
ಬೆಂಗಳೂರು, ಫೆಬ್ರವರಿ 10: ಕರ್ನಾಟಕ ಕಾಂಗ್ರೆಸ್‌ನಲ್ಲಿ(Congress) ಅಧಿಕಾರ ಹಂಚಿಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿರುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಹತ್ವದ ಹೇಳಿಕೆ ನೀಡಿದ್ದಾರೆ. ದೆಹಲಿಗೆ ತೆರಳಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಅವರು, ಸಿಎಂ ಸಿದ್ದರಾಮಯ್ಯ ಜತೆ ಕದ್ದುಮುಚ್ಚಿ ಯಾವುದೇ ಮಾತುಕತೆ ನಡೆಸಿಲ್ಲ. ಪಕ್ಷದ ವರಿಷ್ಠರ ಸಮ್ಮುಖದಲ್ಲಿ ಎಲ್ಲರೂ ಸೇರಿ ಚರ್ಚಿಸಿ ತೀರ್ಮಾನ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದೊಳಗೆ ಅನಗತ್ಯ ಗೊಂದಲ ಸೃಷ್ಟಿಸುವ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲರೂ ‘ಬಾಯಿ ಮುಚ್ಚಿಕೊಂಡಿರಬೇಕು’ ಎಂದು ಹೇಳಿದ್ದಾರೆ. ಈ ಸೂಚನೆಯನ್ನು ಪಕ್ಷದ ಎಲ್ಲರೂ ಪಾಲಿಸಬೇಕು. ಮಂತ್ರಿಗಳು, ಶಾಸಕರು ಅಥವಾ ಯಾರೇ ಆಗಲಿ, ನೀಡುವ ಹೇಳಿಕೆಗಳು ಪಕ್ಷಕ್ಕೆ ಹಾನಿಕಾರಕವಾಗಬಾರದು, ಬದಲಿಗೆ ಪಕ್ಷಕ್ಕೆ ಒಳಿತು ಮಾಡುವಂತಿರಬೇಕು. ಇಂತಹ ಹೇಳಿಕೆಗಳಿಂದ ಯಾರಿಗೂ ಯಾವುದೇ ಪ್ರಯೋಜನವಾಗುವುದಿಲ್ಲ, ಬದಲಾಗಿ ಪಕ್ಷದ ಇಮೇಜ್‌ಗೆ ಧಕ್ಕೆ ಉಂಟಾಗುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಯತೀಂದ್ರ ಅವರಿಗೆ ನೋಟಿಸ್ ನೀಡುವ ವಿಚಾರವಾಗಿ ಇಕ್ಬಾಲ್ ಹುಸೇನ್ ಅವರು ಪ್ರಶ್ನೆ ಮಾಡಿದ್ದಾರೆ. ತಾವು ಮಾತನಾಡಿದರೆ ನೋಟಿಸ್ ನೀಡುತ್ತಾರೆ, ಯತೀಂದ್ರ ಅವರಿಗೆ ಏಕೆ ನೋಟಿಸ್ ನೀಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ ಎಂಬ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ, ‘ಈ ವಿಷಯದ ಬಗ್ಗೆ ಹೈಕಮಾಂಡ್ ಬಳಿ ಕೇಳೋಣ ಬಿಡಿ’ ಎಂದರು.
ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಡಿಕೆಶಿವಕುಮಾರ್, ಪ್ರತಿದಿನವೂ ನನಗೆ ಶುಭದಿನ. ಪ್ರತಿದಿನವೂ ಕಷ್ಟದ ದಿನವೂ ಹೌದು, ಯಾವುದೂ ಕೂಡ ಸುಲಭವಲ್ಲ ಎಂದು ಹೇಳಿದರು. ಸಾರ್ವಜನಿಕ ಜೀವನದಲ್ಲಿ ನಿತ್ಯ ಟೀಕೆಗಳು, ಕಷ್ಟಗಳು, ಕಾರ್ಪಣ್ಯಗಳು ಇದ್ದೇ ಇರುತ್ತವೆ. ಸಮಸ್ಯೆಗಳನ್ನು ಬಗೆಹರಿಸಲು ಅಡಕುಗಳು, ತೊಡಕುಗಳು ಸಹಜ. ಇವೆಲ್ಲವನ್ನೂ ಎದುರಿಸಬೇಕು ಮತ್ತು ನಮ್ಮ ಕೆಲಸವನ್ನು ಮುಂದುವರಿಸಬೇಕು ಎಂದರು.
ಇದನ್ನೂ ಓದಿ: ಸಿಎಂ ಬಜೆಟ್ಗೆ ಸಜ್ಜಾದ ಹೊತ್ತಲ್ಲೇ ಡಿಕೆ ಶಿವಕುಮಾರ್ಗೆ ಅಸಮಾಧಾನ? ದೆಹಲೀಲಿ ದುಃಖ, ದುಮ್ಮಾನ ಚರ್ಚಿಸ್ತೀನೆಂದ ಡಿಸಿಎಂ
ಪ್ರತಿಯೊಂದು ದಿನವೂ ಹೊಸ ಆರಂಭ, ಸಂತೋಷದ ದಿನ, ಯಶಸ್ಸಿನ ದಿನ. ರಾಜಕೀಯ ಸವಾಲುಗಳ ನಡುವೆಯೂ ತಮ್ಮ ಕರ್ತವ್ಯ ಮತ್ತು ಜನರ ಸಮಸ್ಯೆಗಳನ್ನು ನಿವಾರಿಸುವ ಕಡೆಗೆ ತಮ್ಮ ಗಮನವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.