ರಕ್ಷಣೆ ನೀಡುವ ಪೊಲೀಸರ ಮೇಲೆ ಮಂಗಳೂರಲ್ಲಿ ನಡೆಯಿತು ತಲ್ವಾರ್‌ನಿಂದ ದಾಳಿ
ಮುಖ್ಯ ಕಾನ್ಸ್‌ಟೇಬಲ್ ಗಣೇಶ್ ಹಾಗೂ ಮಹಿಳಾ ಕಾನ್ಸ್ಟೇಬಲ್ಗಳು ಕೆಲಸಕ್ಕೆ ಹಾಜರಾಗಿದ್ದರು. ಈ ವೇಳೆ ದುಷ್ಕರ್ಮಿ ಇವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಬಂದರು ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗಣೇಶ್‌ಗೆ ಗಾಯಗಳಾಗಿವೆ.
ಮಂಗಳೂರು: ಪೊಲೀಸರನ್ನು ಕಂಡರೆ ಬಹುತೇಕರು ಭಯ ಬೀಳುತ್ತಾರೆ. ಯಾವುದೇ ತಪ್ಪು ಮಾಡದಿದ್ದರೂ ಅವರನ್ನು ಕಂಡಾಕ್ಷಣ ಒಮ್ಮೆ ಭಯವಾಗೋದು ಸಾಮಾನ್ಯ. ಅದರಲ್ಲೂ ಕಳ್ಳರು, ದುಷ್ಕರ್ಮಿಗಳಿಗಂತೂ ಪೊಲೀಸರನ್ನು ಕಂಡರೆ ನಡುಕ ಹುಟ್ಟಿಬಿಡುತ್ತದೆ. ಆದರೆ, ದಕ್ಷಿಣ ಕನ್ನಡದಲ್ಲಿ ದುಷ್ಕರ್ಮಿಯೋರ್ವ ಹಾಡ ಹಗಲೇ ಪೊಲೀಸರ ಮೇಲೆ ತಲ್ವಾರ್‌ನಿಂದ ದಾಳಿ ನಡೆಸಿದ್ದಾನೆ!
ಮಂಗಳೂರಿನ ರಥಬೀದಿಯ ನ್ಯೂಚಿತ್ರ ಟಾಕೀಸ್ ಬಳಿ ಈ ಘಟನೆ ನಡೆದಿದೆ. ಇಂದು ಮುಂಜಾನೆ ಮುಖ್ಯ ಕಾನ್ಸ್‌ಟೇಬಲ್ ಗಣೇಶ್ ಹಾಗೂ ಮಹಿಳಾ ಕಾನ್ಸ್ಟೇಬಲ್ಗಳು ಕೆಲಸಕ್ಕೆ ಹಾಜರಾಗಿದ್ದರು. ಈ ವೇಳೆ ದುಷ್ಕರ್ಮಿ ಇವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಬಂದರು ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗಣೇಶ್‌ಗೆ ಗಾಯಗಳಾಗಿವೆ.
ಗಣೇಶ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸಣ್ಣಪುಟ್ಟ ಗಾಯ ಮಾತ್ರ ಆಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಿಳಾ ಕಾನ್ಸ್ಟೇಬಲ್ಗಳಿಗೆ ಯಾವುದೇ ತೊಂದರೆ ಉಂಟಾಗಿಲ್ಲ.
ತಲ್ವಾರ್‌ನಿಂದ ಹಲ್ಲೆಗೈದು ಪರಾರಿಯಾಗಿರುವ ದುಷ್ಕರ್ಮಿ ಯಾರೆಂಬುದು ಇನ್ನೂ ಪತ್ತೆ ಆಗಿಲ್ಲ. ಇವರ ಶೋಧಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಸ್ಥಳೀಯ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಂದಹಾಗೆ, ಪೊಲೀಸರ ಮೇಲೆ ಹಲ್ಲೆ ನಡೆಸೋಕೆ ಕಾರಣ ಏನು ಎನ್ನುವ ವಿಚಾರ ಕೂಡ ಇನ್ನೂ ಬಹಿರಂಗವಾಗಿಲ್ಲ.