ಪ್ರಜ್ವಲ್ ರೇವಣ್ಣ ನಾಳೆ ಬೆಂಗಳೂರಿಗೆ ಬರುವುದು ಅನುಮಾನ? ಮತ್ತೊಂದು ಟಿಕೆಟ್ ಬುಕ್​

|

Updated on: May 02, 2024 | 10:28 AM

ಸಂಸದ ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತ ವಿದೇಶಕ್ಕೆ ಹಾರಿರುವ ಪ್ರಕರಣದ ಎ2 ಆರೋಪಿ ಪ್ರಜ್ವಲ್ ರೇವಣ್ಣ ಮೇ 3ರಂದು ರಾಜ್ಯಕ್ಕೆ ವಾಪಸ್​ ಮರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮೇ 15 ರ ಮಧ್ಯರಾತ್ರಿ ಬೆಂಗಳೂರಿಗೆ ಬರಲು ಮತ್ತೊಂದು ಟಿಕೆಟ್ ಬುಕ್ಕಿಂಗ್​ ಮಾಡಲಾಗಿದೆ. ಆ ಮೂಲಕ ಪ್ರಜ್ವಲ್ ರೇವಣ್ಣ ನಾಳೆ ಬೆಂಗಳೂರಿಗೆ ಬರುವುದು ಅನುಮಾನವೆನ್ನಲಾಗುತ್ತಿದೆ.

ಬೆಂಗಳೂರು, ಮೇ 2: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಪ್ರಕರಣ ದೇಶಾದ್ಯಂತ ಹಲ್ ಚಲ್ ಎಬ್ಬಿಸಿದೆ. ಪೆನ್​ಡ್ರೈವ್ ಪುರಾಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, SIT ತನಿಖೆ ಚುರುಕುಗೊಳಿಸಿದೆ. ಇದರ ಮಧ್ಯೆ ಮೇ 3ರಂದು ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಮರಳಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಮೇ 15 ರ ಮಧ್ಯರಾತ್ರಿ ಬೆಂಗಳೂರಿಗೆ ಬರಲು ಎರಡನೇ ಟಿಕೆಟ್ ಬುಕ್ಕಿಂಗ್ ಮಾಡಿದ್ದಾರೆ. ಆ ಮೂಲಕ ಪ್ರಜ್ವಲ್ ರೇವಣ್ಣ ನಾಳೆ ರಾಜ್ಯಕ್ಕೆ ಆಗಮಿಸುವುದು ಅನುಮಾನ ಎನ್ನಲಾಗುತ್ತಿದೆ.

ಮೇ 15ರಂದು ಮಧ್ಯರಾತ್ರಿ 2 ಗಂಟೆಗೆ ಲುಫ್ತಾನ್ಸಾ ವಿಮಾನದಲ್ಲಿ ಫ್ರಾಂಕ್​​ಫರ್ಟ್​ನಿಂದ ಬೆಂಗಳೂರಿಗೆ ಬರಲು ಟಿಕೆಟ್ ಬುಕ್ಕಿಂಗ್​ ಮಾಡಲಾಗಿದ್ದು, ಮೇ 16 ರ ಮುಂಜಾನೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ: ಮೇ 3 ರಂದು ಜರ್ಮನಿಯಿಂದ ಪ್ರಜ್ವಲ್​ ರೇವಣ್ಣ ರಾಜ್ಯಕ್ಕೆ ವಾಪಸ್​

ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಸಾವಿರಾರು ಅಶ್ಲೀಲ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್​ ಆದ ಬಳಿಕ ಪ್ರಜ್ವಲ್ ರೇವಣ್ಣ ಜರ್ಮನಿಗೆ ಹಾರಿದ್ದರು. ಬಳಿಕ ಸಿಎಂ ಸಿದ್ಧರಾಮಯ್ಯ ಸರ್ಕಾರ ಪ್ರಕರಣವನ್ನು ಎಸ್​ಐಟಿಗೆ ನೀಡಿತ್ತು. ಇತ್ತ ಎಸ್​ಐಟಿ ತಂಡ ಪ್ರಕರಣದ ತನಿಖೆ ಚುರುಕುಗೊಳಿಸುವ ಮೂಲಕ ನಿನ್ನೆ ಎಸ್​ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣಗೆ ತನಿಖೆ ಹಾಜರಾಗುವಂತೆ ನೊಟೀಸ್​ ನೀಡಿದ್ದರು.

ಎಸ್​ಐಟಿ ನೊಟೀಸ್​ ಬೆನ್ನಲ್ಲೇ ವಿಚಾರಣೆಗೆ ಹಾಜರಾಗಲು ಏಳು ದಿನ ಸಮಯ ಬೇಕು ಎಂದು ಪ್ರಜ್ವಲ್​ ರೇವಣ್ಣ ಪರ ವಕೀಲ ಜಿ. ಅರುಣ್ ಮೂಲಕ ಎಸ್​ಐಟಿ ಮುಖ್ಯಸ್ಥರಿಗೆ ನಿನ್ನೆ ಅರ್ಜಿ ಸಲ್ಲಿಸಿದ್ದರು. ಸಿಆರ್​ಪಿಸಿ 41(a) ಅಡಿ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ನೊಟೀಸ್ ನೀಡಿತ್ತು. ಅವರು ಖುದ್ದು ಹಾಜರಾಗಿ ಹೇಳಿಕೆ ನೀಡಲು ಏಳು ದಿನ ಸಮಯಾವಕಾಶ ನೀಡಿ ಎಂದು ಪತ್ರದ ಮೂಲಕ ಮನವಿ ಮಾಡಲಾಗಿತ್ತು.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಕೇಸ್: ಪ್ರಜ್ವಲ್​ ರೇವಣ್ಣ ಪ್ರತ್ಯಕ್ಷ, ಎಸ್​​ಐಟಿ ನೋಟಿಸ್​ ಬಗ್ಗೆ ಹೇಳಿದ್ದಿಷ್ಟು

ಇದರ ಮಧ್ಯೆ ಪ್ರಜ್ವಲ್ ರೇವಣ್ಣ ಸಾಮಾಜಿಕ ಜಾಲತಾಣಗಳಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದು, ಎಸ್​ಐಟಿ ನೋಟಿಸ್​ಗೆ ಮೊದಲ ಪ್ರತಿಕ್ರಿಯಿಸಿದ್ದಾರೆ. ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲ. ಆದ ಕಾರಣ ನಾನು ನನ್ನ ವಕೀಲರ ಮೂಲಕ C.I.D ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ ಎಂದು ಬರೆದುಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:04 am, Thu, 2 May 24