Sir MV- ಏರೋ ಇಂಡಿಯಾ ಶೋ ವಿಶ್ವೇಶ್ವರಯ್ಯಗೆ ಅರ್ಪಣೆ; ದೊಡ್ಡ ದೊಡ್ಡ ಒಪ್ಪಂದಗಳಾಗುವ ನಿರೀಕ್ಷೆ
Aero India 2023 Dedicated To Sir M Visvesvaraya: ಈ ಬಾರಿಯ ಏರೋ ಇಂಡಿಯಾ ಶೋ ಅನ್ನು ಸರ್ ಎಂ ವಿಶ್ವೇಶ್ವರಯ್ಯಗೆ ಸಮರ್ಪಣೆ ಮಾಡುತ್ತಿರುವುದು ವಿಶೇಷ. ಅವರ ಪ್ರೇರಣೆಯಲ್ಲಿ ಈ ಬಾರಿ ಸ್ವಾವಲಂಬಿ ಭಾರತ ಮತ್ತು ಭವಿಷ್ಯದ ರೆಕ್ಕೆ ಥೀಮ್ನಲ್ಲಿ ಏರೋ ಇಂಡಿಯಾ ಶೋನ ಪ್ರದರ್ಶನ ಸಾಗಲಿದೆ.
ಬೆಂಗಳೂರು: ಭಾರತದ ವೈಮಾನಿಕ ಸಾಮರ್ಥ್ಯದ ಕುರುಹಾಗಿರುವ ಏರೋ ಇಂಡಿಯಾ ಶೋನ 14ನೇ ಆವೃತ್ತಿ (Aero India 2023) ಇಂದು ಆರಂಭಗೊಳ್ಳುತ್ತಿದೆ. ಐದು ದಿನಗಳ ಕಾಲ ನಡೆಯುವ ಈ ಬಾರಿಯ ಏರೋ ಇಂಡಿಯಾ ಶೋ ಅನ್ನು ಸರ್ ಎಂ ವಿಶ್ವೇಶ್ವರಯ್ಯಗೆ (Sir M Visveswaraya) ಸಮರ್ಪಣೆ ಮಾಡುತ್ತಿರುವುದು ವಿಶೇಷ. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಭಾರತ ಕಂಡ ಅತ್ಯುತ್ತಮ ಎಂಜಿನಿಯರುಗಳಲ್ಲೊಬ್ಬರು. ಸ್ವಾತಂತ್ರ್ಯಕ್ಕೂ ಮುನ್ನ ಹಲವು ಕೈಗಾರಿಕೆಗಳನ್ನು ಅವರು ನಿರ್ಮಿಸಿದ್ದರು. ಅವರ ಪ್ರೇರಣೆಯಲ್ಲಿ ಈ ಬಾರಿ ಸ್ವಾವಲಂಬಿ ಭಾರತ ಮತ್ತು ಭವಿಷ್ಯದ ರೆಕ್ಕೆ (Atmanirbhar Bharat and Wings of Future) ಥೀಮ್ನಲ್ಲಿ ಏರೋ ಇಂಡಿಯಾ ಶೋನ ಪ್ರದರ್ಶನ ಸಾಗಲಿದೆ.
ಭಾರತದ ಈ ಹೆಮ್ಮೆಯ ರಕ್ಷಣಾ ಮತ್ತು ವೈಮಾನಿಕ ಪ್ರದರ್ಶನದಲ್ಲಿ ಬರೋಬ್ಬರಿ 98 ದೇಶಗಳು ಪಾಲ್ಗೊಳ್ಳುತ್ತಿವೆ. ನಿನ್ನೆ ಭಾನುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದರು. ಏರೋ ಇಂಡಿಯಾ ಶೋನಲ್ಲಿ ಕೇವಲ ವೈಮಾನಿಕ ಶಕ್ತಿ ಪ್ರದರ್ಶನ ಮಾತ್ರವಲ್ಲ ವಿಶ್ವಾದ್ಯಂತ ರಕ್ಷಣಾ ಕ್ಷೇತ್ರಗಳ 809 ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಡುತ್ತಿವೆ. ಅದಕ್ಕಾಗಿ ಯಲಹಂಕದ ಐಎಎಫ್ ನಿಲ್ದಾಣದಲ್ಲಿ 35 ಸಾವಿರ ಚದರ ಮೀಟರ್ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ.
ನಾಳೆ ಮಂಗಳವಾರ 32 ದೇಶಗಳ ರಕ್ಷಣಾ ಸಚಿವರುಗಳು ಸಭೆಯೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. 29 ದೇಶಗಳ ವಾಯುಪಡೆ ಮುಖ್ಯಸ್ಥರು ಕಾರ್ಯಕ್ರಮಕ್ಕೆ ಬರಲಿದ್ದಾರೆ. ರಕ್ಷಣಾ ಕ್ಷೇತ್ರಗಳ ಜಾಗತಿಕ ಕಂಪನಿಗಳ ಸಿಇಒಗಳ ದುಂಡುಮೇಜಿನ ಸಭೆ ನಡೆಯಲಿದೆ. ಒಟ್ಟು 73 ಸಿಇಒಗಳು ಈ ಸಭೆಯಲ್ಲಿ ಪಾಲ್ಗೊಳ್ಳಬಹುದು. ಬೋಯಿಂಗ್, ಲಾಕ್ಹೀಡ್ ಮಾರ್ಟೀನ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್, ಜನರಲ್ ಅಟಾಮಿಕ್ಸ್, ಲೀಬೆರ್ ಗ್ರೂಪ್, ರೇಥಿಯಾನ್ ಟೆಕ್ನಾಲಜೀಸ್, ಸಫ್ರಾನ್, ಜನರಲ್ ಅಥಾರಿಟಿ ಆಫ್ ಮಿಲಿಟರಿ ಇಂಡಸ್ಟ್ರೀಸ್ (ಗಾಮಿ) ಮೊದಲಾದ ಜಾಗತಿಕ ಕಂಪನಿಗಳು ಪಾಲ್ಗೊಳ್ಳುತ್ತಿವೆ. ಭಾರತದ ರಕ್ಷಣಾ ಕ್ಷೇತ್ರದ ಕಂಪನಿಗಳಾದ ಎಚ್ಎಎಲ್, ಬಿಇಎಲ್, ಬಿಡಿಎಲ್, ಬೆಮೆಲ್, ಮಿಶ್ರ ಧಾತು ನಿಗಮ್ ಮೊದಲಾದ ಕಂಪನಿಗಳೂ ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಡುತ್ತಿವೆ.
ಇದನ್ನೂ ಓದಿ: Aero India Show- ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ- ಪ್ರಧಾನಿಯಿಂದ ಇಂದು ಚಾಲನೆ
ಒಂದು ಅಂದಾಜು ಪ್ರಕಾರ ಈ ಬಾರಿಯ ಏರೋ ಇಂಡಿಯಾ ಶೋ ವೇಳೆ 251 ಒಪ್ಪಂದಗಳಾಗುವ (MoU) ಸಾಧ್ಯತೆ ಇದೆ. ಇದೇನಾದರೂ ನೆರವೇರಿದಲ್ಲಿ 75 ಸಾವಿರ ಕೋಟಿ ರುನಷ್ಟು ಬಂಡವಾಳವು ಭಾರತದ ಆರ್ಥಿಕತೆಗೆ ಬರಲಿದೆ. ಹೆಚ್ಎಎಲ್ಗೆ ಹಲವು ಒಪ್ಪಂದಗಳು ಸಿಗುವ ನಿರೀಕ್ಷೆ ಇದೆ. ಇನ್ನೊಂದು ವರದಿ ಪ್ರಕಾರ ವಿಶ್ವದ ಅತ್ಯಂತ ಪ್ರಬಲ ಸ್ಟೀಲ್ತ್ ಫೈಟರ್ ಎನಿಸಿದ ಅಮೆರಿಕದ ಎಫ್-35 ಯುದ್ಧವಿಮಾನ ಯಲಹಂಕ ಆಗಸದಲ್ಲಿ ಪ್ರದರ್ಶನ ತೋರುವ ಸಾಧ್ಯತೆ ಇದೆ. ಎಫ್-35 ಯುದ್ಧವಿಮಾನ ಬರದೇ ಹೋದರೂ ಎಫ್-16 ಇತ್ಯಾದಿ ಅಮೆರಿಕದ ಇತರ ಕೆಲ ಪ್ರಮುಖ ಫೈಟರ್ ಜೆಟ್ಗಳು ಏರೋ ಇಂಡಿಯಾ ಶೋನಲ್ಲಿ ಪ್ರದರ್ಶನ ನಡೆಸಲಿವೆ.
ಡ್ರೋನ್, ಡ್ರೋನ್ ನಿರೋಧಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕ್ವಾಂಟಮ್ ಕಮ್ಯೂನಿಕೇಶನ್ಸ್, ರೋಬೋಟಿಕ್ಸ್ ಇತ್ಯಾದಿ ವಲಯಗಳತ್ತ ಈ ಬಾರಿ ಹೆಚ್ಚು ಗಮನ ಹರಿದಿದೆ. ರಕ್ಷಣಾ ಕ್ಷೇತ್ರಕ್ಕೆ ಈ ತಂತ್ರಜ್ಞಾನಗಳ ಆಧಾರಿತ ಮಿಲಿಟರಿ ಉತ್ಪನ್ನಗಳು ಹೆಚ್ಚೆಚ್ಚು ತಯಾರಾಗುವ ನಿರೀಕ್ಷೆ ಇದೆ.
Published On - 7:46 am, Mon, 13 February 23