AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ ಕಾರ್ಯಕರ್ತನಿಂದ ಸೈನಿಕರ ಅವಹೇಳನ ಆರೋಪ: 10 ತಿಂಗಳ ಹಿಂದಿನ ಪೋಸ್ಟ್​ಗೆ ಮರುಜೀವ

ಸೈನಿಕರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತನ ಹೆಸರಿನ ಫೇಸ್​ಬುಕ್ ಅಕೌಂಟ್​ನಲ್ಲಿ 10 ತಿಂಗಳ ಹಿಂದೆ ಮಾಡಿದ್ದ ಪೋಸ್ಟ್ ಕರಾವಳಿಯಲ್ಲಿ ರಾಜಕೀಯ ಮದ್ದಾನೆಗಳ ಟ್ವೀಟ್ ಕಾಳಗಕ್ಕೆ ಕಾರಣವಾಗಿದೆ.

ಕಾಂಗ್ರೆಸ್​ ಕಾರ್ಯಕರ್ತನಿಂದ ಸೈನಿಕರ ಅವಹೇಳನ ಆರೋಪ: 10 ತಿಂಗಳ ಹಿಂದಿನ ಪೋಸ್ಟ್​ಗೆ ಮರುಜೀವ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ಶಾಸಕ ಸುನಿಲ್ ಕುಮಾರ್
TV9 Web
| Edited By: |

Updated on:Jul 09, 2021 | 7:04 PM

Share

ಉಡುಪಿ: ಸೈನಿಕರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತನ ಹೆಸರಿನ ಫೇಸ್​ಬುಕ್ ಅಕೌಂಟ್​ನಲ್ಲಿ 10 ತಿಂಗಳ ಹಿಂದೆ ಮಾಡಿದ್ದ ಪೋಸ್ಟ್ ಕರಾವಳಿಯಲ್ಲಿ ರಾಜಕೀಯ ಮದ್ದಾನೆಗಳ ಟ್ವೀಟ್ ಕಾಳಗಕ್ಕೆ ಕಾರಣವಾಗಿದೆ. ಈ ಪೋಸ್ಟ್ ಬಗ್ಗೆ ವಿಚಾರಣೆ ನಡೆಸುವ ವೇಳೆ, ನಮ್ಮ ಕಾರ್ಯಕರ್ತನ ಮೇಲೆ ಕಾರ್ಕಳ ಪೊಲಿಸರು ಹಲ್ಲೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರೆ, ಸರಣಿ ಟ್ವೀಟ್ ಗಳ ಮೂಲಕ ಶಾಸಕ ಸುನಿಲ್ ರಾಜಕೀಯ ಕಾರಣಕ್ಕೆ ದೇಶದ್ರೋಹಿಗಳನ್ನು ಬೆಂಬಲಿಸಬೇಡಿ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

10 ತಿಂಗಳ ಹಿಂದೆ ಹಾಕಿದ ಒಂದು ಪೇಸ್ ಬುಕ್ ಪೋಸ್ಟ್ ಬಾರೀ ಗದ್ದಲ ಸೃಷ್ಟಿಸಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರಾಧಾಕೃಷ್ಣ ಹಿರ್ಗಾನ ಎಂಬ ವ್ಯಕ್ತಿಯ ಅಕೌಂಟ್​ನಲ್ಲಿ ಸೈನಿಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಕಾಣಿಸಿಕೊಂಡಿತ್ತು. ಅದು ಆಗಲೂ ವಿವಾದಕ್ಕೆ ಕಾರಣವಾಗಿತ್ತು. ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಈ ಪೋಸ್ಟ್ ವಿರುದ್ಧ ಆವತ್ತೇ ಕಾರ್ಕಳ ಠಾಣೆಯಲ್ಲಿ ದೂರು ನೀಡಿದ್ದರು. ವಿಚಾರಣೆ ವೇಳೆ ಆತ, ನನ್ನ ಹೆಸರಲ್ಲಿ ನಕಲಿ ಅಕೌಂಟ್ ಮಾಡಲಾಗಿದೆ. ಆ ಪೋಸ್ಟ್ ನಾನು ಹಾಕಿದ್ದಲ್ಲ ಎಂದು ಸಮರ್ಥಿಸಿಕೊಂಡಿದ್ದ.

ನಕಲಿ ಅಕೌಂಟ್ ಮಾಡಿರುವ ಬಗ್ಗೆ ಕಾರ್ಕಳ ಠಾಣೆಯಲ್ಲಿ ಯಾವುದೇ ದೂರು ನೀಡಿರಲ್ಲ. ನಂತರ ಬೆಂಗಳೂರಿಗೆ ತೆರಳಿದ್ದ ಆತ, ಅಲ್ಲಿನ ಸೈಬರ್ ಕ್ರೈಂ ವಿಭಾಗದಲ್ಲಿ ದೂರು ದಾಖಲಿಸಿದ್ದಾಗಿ ಹೇಳಿದ್ದ. ಆದರೆ ಕಾರ್ಕಳ ಪೊಲೀಸರಿಗೆ ಈ ದೂರಿನ ಯಾವುದೇ ದಾಖಲೆ ನೀಡಿರಲಿಲ್ಲ. ಜುಲೈ 8 ಅಂದರೆ ಗುರುವಾರ ಈ ಕುರಿತು ವಿಚಾರಿಸಿಲು ಮತ್ತೆ ರಾಧಾಕೃಷ್ಣನನ್ನು ಠಾಣೆಗೆ ಕರೆಸಿಕೊಳ್ಳಲಾಗಿತ್ತು. ಬೆಂಗಳೂರಿನಲ್ಲಿ ದೂರು ನೀಡಿದ ದಾಖಲೆ ಕೇಳಿದಾಗ ಪೊಲೀಸರಿಗೆ ಏಕವಚನದಲ್ಲಿ ನಿಂದಿಸಿ, ಅವಹೇಳನಕಾರಿಯಾಗಿ ಮಾತನಾಡಿದ್ದ ಅನ್ನೋದು ಕಾರ್ಕಳ ಪೊಲೀಸರ ವಾದ.

ಠಾಣೆಯಿಂದ ಹೋದ ನಂತರ ತನ್ನ ಮೇಲೆ ಹಲ್ಲೆ ನಡೆದಿದ್ದಾಗಿ ಆರೋಪಿಸಿದ್ದ ರಾಧಾಕೃಷ್ಣ ಹಿರ್ಗಾನ ಸದ್ಯ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೊದಲೇ ಹೃದಯ ಸಮಸ್ಯೆ ಇದ್ದು, ಪೊಲೀಸರ ಹಲ್ಲೆಯಿಂದ ಮತ್ತಷ್ಟು ಘಾಸಿಯಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸುತ್ತಿದೆ. ತಮ್ಮ ಕಾರ್ಯಕರ್ತನ ಬೆಂಬಲಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಕೂಡಾ ಮಾಡಿದ್ದಾರೆ.

ಸಿದ್ದರಾಮಯ್ಯ ಮಾಡಿರುವ ಟ್ವೀಟ್ ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ರಾಧಾಕೃಷ್ಣ ಹಿರ್ಗಾನ ಕಳೆದ 9 ತಿಂಗಳಿಂದ ಬೆಂಗಳೂರಿನಲ್ಲಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆಯೂ ಅನೇಕ ಬಾರಿ ಅವಹೇಳನಕಾರಿ ಪೋಸ್ಟ್ ಹಾಕಿದ್ದು ವಿವಾದಕ್ಕೂ ಕಾರಣವಾಗಿತ್ತು. ಇದೀಗ ಸಿದ್ದರಾಮಯ್ಯ ಟ್ವೀಟ್ ಬರುತ್ತಿದ್ದಂತೆ, ಕಾರ್ಕಳ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಸರಣಿ ಟ್ವೀಟ್ ಮಾಡಿದ್ದಾರೆ. ದೇಶದ್ರೋಹದ ಮಾನಸಿಕತೆಯ ಬರಹದ ಪರ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಸಿದ್ದರಾಮಯ್ಯ ದೇಶದ್ರೋಹವನ್ನು ಸಮರ್ಥಿಸುತ್ತಿರುವುದು ಇದೇ ಮೊದಲ ಬಾರಿಯಲ್ಲ ಎಂದು ಟೀಕಿಸಿದ್ದಾರೆ.

ಹಿಂದೂ ಕಾರ್ಯಕರ್ತರ ಕೊಲೆಯಾದರೆ ಎಸ್​ಡಿಪಿಐ ಸಮರ್ಥನೆ ಮಾಡುತ್ತಾರೆ. ಕೆಜಿ ಹಳ್ಳಿ ಘಟನೆಯಲ್ಲೂ ಗಲಭೆಕೋರರ ಪರ ನಿಲ್ಲುತ್ತಾರೆ.ಮಂಗಳೂರು ಸಿಎಎ ವಿರುದ್ಧದ ಗಲಭೆಯನ್ನು ವಿಧಾನಸೌಧದಲ್ಲಿ ಸಮರ್ಥಿಸಿಕೊಳ್ಳುತ್ತಾರೆ. ನಿಮ್ಮ ರಾಜಕೀಯ ಚಟಕ್ಕೆ ದೇಶದ್ರೋಹಿಗಳನ್ನು ಬೆಂಬಲಿಸಬೇಡಿ ಎಂದು ಹೇಳಿರುವ ಸುನಿಲ್, ಪಾಕಿಸ್ತಾನವನ್ನು ಬೆಂಬಲಿಸಿರುವ ರಾಧಾಕೃಷ್ಣ, ಸೈನಿಕರ ವಿರುದ್ಧ ಪೋಸ್ಟ್ ಹಾಕಿದ್ದಾನೆ. ಆತನ ಮಾನಸಿಕತೆಯನ್ನು ಅರ್ಥಮಾಡಿಕೊಳ್ಳಿ. ನಿಮ್ಮ ನಿಷ್ಠೆ ಯಾರ ಪರ ಎಂಬುದನ್ನು ಹೇಳಿ ಎಂದು ತಿರುಗೇಟು ನೀಡದ್ದಾರೆ.

ಠಾಣೆಯಿಂದ ರಾಧಾಕೃಷ್ಣನನ್ನು ಕಳಿಸುವಾಗ ಕಾರ್ಕಳ ಪೊಲೀಸರು ಸರ್ಕಾರಿ ವೈದ್ಯರ ಮೂಲಕ ಆರೋಗ್ಯ ಪರೀಕ್ಷೆ ನಡೆಸಿದ್ದರು. ಹಾಗಾಗಿ ಈ ಪ್ರಕರಣದಲ್ಲಿ ಪೊಲೀಸರನ್ನು ಅನಗತ್ಯ ಸಿಲುಕಿಸಲಾಗುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ.

ವರದಿ: ಹರೀಶ್ ಪಾಲೆಚ್ಚಾರ್

(Political Fight Between Sunil and Siddaramaiah Over a Facebook post by Congress workers)

ಇದನ್ನೂ ಓದಿ: ಕಲಾಪ್ರಿಯರನ್ನು ಸೆಳೆಯುತ್ತಿದೆ ಉಡುಪಿಯ ಚಿತ್ರಾಲಯ ಆರ್ಟ್ ಗ್ಯಾಲರಿ; ಮಣ್ಣಿನಲ್ಲಿಯೇ ತಯಾರಾಗುತ್ತೆ ವಿಶಿಷ್ಟ ಕಲಾಕೃತಿ

ಇದನ್ನೂ ಓದಿ: ಸಾವಯವ ಕೃಷಿ ಪದ್ಧತಿ; ಮುಂಬೈನ ಹೊಟೆಲ್​ ಕೆಲಸ ಬಿಟ್ಟು ಕೃಷಿ ಕಡೆ ಮುಖ ಮಾಡಿದ ಉಡುಪಿ ವ್ಯಕ್ತಿ

Published On - 6:50 pm, Fri, 9 July 21