ಕ್ಷೇತ್ರದ ಕಂಪನಿಗಳಾದ ಎಚ್​ಎಎಲ್, ಬಿಇಎಲ್, ಬಿಡಿಎಲ್, ಬೆಮೆಲ್, ಮಿಶ್ರ ಧಾತು ನಿಗಮ್ ಮೊದಲಾದ ಕಂಪನಿಗಳೂ ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಡುತ್ತಿವೆ.

ಇದನ್ನೂ ಓದಿ: Sir MV- ಏರೋ ಇಂಡಿಯಾ ಶೋ ವಿಶ್ವೇಶ್ವರಯ್ಯಗೆ ಅರ್ಪಣೆ; ದೊಡ್ಡ ದೊಡ್ಡ ಒಪ್ಪಂದಗಳಾಗುವ ನಿರೀಕ್ಷೆ

ಒಂದು ಅಂದಾಜು ಪ್ರಕಾರ ಈ ಬಾರಿಯ ಏರೋ ಇಂಡಿಯಾ ಶೋ ವೇಳೆ 251 ಒಪ್ಪಂದಗಳಾಗುವ (MoU) ಸಾಧ್ಯತೆ ಇದೆ. ಇದೇನಾದರೂ ನೆರವೇರಿದಲ್ಲಿ 75 ಸಾವಿರ ಕೋಟಿ ರುನಷ್ಟು ಬಂಡವಾಳವು ಭಾರತದ ಆರ್ಥಿಕತೆಗೆ ಬರಲಿದೆ. ಹೆಚ್​ಎಎಲ್​ಗೆ ಹಲವು ಒಪ್ಪಂದಗಳು ಸಿಗುವ ನಿರೀಕ್ಷೆ ಇದೆ. ಇನ್ನೊಂದು ವರದಿ ಪ್ರಕಾರ ವಿಶ್ವದ ಅತ್ಯಂತ ಪ್ರಬಲ ಸ್ಟೀಲ್ತ್ ಫೈಟರ್ ಎನಿಸಿದ ಅಮೆರಿಕದ ಎಫ್-35 ಯುದ್ಧವಿಮಾನ ಯಲಹಂಕ ಆಗಸದಲ್ಲಿ ಪ್ರದರ್ಶನ ತೋರುವ ಸಾಧ್ಯತೆ ಇದೆ. ಎಫ್-35 ಯುದ್ಧವಿಮಾನ ಬರದೇ ಹೋದರೂ ಎಫ್-16 ಇತ್ಯಾದಿ ಅಮೆರಿಕದ ಇತರ ಕೆಲ ಪ್ರಮುಖ ಫೈಟರ್ ಜೆಟ್​ಗಳು ಏರೋ ಇಂಡಿಯಾ ಶೋನಲ್ಲಿ ಪ್ರದರ್ಶನ ನಡೆಸಲಿವೆ.

ಡ್ರೋನ್, ಡ್ರೋನ್ ನಿರೋಧಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕ್ವಾಂಟಮ್ ಕಮ್ಯೂನಿಕೇಶನ್ಸ್, ರೋಬೋಟಿಕ್ಸ್ ಇತ್ಯಾದಿ ವಲಯಗಳತ್ತ ಈ ಬಾರಿ ಹೆಚ್ಚು ಗಮನ ಹರಿದಿದೆ. ರಕ್ಷಣಾ ಕ್ಷೇತ್ರಕ್ಕೆ ಈ ತಂತ್ರಜ್ಞಾನಗಳ ಆಧಾರಿತ ಮಿಲಿಟರಿ ಉತ್ಪನ್ನಗಳು ಹೆಚ್ಚೆಚ್ಚು ತಯಾರಾಗುವ ನಿರೀಕ್ಷೆ ಇದೆ.

Published On - 9:38 am, Mon, 13 February 23