ಅಪಾಯಮಟ್ಟ ಹರಿಯುತ್ತಿದ್ದ ಪ್ರವಾಹದಲ್ಲಿ ಈಜುತ್ತಾ, ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ, ಕರ್ತವ್ಯ ಪ್ರಜ್ಞೆ ಮೆರೆದ ಪವರ್ ಮ್ಯಾನ್!
ಅಪಾಯ ಮಟ್ಟ ಮೀರಿ ಹರಿಯುವ ನದಿಯಲ್ಲಿ ಯಾರಾದ್ರೂ ಜೀವ ಒತ್ತೆ ಇಡ್ತಾರಾ? ಆದ್ರೆ ಇಲ್ಲೊಬ್ಬ ಪವರ್ ಮ್ಯಾನ್ ಜೀವದ ಹಂಗು ತೊರೆದು, ಉಕ್ಕಿ ಹರಿಯುವ ನದಿಯಲ್ಲಿ ಈಜಿ ದೊಡ್ಡ ಅನಾಹುತ ತಪ್ಪಿಸಿದ್ದಾನೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಈ ಪ್ರಸಂಗ ನಡೆದಿದೆ. ಮಲಪ್ರಭಾ ನದಿ ಉಕ್ಕಿ ಹರಿಯುತ್ತದೆ. ಹರಿವಿನ ಪ್ರಮಾಣ ಎಷ್ಟಿತ್ತೆಂದರೆ, ನದಿ ತುಂಬಿ ಸುತ್ತಲಿನ ಪ್ರದೇಶಗಳಲ್ಲಿಯೂ ನೀರು ಆವರಿಸಿಕೊಳ್ಳುತ್ತಿತ್ತು. ಈ ಸಂದರ್ಭದಲ್ಲಿ ಕೊಣ್ಣೂರ ಗ್ರಾಮಕ್ಕೆ ನೀರು ಪೂರೈಕೆಯ ಉದ್ದೇಶಕ್ಕೆ ವಿದ್ಯುತ್ ಸರಬರಾಜು ಮಾಡುವ ಟ್ರಾನ್ಸ್ ಫಾರ್ಮರ್ ಗಳು ಮುಳುಗುವ ಸಂದರ್ಭ ಎದುರಾಗಿತ್ತು. ಅಲ್ಲದೆ, ಈ ಸಂದರ್ಭದಲ್ಲಿ ಪ್ರಸ್ತುತ ಟ್ರಾನ್ಸಫರ್ಮರ್ ನ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಅನಿವಾರ್ಯತೆಯಿತ್ತು.
ತಕ್ಷಣವೇ ಕಾರ್ಯಪ್ರವೃತ್ತರಾದ ಈ ಭಾಗದ ಪವರ್ ಮ್ಯಾನ್ ಮಂಜುನಾಥ ಕುಂಬಾರ ಸುಮಾರು 30 ಅಡಿ ದೂರ ನೀರಿನಲ್ಲಿ ಈಜಿ ಸ್ಥಳಕ್ಕೆ ತಲುಪಿದ್ದಾರೆ. ಕೆಳಗೆ ನೆಲದಿಂದ ಒಂದಾಳು ನೀರು ತುಂಬಿತ್ತು. ಸೂಕ್ತ ಸಮಯದಲ್ಲಿ ಪ್ರಸ್ತುತ ಟ್ರಾನ್ಸಫರ್ಮರ್ ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹಿಂದಿರುಗಿದ್ದಾರೆ. ಇದರಿಂದ ಇದಕ್ಕೂ ಮುಂದಿನ ಟ್ರಾನ್ಸಫರ್ಮರ್ ಕಾರ್ಯನಿರ್ವಹಿಸಲು ಪ್ರಾರಂಭಿಸುವದರಿಂದ ನೀರು ಸರಬರಾಜಿನ ವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ಅನುವು ಮಾಡಿದ್ದಾರೆ. ಮಂಜುನಾಥರ ಈ ಕಾರ್ಯಕ್ಕೆ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಶ್ಲಾಘಿಸಿದ್ದಾರೆ.
ಕೂಡಲೇ ಈ ಟ್ರಾನ್ಸಫರ್ಮರ್ ನ ಸಂಪರ್ಕ ಕಡಿತಗೊಳಿಸದಿದ್ದರೆ, ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ತೊಂದರೆಯಾಗುವಂತಿತ್ತು. ಇದರ ಸಂಪರ್ಕ ಕಡಿತಗೊಳಿಸಿದಾಗ ಮುಂದಿನ ಟ್ರಾನ್ಸಫರ್ಮರ್ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ನೀರು ಸರಬರಾಜು ಮುಂದುವರೆಯುತ್ತದೆ. ಪ್ರತಿ ಬಾರಿ ಮಳೆ ಹೆಚ್ಚಾಗಿ ನದಿ ಉಕ್ಕಿ ಹರಿದಾಗಲೂ ಈ ಸಮಸ್ಯೆ ಎದುರಾಗುತ್ತದೆ. ಆದರೆ, ಸಾರ್ವಜನಿಕರಿಗೆ ಕುಡಿಯುವ ನೀರಿನ ಸರಬರಾಜಿಗೂ ತೊಂದರೆ ಆಗಬಾರದೆಂಬುದು ಇಲಾಖೆಯ ಕಳಕಳಿ. ಹೀಗಾಗಿ ಈ ಅಪಾಯವನ್ನು ಎದುರಿಸಲು ತಯಾರಾದೆ ಅಂತ ಕೆಇಬಿ ಪವರ್ ಮ್ಯಾನ್ ಮಂಜುನಾಥ ಕುಂಬಾರ ಟಿವಿ 9 ಡಿಜಿಟಲ್ ಗೆ ಹೇಳಿದ್ದಾರೆ.
Published On - 6:27 pm, Wed, 14 September 22