ಸಾವಯವ ಕೃಷಿ ಪದ್ಧತಿ; ಮುಂಬೈನ ಹೊಟೆಲ್ ಕೆಲಸ ಬಿಟ್ಟು ಕೃಷಿ ಕಡೆ ಮುಖ ಮಾಡಿದ ಉಡುಪಿ ವ್ಯಕ್ತಿ
ಕಳೆದ ವರ್ಷ 2020 ಮಾರ್ಚ್ ತಿಂಗಳಿಗೆ ಊರಿಗೆ ಬಂದಿದ್ದು, ಒಂದು ಎಕರೆ ಭತ್ತ ಬೇಸಾಯ ಆರಂಭಿಸಿದ್ದೇನೆ. ನೆರೆಹೊರೆಯವರ ಎರಡು ಎಕರೆ ಭೂಮಿ ಪಡೆದು ಭತ್ತದ ಬೇಸಾಯ ನಡೆಸುವ, ಜತೆಗೆ ಬಾಳೆ ಕೃಷಿ ,ಕರಿ ಮೆಣಸು ಬೆಳೆಸುವುದು ಮತ್ತು ಮನೆಯ ಪಕ್ಕದಲ್ಲೆ ಸ್ವಂತ ಅಂಗಡಿ ಹಾಕಿ ಆ ಮೂಲಕ ತರಕಾರಿ, ಬಾಳೆ ಎಲೆಯನ್ನು ವ್ಯಾಪಾರ ಮಾಡಿ ಉತ್ತಮ ಆದಾಯವನ್ನು ಪಡೆಯುತ್ತಿದ್ದೇನೆ ಎಂದು ರವೀಂದ್ರ ಶೆಟ್ಟಿಗಾರ್ ಹೇಳಿದ್ದಾರೆ.
ಉಡುಪಿ: ಕೊರೊನಾ ಪ್ರಾರಂಭವಾದ ದಿನದಿಂದಲೂ ಮನುಕುಲದ ಜೀವನ ಶೈಲಿಯಲ್ಲಿ ಅನೇಕ ಬದಲಾವಣೆಗಳಾಗಿದೆ. ಪಟ್ಟಣ ಸೇರಿದ್ದವರು ಮತ್ತೆ ಮರಳಿ ಹಳ್ಳಿಗೆ ದಾವಿಸಿದ್ದಾರೆ. ಆರ್ಥಿಕವಾಗಿ ಉತ್ತುಂಗದಲ್ಲಿದ್ದವರು ಇಂದು ಕೆಳಗಿಳಿದಿದ್ದಾರೆ. ಹೀಗೆ ಬಹುತೇಕ ಜನರ ಜೀವನ ಪದ್ಧತಿಯೇ ಬದಲಾಗಿದೆ. ಅದರಲ್ಲೂ ಕರಾವಳಿಯಿಂದ ಮುಂಬೈನಂತಹ ನಗರಗಳಿಗೆ ಉದ್ಯೋಗ ಅರಸಿ ತೆರಳುದವರು ಇಂದು ಮರಳಿ ಊರಿಗೆ ದಾವಿಸಿದ್ದಾರೆ. ಹೀಗೆ ಬಂದವರ ಆಯ್ಕೆ ಕೃಷಿಯಾಗಿತ್ತು ಎನ್ನುವುದು ಈಗ ಹೆಮ್ಮೆಯ ವಿಚಾರ. ಪಟ್ಟಣದಿಂದ ಊರಿಗೆ ಬಂದು ಗದ್ದೆಯನ್ನು ಲೇಔಟ್ ಮಾಡುವ ಜನರ ಮಧ್ಯೆ ಕೃಷಿಗೆ ಹೆಚ್ಚು ಬೆಲೆ ಕೊಡುವ ಮನಸ್ಥಿತಿ ತುಂಬಾ ಮುಖ್ಯ. ಉಡುಪಿಯ ವ್ಯಕ್ತಿಯೊಬ್ಬರು ಮುಂಬೈನಿಂದ ಬಂದು ಕೃಷಿ ಜೀವನದಲ್ಲಿ ಸ್ವರ್ಗ ಕಾಣುತ್ತಿರುವುದೇ ಇದಕ್ಕೆ ಸಾಕ್ಷಿ.
ಕೊರೊನಾದ ಆರ್ಭಟ ಆರಂಭವಾಗಿದ್ದು, ಮಹಾರಾಷ್ಟ್ರದಲ್ಲೇ, ಅದರಲ್ಲೂ ಅತೀ ಹೆಚ್ಚು ಬಾಧಿತ ಪ್ರದೇಶಗಳಲ್ಲಿ ಮುಂಬೈ ಮುಂಚೂಣಿಯಲ್ಲಿತ್ತು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಹೀಗಾಗಿ ಮುಂಬೈ ಮಹಾನಗರದಿಂದ ಊರಿಗೆ ಜನ ವಾಪಾಸ್ಸಾಗಿದ್ದಾರೆ. ಅದರಂತೆ ಉಡುಪಿಯ ರವೀಂದ್ರ ಶೆಟ್ಟಿಗಾರ್ ಕೂಡ ಮರಳಿ ಊರು ಸೇರಿದ್ದಾರೆ. ಸುದೀರ್ಘ 25 ವರ್ಷಗಳ ಕಾಲ ಮುಂಬೈನಲ್ಲಿ ಹೊಟೇಲ್ ನಡೆಸಿಕೊಂಡು ಸುಖವಾಗಿದ್ದರು. ಆದರೆ ಕೊರೊನಾದಿಂದಾಗಿ ತಮ್ಮ ತವರು ಕಾಪು ತಾಲೂಕಿನ ಕಳತ್ತೂರಿನಲ್ಲಿ ಬಂದು ನೆಲೆಸಿದ್ದಾರೆ. ಹೀಗೆ ಬಂದವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಕೃಷಿ ಮತ್ತು ತೋಟಗಾರಿಕೆಯಲ್ಲಿ. ಐದು ಎಕರೆಯಲ್ಲಿ ವಿಭಿನ್ನ ರೀತಿಯ ಕೃಷಿ ಮಾಡಿದ್ದು, ಯಶಸ್ಸು ಕಂಡಿದ್ದಾರೆ.
ಕಷ್ಟ ಅಂತ ಬಂದಾಗ ಎಲ್ಲರೂ ಕೈ ಕೊಟ್ಟರೂ ಕೃಷಿ ಮಾತ್ರ ಕೈ ಬಿಡಲಿಲ್ಲ ಎನ್ನುವುದು ರೀವಿಂದ್ರ ಶೆಟ್ಟಿಗಾರ್ ಅವರ ಮಾತು. ಹೀಗಾಗಿಯೇ ಅವರು ಮೊದಲು ಮುಂಬೈನಲ್ಲಿ ನೆಲೆಸಿದ್ದಾಗಲೂ ವರ್ಷಕ್ಕೊಮ್ಮೆ ಬಂದು ಭತ್ತದ ಕೃಷಿಯಲ್ಲಿ ಭಾಗಿಯಾಗುತ್ತಿದ್ದರು. ಕೃಷಿ ಅನುಭವ ಇದ್ದರೂ, ದಿನವಿಡೀ ಕೆಲಸ ಮಾಡಿ ಗೊತ್ತಿರಲಿಲ್ಲ. ಆದರೆ ಕೊರೊನಾ ಬಂದ ನಂತರ ಅನಿವಾರ್ಯವಾಗಿ ಕೃಷಿಯತ್ತ ಮುಖಮಾಡಿದ್ದಾರೆ.
ಮುಂಬೈನಿಂದ ಬಂದ ಮೇಲೆ ಮತ್ತಷ್ಟು ಅಡಿಕೆ ಗಿಡ ಹಾಕಿದ್ದು, ತರಕಾರಿ ಬೆಳೆಸಿದ್ದಾರೆ. ಅಲ್ಲದೇ ರವೀಂದ್ರ ಶೆಟ್ಟಿಗಾರ್ ತಾವು ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ಕೊಂಡೋಯ್ಯದು ತಾವೇ ಮಾರಾಟ ಮಾಡುತ್ತಿದ್ದಾರೆ. ಸದ್ಯ 500 ಅಧಿಕ ಅಡಿಕೆ ಗಿಡಗಳನ್ನು ಹಾಕಿ ಆರೈಕೆ ಮಾಡುತ್ತಿದ್ದಾರೆ. ಅದರೆ ಅಡಿಕೆ ಫಸಲು ನೀಡುವುದಕ್ಕೆ ನಾಲ್ಕು ವರ್ಷಗಳ ಕಾಲ ಕಾಯಬೇಕಿದೆ. ಸದ್ಯದ ಆದಾಯಕ್ಕಾಗಿ ತರಕಾರಿ, ಭತ್ತದ ಕೃಷಿ ಮಾಡುತ್ತಿದ್ದು, ತರಕಾರಿಯಿಂದ ಮನೆಯ ಖರ್ಚು ವೆಚ್ಚವನ್ನು ನಿಭಾಯಿಸುವಷ್ಟು ಆದಾಯ ಬರುತ್ತಿದೆ ಎಂದು ರವೀಂದ್ರ ಶೆಟ್ಟಿಗಾರ್ ತಿಳಿಸಿದ್ದಾರೆ.
ಕಳೆದ ವರ್ಷ 2020 ಮಾರ್ಚ್ ತಿಂಗಳಿಗೆ ಊರಿಗೆ ಬಂದಿದ್ದು, ಒಂದು ಎಕರೆ ಭತ್ತ ಬೇಸಾಯ ಆರಂಭಿಸಿದ್ದೇನೆ. ನೆರೆಹೊರೆಯವರ ಎರಡು ಎಕರೆ ಭೂಮಿ ಪಡೆದು ಭತ್ತದ ಬೇಸಾಯ ನಡೆಸುವ, ಜತೆಗೆ ಬಾಳೆ ಕೃಷಿ ,ಕರಿ ಮೆಣಸು ಬೆಳೆಸುವುದು ಮತ್ತು ಮನೆಯ ಪಕ್ಕದಲ್ಲೆ ಸ್ವಂತ ಅಂಗಡಿ ಹಾಕಿ ಆ ಮೂಲಕ ತರಕಾರಿ, ಬಾಳೆ ಎಲೆಯನ್ನು ವ್ಯಾಪಾರ ಮಾಡಿ ಉತ್ತಮ ಆದಾಯವನ್ನು ಪಡೆಯುತ್ತಿದ್ದೇನೆ ಎಂದು ರವೀಂದ್ರ ಶೆಟ್ಟಿಗಾರ್ ಹೇಳಿದ್ದಾರೆ.
ಕೊರೊನಾ ಕಾರಣದಿಂದ ಮತ್ತೆ ಮುಂಬೈ ಹೋಗುವುದಕ್ಕೆ ಬಿಟ್ಟಿಲ್ಲ. ಹೀಗಾಗಿ ನನ್ನ ಪತಿ ಊರಿನಲ್ಲೇ ಕೃಷಿ ಮೂಲಕ ಬದುಕು ಶುರು ಮಾಡಲು ಯೋಚನೆ ಮಾಡಿದರು. ಮೊದಲಿಗೆ ಕೃಷಿಯಲ್ಲಿ ಆದಾಯ ಇರಲಿಲ್ಲ. ಆದರೆ ಈಗ ಕೃಷಿ ಮಾಡುವುದರ ಮೂಲಕ ಜೀವನ ಮಟ್ಟ ಉತ್ತಮವಾಗಿದೆ. ಸಾವಯವ ಕೃಷಿಯನ್ನು ಮಾಡುವ ಮೂಲಕ ಕೃಷಿಯಲ್ಲಿ ಇನ್ನಷ್ಟು ಸಾಧನೆ ಮಾಡುವ ಯೋಚನೆ ನಮ್ಮದು. ಸದ್ಯ ಒಂದು ಅಂಗಡಿಯನ್ನು ಮಾಡಿಕೊಂಡಿದ್ದೇವೆ. ಇಲ್ಲೇ ಇದ್ದು ಕೃಷಿ ಉತ್ತಮ ಜೀವನ ರೂಪಿಸುವ ಯೋಚನೆ ನಮ್ಮದು ಎಂದು ರವಿಂದ್ರ ಶೆಟ್ಟಿಗಾರ್ ಅವರ ಪತ್ನಿ ದಿವ್ಯ ಶೆಟ್ಟಿಗಾರ್ ತೀಳಿಸಿದ್ದಾರೆ.
ಕೃಷಿಯನ್ನು ತ್ಯಜಿಸಿ ಕರವಾಳಿಯಿಂದ ಸಾವಿರಾರು ಮಂದಿ ದೂರದ ಮುಂಬಯಿ, ಬೆಂಗಳೂರು ಎಂದು ಉದ್ಯೋಗ ಹುಡುಕಿ ಹೋಗುತ್ತಿದ್ದರು. ಸದ್ಯ ಕೊರೊನಾ ಕಾರಣದಿಂದ ಮತ್ತೆ ತವರಿಗೆ ವಾಪಾಸ್ಸ್ ಆಗಿದ್ದಾರೆ. ಸದ್ಯ ಕರಾವಳಿಯಲ್ಲಿ ಕೃಷಿ ಪ್ರಮಾಣ ಹೆಚ್ಚಾಗುತ್ತಿದೆ. ಹೀಗೆ ಎಲ್ಲರೂ ಬೇರೆ ಊರಿಗೆ ಹೋದರು ಊರಿಗೆ ವಾಪಸ್ಸು ಬಂದು ಕೃಷಿ ನಡೆಸಿದರೆ ಪಾಳು ಬಿದ್ದ ಭೂಮಿ ಮತ್ತೆ ಫಲವತ್ತಾದ ಭೂಮಿಯಾಗುತ್ತದೆ. ಜತೆಗೆ ಉತ್ತಮ ಆದಾಯ, ಉತ್ತಮ ಜೀವನ ಕೂಡ ಕರವಾಳಿ ಮಂದಿಗೆ ಸಿಗುತ್ತದೆ. ರವೀಂದ್ರ ಅವರ ಈ ಕೊರೋನಾ ಕಾಲದ ಹಟ ಸಾಧನೆ ಎಲ್ಲಾ ಕೃಷಿ ಕರಿಗೂ ಒಂದು ಮಾದರಿ ಎಂದು ಸ್ಥಳೀಯರಾದ ರಾಜೇಶ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಇದೊಂದು ಪುಟ್ಟ ಯಶೋಗಾಥೆ, ಇಂತಹಾ ಸಾವಿರಾರು ಪ್ರೇರಕ ಕಥೆಗಳು ಕರಾವಳಿಯಲ್ಲಿ ಸೃಷ್ಟಿಯಾಗಿದೆ. ಬದುಕನ್ನು ಮೂರಾ ಬಟ್ಟೆ ಮಾಡಿದ ಕೊರೊನಾ ಅನೇಕರಿಗೆ ಹೊಸ ಬದುಕು ನೀಡಿದ್ದೂ ಕೂಡ ಸುಳ್ಳಲ್ಲ.
ಇದನ್ನೂ ಓದಿ: Drones in Agriculture: ಭತ್ತದ ಕಣಜದಲ್ಲಿ ಕ್ರೀಮಿನಾಶಕ ಸಿಂಪಡಣೆಗಾಗಿ ಡ್ರೋನ್ಗೆ ಮೊರೆ ಹೋದ ರೈತರು
2019-20ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಹಣ ಬಾರದೇ ವಿಜಯಪುರ ರೈತರು ಕಂಗಾಲು
Published On - 2:07 pm, Wed, 30 June 21